ಚಾಮರಾಜನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಎಂ.ಮುತ್ತುರಾಜ್ ಉದ್ಘಾಟಿಸಿದರು. ಡಾ.ಎಸ್.ಚಿದಂಬರ, ಡಾ.ದರ್ಶನ್, ಡಾ.ವಾಸೀಮ್, ಶಶಿಧರ್, ಡಾ.ಅಂಕಪ್ಪ ಇನ್ನಿತರರಿದ್ದರು.
- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ಸಲಹೆ
- ತಂಬಾಕು ಉತ್ಪನ್ನಗಳ ಸೇವನೆ ಕುರಿತು ತರಬೇತಿ ಕಾರ್ಯಾಗಾರ
- ತಂಬಾಕು ದುಷ್ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಅಗತ್ಯ
ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಎನ್‌ಪೋರ್ಸ್ ಮೆಂಟ್ ವಿಭಾಗದ ವತಿಯಿಂದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಹಾಗೂ ಕೋಟ್ಟಾ-2003ರ ಕಾಯ್ದೆ ಕುರಿತು ಮಂಗಳವಾರ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋಟ್ಪಾ ಕಾಯ್ದೆ ಉಲ್ಲಂಘನೆಗಳ ಮೇಲ್ವಿಚಾರಣೆ ಬಗ್ಗೆ ಪೊಲೀಸ್ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು, ಈ ಬಗ್ಗೆ ಪ್ರತಿ ದಿನ ಮಾಹಿತಿ ಪಡೆಯಲಾಗುತ್ತಿದೆ. ಉತ್ತಮ ಸಮಾಜ ನಿರ್ಮಾಣ ಮಾಡಲು ಹಾಗೂ ಸದೃಢ ದೇಶ ಕಟ್ಟಲು ತಂಬಾಕು ತ್ಯಜಿಸುವುದು ಅನಿವಾರ್ಯವಾಗಿದೆ. ಅಲ್ಲದೇ ತಂಬಾಕು ದುಷ್ಪರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಅಗತ್ಯವಾಗಿದೆ. ಮೊದಲು ನಾವು ತಂಬಾಕು ತ್ಯಜಿಸಲು ಸಿದ್ಧ ಹಾಗೂ ಬದ್ಧರಿರಬೇಕು. ಬಳಿಕ ಈ ಬಗ್ಗೆ ಇತರರಿಗೂ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಚಿದಂಬರ ಮಾತನಾಡಿ,
ಬೀಡಿ, ಸಿಗರೇಟನ್ನು ಸುಟ್ಟಾಗ ಸುಮಾರು 4800 ರಾಸಾಯನಿಕಗಳು ಹೊರ ಬರುತ್ತದೆ. ಅದರಲ್ಲಿ ಹೆಚ್ಚಿನ ರಾಸಾಯನಿಕಗಳು ಕ್ಯಾನ್ಸರ್ ಖಾಯಿಲೆಗಳನ್ನು ತರುವ ಅಂಶಗಳನ್ನು ಒಳಗೊಂಡಿರುತ್ತದೆ. ನಮ್ಮ ದೇಹದಲ್ಲಿ ತಲೆ ಕೂದಲು ಹಾಗೂ ಕೈ ಕಾಲಿನ ಉಗುರುಗಳು ಬಿಟ್ಟರೆ ಇನ್ನೆಲ್ಲಾ ಅಂಗಗಳನ್ನು ತಲುಪುತ್ತಿದೆ. ಇದರಿಂದಾಗಿ ಪ್ರತಿ ವರ್ಷವು 10 ಲಕ್ಷಕ್ಕೂ ಹೆಚ್ಚು ಜನ ನಿಧನರಾಗುತ್ತಿದ್ದಾರೆ. ಪ್ರಮುಖವಾಗಿ ಹೆಚ್ಚಿನವರು ಪರೋಕ್ಷ ಧೂಮಪಾನಕ್ಕೆ ಒಳಗಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಭೋಧನ ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಡಾ.ದರ್ಶನ್, ಡಾ.ವಾಸೀಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್, ಜಿಲ್ಲಾ ಎನ್‌ಪೋರ್ಸ್ ಮೆಂಟ್ ಅಧಿಕಾರಿ ಡಾ.ಅಂಕಪ್ಪ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯಕ್, ಜಿಲ್ಲಾ ಸಲಹೆಗಾರರಾದ ಪ್ರಶಾಂತ್ ಇತರರು ಹಾಜರಿದ್ದರು.