ಗುಂಡ್ಲುಪೇಟೆ ಪಟ್ಟಣದ ಕೋಡಹಳ್ಳಿ ಸರ್ಕಲ್ ಸಮೀಪ ಕಪ್ಪು ಬಾವುಟ ಪ್ರದರ್ಶನ ಮಾಡಿದ ರೈತರನ್ನು ಪೊಲೀಸರು ವಶಕ್ಕೆ ಪಡೆದರು. 
ಚಾಮರಾಜನಗರ

ಕಪ್ಪು ಬಾವುಟ ಪ್ರದರ್ಶಿಸಲು ಮುಂದಾದ ರೈತರು ವಶಕ್ಕೆ

ಗುಂಡ್ಲುಪೇಟೆ: ತಾಲೂಕಿನ 110 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಪಟ್ಟಣಕ್ಕೆ ಬರುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿರುದ್ಧ ಕಪ್ಪುಬಾವುಟ ಪ್ರದರ್ಶನ ಮಾಡಲು ಮುಂದಾಗಿದ್ದ ರೈತ ಸಂಘದ ಕಾರ್ಯಕರ್ತರನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ.ಗುರುಪ್ರಸಾದ್, ಜಿಲ್ಲಾಧಕ್ಷ ಮಾಡ್ರಹಳ್ಳಿ ಮಹದೇವಪ್ಪ, ಉಪಾಧ್ಯಕ್ಷ ಕುಂದಕೆರೆ ಸಂಪತ್, ತಾಲೂಕು ಅಧ್ಯಕ್ಷ ಮಹೇಶ್ ನೇತೃತ್ವದಲ್ಲಿ ಕೋಡಹಳ್ಳಿ ಸರ್ಕಲ್ನಿಂದ ಮೆರವಣಿಗೆ ಹೊರಟ ರೈತರು ತಾಲೂಕಿನ ಕೆರೆಗಳನ್ನು ತುಂಬಿಸದೆ ಹೊಸ ಯೋಜನೆಯನ್ನು ಕೈಗೆತ್ತಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಜಿಲ್ಲೆಗೆ ಬಂದಿದ್ದ ಸಿದ್ದರಾಮಯ್ಯ ಅವರಿಗೆ ರೈತರು ಹಲವರು ಬಾರಿ ಮನವಿ ಕೊಟ್ಟಿದ್ದರೂ ಅವುಗಳನ್ನು ಬಿಸಾಡಿದ್ದರು. ಅಲ್ಲದೆ ಯಾವುದೇ ಮನವಿಗೂ ಸ್ಪಂದಿಸಿಲ್ಲ. ತಾಲೂಕಿನಲ್ಲಿ 475 ಕೋಟಿ ರೂ. ವೆಚ್ಚದಲ್ಲಿ 110 ಕೆರೆಗಳಿಗೆ ನೀರು ತುಂಬಿಸುವ ದೊಡ್ಡ ಯೋಜನೆಗೆ ಚಾಲನೆ ನೀಡಲು ಸ್ವತಃ ಮುಖ್ಯಮಂತ್ರಿ ಬರುತ್ತಿದ್ದರೂ ಶಾಸಕರು ರೈತರನ್ನು ಕನಿಷ್ಠ ವಿಶ್ವಾಸಕ್ಕೆ ಪಡೆಯುವ ಕೆಲಸ ಮಾಡಿಲ್ಲ. ಜಿಲ್ಲಾಡಳಿತ ರೈತರ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.]
ಮೆರವಣಿಗೆ ವೇಳೆ ಕಪ್ಪು ಬಾವುಟ ಪ್ರದರ್ಶನ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಸರ್ಕಲ್ ಇನ್‌ಸ್ಪೆಕ್ಟರ್ ಸಾಗರ್, ಸಬ್ ಇನ್‌ಸ್ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ವಶಕ್ಕೆ ಪಡೆದು ತೆರಕಣಾಂಬಿ ಪೊಲೀಸ್ ಠಾಣೆಗೆ ಕರೆದೊಯ್ದರು.