ಶಾಸಕ ಎ.ಆರ್.ಕೃಷ್ಣಮೂರ್ತಿ 
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪಿಸಿ

ಕೊಳ್ಳೇಗಾಲ: ರೇಷ್ಮೆ ಕೃಷಿಗೆ ಹೆಸರಾಗಿದ್ದ ಕೊಳ್ಳೇಗಾಲದ ರೇಷ್ಮೆ ಬ್ರಾೃಂಡ್‌ಗೆ ಕಾಯಕಲ್ಪ ನೀಡಲು ಸಿಲ್ಕ್ ಪಾರ್ಕ್ ಸ್ಥಾಪಿಸಬೇಕು. ಈ ಮೂಲಕ ಕೊಳ್ಳೇಗಾಲದ ರೇಷ್ಮೆಯ ಗತ ವೈಭವವನ್ನು ಮರುಕಳಿಸಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ, ಕ್ಷೇತ್ರದ ಹಂಪಾಪುರದಲ್ಲಿರುವ 13.18 ಎಕರೆ ಪ್ರದೇಶದಲ್ಲಿ ಸ್ಥಗಿತಗೊಂಡಿರುವ ಸರ್ಕಾರಿ ರೇಷ್ಮೆ ಕಾರ್ಖಾನೆಯ ಹಳೆಯ ಹಾಗೂ ದುರಸ್ತಿಗೆ ಒಳಪಟ್ಟಿರುವ 14 ಕಟ್ಟಡಗಳ ನವೀಕರಣ ಹಾಗೂ ಹೊಸದಾಗಿ ಅಗತ್ಯ ಕಟ್ಟಡಗಳ ನಿರ್ಮಾಣ ಮೂಲಕ ಸಿಲ್ಕ್ ಪಾರ್ಕ್ ಸ್ಥಾಪಿಸಬೇಕಿದೆ.
2026-2027ನೇ ಆಯ್ಯವ್ಯಯದಲ್ಲಿ ರಾಮನಗರ, ಶಿಡ್ಲಘಟ್ಟ, ಹಾವೇರಿ, ತಂಡಾವಪುರ, ಕುಲಬುರ್ಗಿಯಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಘೋಷಣೆಯಾಗಿದೆ. ಸದರಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ವಿಚಾರವಾಗಿ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ಉತ್ತರಿಸಿ ಕೊಳ್ಳೇಗಾಲದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆಗೆ ಅಗತ್ಯ ಅನುದಾನ ಒದಗಿಸಿದರೆ ಕ್ರಮವಹಿಸಲಾಗುವುದು ತಿಳಿಸಿದ್ದಾರೆ. ಈ ಹಿಂದೆ ಹಳೇಮೈಸೂರು ಭಾಗದ ಕೊಳ್ಳೇಗಾಲ ತಾಲೂಕು ಕೈಮಗ್ಗ ರೇಷ್ಮೆ ಸೀರೆಗೆ ಹೆಸರುವಾಸಿಯಾಗಿತ್ತು. ರೇಷ್ಮೇ ನಗರಿ ಎಂದೇ ಕೊಳ್ಳೇಗಾಲ ಪ್ರಸಿದ್ಧಿ ಯಾಗಿದೆ. ಮುಡಿಗುಂಡ, ಹಂಪಾಪುರ, ಮಾಂಬಳ್ಳಿ, ಸಂತೇಮರಳ್ಳಿಯಲ್ಲಿ ಸ್ವತಂತ್ರ ಪೂರ್ವದಿಂದಲೂ ರೇಷ್ಮೆ ಕಾರ್ಖಾನೆ ಚಾಲ್ತಿಯಲ್ಲಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೀಲರ್ಸ್‌ಗಳನ್ನು ಹೊಂದಿದೆ. ಮಿಶ್ರ ತಳಿ ಬೇಸಾಯವನ್ನು ಹೆಚ್ಚಾಗಿ ಮಾಡಲಾಗುತ್ತಿದೆ. ಮುಡಿಗುಂಡ ರೇಷ್ಮೆ ಮಾರುಕಟ್ಟೆಯಲ್ಲಿ ರೈತರು ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳುತ್ತಿದ್ದಾರೆ. 1 ಕೆಜಿ ಗೂಡಿಗೆ 816 ರೂ. ರೈತರಿಗೆ ದೂರೆಯುತ್ತಿದ್ದು, ಈ ಮೂಲಕ ದಾಖಲೆ ನಿರ್ಮಾಣವಾಗಿದೆ. 1 ದಿನಕ್ಕೆ 14 ಸಾವಿರ ಕೆಜಿ ರೇಷ್ಮೆಗೂಡು ವಹಿವಾಟು ನಡೆಯುತ್ತಿದೆ. ರೇಷ್ಮೆ ಕೃಷಿಗೆ ಹೆಸರಾಗಿದ್ದ ಕೊಳ್ಳೇಗಾಲದ ರೇಷ್ಮೆ ಬ್ರಾೃಂಡ್ ಕಾಯಕಲ್ಪ ಕೊಡುವ ಮೂಲಕ ರೇಷ್ಮೆ ಗತ ವೈಭವವನ್ನು ಮರಳಿ ಸ್ಥಾಪಿಸುವ ಅವಶ್ಯಕತೆ ಇದೆ. ರೇಷ್ಮೆ ಉದ್ಯಮವನ್ನು ಆಧುನಿಕಗೊಳಿಸಲು ಬೆಳೆಗಾರರಿಗೆ ನೆರವಾಗಲು ರೇಷ್ಮೆ ಉತ್ಪಾದನೆಗೆ ಮೌಲ್ಯವರ್ಧನೆ ತರಲು ಎಲ್ಲ ರೀತಿಯ ಮೌಲಸೌಕರ್ಯ ಇರುವ ಸಿಲ್ಕ್ ಪಾರ್ಕ್ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ರಿಲರ್ಸ್‌ಗಳು ರೇಷ್ಮೆ ಕಸುಬನ್ನು ಮಾಡಿಕೊಂಡಿದ್ದು. ಇವರಿಗೆ ಆಧುನಿಕ ತಂತ್ರಜ್ಞಾನ ತರಬೇತಿ, ಗುಣಮಟ್ಟ ಸುಧಾರಣೆ, ಮಾರುಕಟ್ಟೆ ಸಂಪರ್ಕ ಲಭ್ಯವಾದರೆ ಆದಾಯ, ಉದ್ಯಮ ಶೀಲತೆ ಅಭಿವೃದ್ಧಿಯಾಗಲಿದೆ. 500 ರಿಂದ 600 ಜನರಿಗೆ ನೇರ ಉದ್ಯೋಗ, 1,500 ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿ ಯಾಗುವ ನಿರೀಕ್ಷೆ ಇದೆ. ಎಸ್‌ಸಿಪಿ, ಟಿಎಸ್‌ಎಸ್‌ಪಿ ಕಾಂಪೋನೆಂಟ್ ಕಾರ್ಯಕ್ರಮದಲ್ಲಿ ಅನುದಾನ ಒದಗಿಸುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರು ನನಗೆ ಭರವಸೆ ನೀಡಿದ್ದಾರೆ. ಹಾಗಾಗಿ ಆದ್ಯತೆ ಮೇಲೆ ಸಿಲ್ಕ್ ಪಾರ್ಕ್ ನಿರ್ಮಾಣಕ್ಕೆ ರೇಷ್ಮೆ ಸಚಿವರು ಅನುದಾನ ನೀಡಬೇಕೆಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ರೇಷ್ಮೆ ಮತ್ತು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಚಾಮರಾಜನಗರ ಜಿಲ್ಲೆ ಅತಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದ ಪ್ರದೇಶವಾಗಿದೆ. ಇತೀಚಿನ ದಿನಗಳಲ್ಲಿ ಸ್ವಲ್ಪ ಕಡಿಮೆಯಾಗಿದೆ. ರೇಷ್ಮೆ ಕಾರ್ಖಾನೆ ಕಟ್ಟಡಗಳು ಪಾಳು ಬಿದ್ದಿವೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂಬುದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಚಿಂತನೆಯಾಗಿದೆ. ಈಗಾಗಲೇ ಬಜೆಟ್‌ನಲ್ಲಿ 5 ಜಿಲ್ಲೆಗಳಿಗೆ ಸಿಲ್ಕ್ ಪಾರ್ಕ್ ಘೋಷಣೆಯಾಗಿದೆ. ಆದರೂ ಕೊಳ್ಳೇಗಾಲದ ಸಿಲ್ಕ್ ಪಾರ್ಕ್ ಯೋಜನೆಗೆ ಪ್ರಯತ್ನಿಸುತ್ತೇನೆ. ಸಮಾಜ ಕಲ್ಯಾಣ ವತಿಯಿಂದ ಅನುದಾನ ನೀಡುವ ಭರವಸೆ ಇದೆ. ಅನುದಾನ ಬಿಡುಗಡೆಯಾದರೆ ಈ ವರ್ಷವೇ ಅನುಷ್ಠಾನಗೊಳಿಸುವ ಕೆಲಸ ಮಾಡಲಾಗುತ್ತದೆ ಎಂದರು.