ಯಳಂದೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಫಲಾನುಭವಿಯೊಬ್ಬರಿಗೆ ಮಾದರಿ ಮನೆಕೀಲಿಯನ್ನು ಹಸ್ತಾಂತರಿಸಲಾಯಿತು. ಡಾ.ಸುಜಾತಾ, ಭೀಮಪ್ಪ, ಆರತಿ, ಆನಂದ್ ಇದ್ದರು.  
ಚಾಮರಾಜನಗರ

ಸಮಾಜದಲ್ಲಿ ಅನಿಷ್ಟ ಪದ್ಧತಿಗಳು ಇನ್ನೂ ಜೀವಂತ

ಕಿರಣ್ ಗೌಡ.ಜಿ

ಪ್ರಮುಖ ಮುಖ್ಯಾಂಶಗಳು

  • ಸಿವಿಲ್ ನ್ಯಾಯಾಧೀಶೆ ಎಚ್.ಸುಜಾತಾ ಬೇಸರ
ಯಳಂದೂರು: ವರದಕ್ಷಿಣೆ, ಬಾಲ್ಯ ವಿವಾಹದಂತಹ ಪದ್ಧತಿಗಳು ಇಂದಿಗೂ ಜೀವಂತವಾಗಿದ್ದು, ಇದನ್ನು ತಡೆಗಟ್ಟಲು ಅನೇಕ ಕಾನೂನುಗಳಿದ್ದರೂ ಇಂತಹ ಘಟನೆಗಳು ಘಟಿಸುತ್ತಿರುವುದು ವಿಷಾದನೀಯ ಎಂದು ಸಿವಿಲ್ ನ್ಯಾಯಾಧೀಶೆ ಎಚ್.ಸುಜಾತಾ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಮಾತನಾಡಿದರು. ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು. ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಬಾಲ್ಯ ವಿವಾಹ ಪದ್ಧತಿ ಇಂದಿಗೂ ಕೂಡ ಜೀವಂತವಾಗಿದ್ದು, ಅಲ್ಲಲ್ಲಿ ಕೆಲ ಪ್ರಕರಣಗಳು ದಾಖಲಾಗುತ್ತವೆ. ಇದನ್ನು ಸಂಪೂರ್ಣವಾಗಿ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ತನುಜಾ ಮಾತನಾಡಿ, ವಿಶ್ವದಲ್ಲಿ ಹೆಣ್ಣು ಮಕ್ಕಳಿಗೆ ಸ್ತನ ಕ್ಯಾನ್ಸರ್ ಹೆಚ್ಚು ಕಾಡುತ್ತಿದೆ. ಇದಕ್ಕೆ ಬದಲಾದ ಜೀವನ ಶೈಲಿ, ಆಹಾರ ಪದ್ಧತಿ, ಮಾದಕ ವಸ್ತುಗಳ ಸೇವನೆ, ಆಲಸ್ಯ ಪ್ರಮುಖ ಕಾರಣ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಿಕೆ ಸುಲಭವಾಗಿದ್ದು, ಆರಂಭದಲ್ಲೇ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು ಎಂದರು.
ಗರ್ಭಕಂಠದ ಕ್ಯಾನ್ಸರ್ ಕೂಡ ಮಹಿಳೆಯರನ್ನು ಕಾಡುತ್ತಿದೆ. ಇದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ 14 ರಿಂದ 15 ವರ್ಷ ವಯೋಮಾನದ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆಯನ್ನು ನೀಡಲು ನಿರ್ಧರಿಸಿದ್ದು, ಅತೀ ಶೀಘ್ರದಲ್ಲೇ ಇದು ಆರಂಭಗೊಳ್ಳಲಿದೆ. ಹಾಗಾಗಿ ಪಾಲಕರು ಯಾವುದೇ ಅನುಮಾನವಿಲ್ಲದೆ ತಮ್ಮ ಹೆಣ್ಣು ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಬೇಕು. ಇದನ್ನು ನೀಡಿದ್ದಲ್ಲಿ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದು. ಈಗಾಗಲೇ 180 ದೇಶಗಳಲ್ಲಿ ಇದನ್ನು ನೀಡಲಾಗುತ್ತಿದೆ ಎಂದರು.
ವಾತ್ಸಲ್ಯಮನೆ ಯೋಜನೆಯಡಿ ಚುಂಗಡಿಪುರ ಗ್ರಾಮದ ಮಂಚಯ್ಯ ಅವರಿಗೆ ಸಂಘದ ವತಿಯಿಂದ ನಿರ್ಮಿಸಿರುವ ಮಾದರಿ ಮನೆಯನ್ನು ಹಸ್ತಾಂತರಿಸಲಾಯಿತು. ಜಿಲ್ಲಾ ಯೋಜನಾಧಿಕಾರಿ ಆರತಿ, ಪಿಎಲ್‌ಡಿ ಬ್ಯಾಂಕಿನ ಉಪಾಧ್ಯಕ್ಷ ಹಾಗೂ ವಾಲ್ಮೀಕ ಭವನದ ಆಡಳಿತ ಸದಸ್ಯ ವೈ.ಎಸ್.ಭೀಮಪ್ಪ, ತಾಲೂಕು ಯೋಜನಾಧಿಕಾರಿ ಆನಂದ್ ಇತರರು ಇದ್ದರು.