ಮಲೆಮಹದೇಶ್ವರ ಬೆಟ್ಟದಲ್ಲಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು. ಚಂಗಡಿ ಕರಿಯಪ್ಪ, ಮಾದಪ್ಪ, ಕೆಂಪೇಗೌಡ, ಅಮೋಘ ಇತರರಿದ್ದರು. 
ಚಾಮರಾಜನಗರ

ಅರಣ್ಯ ಇಲಾಖೆ ವಿರುದ್ಧ ರೈತ ಸಂಘ ಆಕ್ರೋಶ

ಪ್ರಮುಖ ಮುಖ್ಯಾಂಶಗಳು

  • ಬಾಲಕನ ಮೇಲೆ ಚಿರತೆ ದಾಳಿ ಪ್ರಕರಣ ಖಂಡಿಸಿ ಪ್ರತಿಭಟನೆ
  • ಅರಣ್ಯ ಇಲಾಖೆಯ ನಿರ್ಲಕ್ಷ್ಯತೆಯ ವಿರುದ್ಧ ಘೋಷಣೆ
ಹನೂರು: ಬಾಲಕನ ಮೇಲೆ ಚಿರತೆ ದಾಳಿ ನಡೆಸಿರುವುದನ್ನು ಖಂಡಿಸಿ ಹಾಗೂ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಮಲೆಮಹದೇಶ್ವರ ಬೆಟ್ಟದಲ್ಲಿ ರೈತ ಸಂಘಟನೆಯ ವತಿಯಿಂದ ಪ್ರತಿಭಟನೆ ನಡೆಯಿತು.
ಮ.ಬೆಟ್ಟದ ಚೆಕ್‌ಪೋಸ್ಟ್ ಬಳಿ ಜಮಾಯಿಸಿದ ನೂರಾರು ರೈತರು ಅರಣ್ಯ ಇಲಾಖೆಯ ನಿರ್ಲಕ್ಷ್ಯತೆಯ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರೈತ ಸಂಘದ ಚಂಗಡಿ ಕರಿಯಪ್ಪ ಮಾತನಾಡಿ, ನಾಗಮಲೆಗೆ ತೆರಳಲು ಭಕ್ತರಿಂದ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ. ಆದರೆ ಯಾವುದೇ ಸುರಕ್ಷತೆ ಇಲ್ಲ. ಇದಕ್ಕೆ ಚಿರತೆ ದಾಳಿ ನಡೆಸಿ ಬಾಲಕನನ್ನು ಬಲಿ ಪಡೆದಿರುವುದೇ ಸಾಕ್ಷಿಯಾಗಿದೆ. ಆದ್ದರಿಂದ ಭಕ್ತರಿಗೆ ಅಗತ್ಯ ರಕ್ಷಣೆ ಒದಗಿಸಬೇಕು. ಇಂಡಿಗನತ್ತ ಗ್ರಾಮಕ್ಕೆ ಸಮರ್ಪಕ ರಸ್ತೆಯಿಲ್ಲದ ಪರಿಣಾಮ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದರೆ ಜನರು ಪಡುಬಾರದ ಕಷ್ಟ ಪಡಬೇಕಿದ್ದು, ರಸ್ತೆಯಾಗಬೇಕಿದೆ. ನಾಗಮಲೆ ಸೇರಿದಂತೆ ಇನ್ನು ಕೆಲವು ಕಡೆಗಳಲ್ಲಿ ಅರಣ್ಯ ಪ್ರದೇಶದೊಳಗೆ ದೇಗುಲಗಳಿದ್ದು, ಹಿಂದಿನಿಂದಲೂ ಭಕ್ತರು ತೆರಳಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಇತ್ತೀಚೆಗೆ ಇದಕ್ಕೆ ಕಡಿವಾಣ ಹಾಕುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸುವುದಕ್ಕೆ ಅವಕಾಶ ನೀಡಬೇಕು ಎಂದರು.
ಕಾಡು ಪ್ರಾಣಿಗಳು ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿರುವುದು ಇತ್ತೀಚೆಗೆ ಹೆಚ್ಚಾಗಿದೆ. ಗ್ರಾಮದ ಸಮೀಪವೇ ಆಗಮಿಸುತ್ತಿರುವುದರಿಂದ ಭಯ ಉಂಟು ಮಾಡುತ್ತಿವೆ. ಆದ್ದರಿಂದ ಕಾಡುಪ್ರಾಣಿಗಳಿಗೆ ಕಡಿವಾಣ ಹಾಕಬೇಕು. ಬೆಳೆ ನಷ್ಟಕ್ಕೆ ಇಲಾಖೆಯಿಂದ ಸೂಕ್ತ ಪರಿಹಾರ ನೀಡಬೇಕು. ರೆಸಾರ್ಟ್‌ಗಳನ್ನು ತೆರವುಗೊಳಿಸಬೇಕು. ಜನರಿಗೆ ತೊಂದರೆಯಾಗುತ್ತಿರುವ ಸಫಾರಿಯನ್ನು ಸ್ಥಗಿತಗೊಳಿಸಬೇಕು. ಇನ್ನು ನನೆಗುದಿಗೆ ಬಿದ್ದಿರುವ ಇಂಡಿಗನತ್ತ, ತುಳಸಿಕೆರೆ ಗ್ರಾಮಕ್ಕೆ ವಿದ್ಯುತ್ ಸೌಕರ್ಯವಾಗಬೇಕು. ಈ ಸಂಬಂಧ ಸಂಘಟನೆಯ ವತಿಯಿಂದ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಯಾವುದೇ ಕ್ರಮವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿ ತಿಳಿದು ಡಿಸಿಎಫ್ ಸುರೇಂದ್ರ ಅವರು ಸ್ಥಳಕ್ಕಾಗಮಿಸಿ ರೈತರ ಸಮಸ್ಯೆಯನ್ನು ಆಲಿಸಿ ಮಾತನಾಡಿ, ನಾಗಮಲೆ ರಸ್ತೆಯಲ್ಲಿ ನಡೆದ ಘಟನೆ ಹಿನ್ನೆಲೆ ಭಕ್ತರ ಸುರಕ್ಷತೆ ಸಂಬಂಧ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮವಹಿಸಲಾಗಿದೆ. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು, ಸದ್ಯದಲ್ಲಿಯೇ ರಸ್ತೆ ನಿರ್ಮಿಸಲಾಗುವುದು. ವಿದ್ಯುತ್ ಸೌಕರ್ಯ ನೀಡುವ ಸಂಬಂಧ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅನುಮೋದನೆಯಾಗಬೇಕಿದೆ. ಇನ್ನು ತೊಂದರೆ ನೀಡುತ್ತಿರುವ ಕಾಡುಪ್ರಾಣಿಗಳನ್ನು ಗುರುತಿಸಿ, ಸೆರೆ ಹಿಡಿದು ಬೇರೆಡೆ ರವಾನಿಸಲಾಗುವುದು. ಕಾಡು ಪ್ರಾಣಿಗಳಿಂದ ಮನುಷ್ಯರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಅಗತ್ಯ ಕ್ರಮವಹಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ಸ್ಥಳೀಯ ಸಿಬ್ಬಂದಿ ಗಮನಕ್ಕೆ ತನ್ನಿ. ಪರಿಹಾರವಾಗದಿದ್ದಲ್ಲಿ ನಮ್ಮ ಗಮನಕ್ಕೆ ತರುವಂತೆ ತಿಳಿಸಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು. ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಮಾದಪ್ಪ, ರೈತ ಮುಖಂಡರಾದ ಪುಟ್ಟಸ್ವಾಮಿ, ಕೆಂಪೇಗೌಡ, ಅಮೋಘ, ರಾಜು ಹಾಗೂ ಇನ್ನಿತರರು ಭಾಗವಹಿಸಿದ್ದರು.