ಮಲೆಮಹದೇಶ್ವರ ಬೆಟ್ಟ ಸಮೀಪದ ಕಾಡೋಲ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾದ ವೃದ್ಧೆಯನ್ನು ಕುಟುಂಬಸ್ಥರು ಅರಣ್ಯ ಪ್ರದೇಶದ ಹಾದಿಯಲ್ಲಿ ಡೋಲಿಯಲ್ಲಿ ಹೊತ್ತು ಸಾಗಿದರು.  
ಚಾಮರಾಜನಗರ

ರೋಗಿಯನ್ನು ಡೋಲಿಯಲ್ಲಿ ಹೊತ್ತು ಸಾಗಿದ ಕುಟುಂಬಸ್ಥರು

ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಕಾಡೋಲ ಗ್ರಾಮದಲ್ಲಿ ಶನಿವಾರ ಸರಿಯಾದ ರಸ್ತೆ ಇಲ್ಲದೆ, ವಾಹನ ಸೌಕರ್ಯವಿಲ್ಲದ ಪರಿಣಾಮ ಅನಾರೋಗ್ಯಕ್ಕೆ ತುತ್ತಾದ ವೃದ್ಧಯೊಬ್ಬರನ್ನು ಕುಟುಂಬಸ್ಥರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ.
ಮ.ಬೆಟ್ಟದ ಸಮೀಪದ ಕಾಡೋಲ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಮೂರ್ಛೆರೋಗಕ್ಕೆ ತುತ್ತಾದ ದುಂಡಮ್ಮ ಎಂಬ ವೃದ್ಧೆಯನ್ನು ಕುಟುಂಬಸ್ಥರು ಡೋಲಿಯನ್ನು ಹೊತ್ತುಕೊಂಡು 2 ಕಿ.ಮೀ ಅರಣ್ಯ ಪ್ರದೇಶದ ದಾರಿಯಲ್ಲಿ ಹರಸಾಹಸಪಟ್ಟು ಸಾಗಿದರು. ಬಳಿಕ ಖಾಸಗಿ ವಾಹನದ ಮೂಲಕ ಮ.ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರೂ, ಇಲ್ಲಿಯೂ ತುರ್ತು ವಾಹನ ಸೌಕರ್ಯ ಸಿಗಲಿಲ್ಲ.
ಇದರಿಂದ ಬೇಸತ್ತ ಕುಟುಂಬಸ್ಥರು ಖಾಸಗಿ ತುರ್ತು ವಾಹನದ ಮೂಲಕ ವೃದ್ಧೆಯನ್ನು ತಮಿಳುನಾಡಿನ ಮೆಟ್ಟೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ದೃಶ್ಯವನ್ನು ಗ್ರಾಮಸ್ಥರೊಬ್ಬರೂ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಎಲ್ಲರ ಮನ ಕಲಕುವಂತಿದೆ.
ಮ.ಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ 18 ಗ್ರಾಮಗಳಿದ್ದು, ಹಲವು ದಶಕದಿಂದಲೂ ಈ ಗ್ರಾಮಗಳಿಗೆ ಸಮರ್ಪಕ ರಸ್ತೆ ಹಾಗೂ ವಾಹನ ಸೌಕರ್ಯ ಇಲ್ಲ. ಇದರ ಪರಿಣಾಮ ಇಲ್ಲಿನ ಜನರು ಅನಾರೋಗ್ಯಕ್ಕೆ ತುತ್ತಾದರೆ ಹಾಗೂ ಹೆರಿಗೆ ನೋವು ಕಾಣಿಸಿಕೊಂಡರೆ ಡೋಲಿಯನ್ನು ಹೊತ್ತುಕೊಂಡು ಅರಣ್ಯ ಪ್ರದೇಶದ ಕಲ್ಲು ಮುಳ್ಳಿನ ಹಾದಿಯಲ್ಲಿ ಆಸ್ಪತ್ರೆಗೆ ಸಾಗಿಸಬೇಕಾಗಿದೆ. ರಸ್ತೆ ಹಾಗೂ ವಾಹನ ಸೌಕರ್ಯವನ್ನು ಒದಗಿಸುವಂತೆ ಜನಬಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಇಲ್ಲಿನ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದಾರೆ. ಜತೆಗೆ ಪ್ರತಿಭಟನೆಯೂ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ.
ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಸಮಸ್ಯೆಗೆ ಮುಕ್ತಿ ದೊರಕಿಸಿಲ್ಲ. ಇನ್ನಾದರೂ ಇತ್ತ ಗಮನಹರಿಸಿ ಕಾಡಂಚಿನ ಗ್ರಾಮಗಳಿಗೆ ರಸ್ತೆ ಹಾಗೂ ವಾಹನ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.