ಯಳಂದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಎ.ಎನ್. ಶಿವಕುಮಾರ್ ಮಾತನಾಡಿದರು. ಎಸ್.ಸಿದ್ಧಲಿಂಗಸ್ವಾಮಿ, ವೃಷಭೇಂದ್ರ, ಕೆ.ರಂಗಸ್ವಾಮಿ, ಶಿವಕುಮಾರಸ್ವಾಮಿ, ಬಿ.ಜಿ.ಮಹೇಶ್, ಸುಭಾಷ್, ಕುಮಾರ್ ಇದ್ದರು. 
ಚಾಮರಾಜನಗರ

30ಕ್ಕೆ ರೈತ ಸಂಘದಿಂದ ತಹಸೀಲ್ದಾರ್ ಕಚೇರಿ ಮುತ್ತಿಗೆ

ಯಳಂದೂರು: ಜೂ.30 ರಂದು ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಕಾರ್ಯದರ್ಶಿ ಎ.ಎನ್.ಶಿವಕುಮಾರ್ ಮಾಹಿತಿ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಯಳಂದೂರನ್ನು ಬರಪೀಡಿತ ತಾಲೂಕೆಂದು ಘೋಷಿಸಬೇಕು. ತಾಲೂಕಿನ ಎಲ್ಲ ಕೆರೆಗಳ ಹೂಳೆತ್ತಿಸಿ ಇದಕ್ಕೆ ಕಬಿನಿ ನಾಲೆಯಿಂದ ನೀರು ತುಂಬಿಸುವುದು, ಪಂಪ್‌ಸೆಟ್‌ಗಳಿಗೆ ನಿಯಮಿತವಾಗಿ ವಿದ್ಯುತ್ ಪೂರೈಕೆ, ಟಿಸಿಯನ್ನು ಶೀಘ್ರದಲ್ಲಿ ಕೊಡಿಸುವುದು, ತಾಲೂಕಿಗೆ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವುದು, ಬ್ಯಾಂಕಿನಲ್ಲಿ ಚಿನ್ನದ ಸಾಲಕ್ಕೆ ಬಡ್ಡಿ ಕಟ್ಟಿಸಿಕೊಂಡು ನವೀಕರಿಸುವುದಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ರೈತರ ಸಾಲ ಮನ್ನಾ ಮಾಡಬೇಕು. ತಾಲೂಕಿನ ಎಲ್ಲ ಪಶು ಆಸ್ಪತ್ರೆಗಳಿಗೆ ವೈದ್ಯರನ್ನು ಭರ್ತಿ ಮಾಡಬೇಕು. ಹೊಲ-ಗದ್ದೆಗಳ ರಸ್ತೆ ದುರಸ್ತಿಪಡಿಸುವುದು, ಜೂನ್‌ನಲ್ಲೇ ಕಬ್ಬು ಕಟಾವು ಮಾಡಬೇಕು, ಪ್ರತಿ ಟನ್ ಕಬ್ಬಿಗೆ 5 ಸಾವಿರ ರೂ.ಗೆ ಏರಿಸುವುದು, ಸರ್ಕಾರಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಿಗೆ ಚೀಟಿ ನೀಡುವ ಹಣವನ್ನು ಕಡಿಮೆ ಮಾಡಬೇಕು. ರಸಗೊಬ್ಬರ ದರ ಕಡಿಮೆ ಮಾಡಬೇಕು. ಪಶು ಆಹಾರದ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು ರೈತರು ಹಾಗೂ ಪ್ರಗತಿಪರ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ಸಂಘದ ತಾಲೂಕು ಅಧ್ಯಕ್ಷ ಎಸ್.ಸಿದ್ಧಲಿಂಗಸ್ವಾಮಿ, ಉಪಾಧ್ಯಕ್ಷ ವೃಷಭೇಂದ್ರ, ಕೆ.ರಂಗಸ್ವಾಮಿ, ಶಿವಕುಮಾರಸ್ವಾಮಿ, ಬಿ.ಜಿ.ಮಹೇಶ್, ಸುಭಾಷ್, ಕುಮಾರ್ ಇದ್ದರು.