ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಕ್ಷೇತ್ರ
- ಅರಣ್ಯ ಇಲಾಖೆಯಿಂದ ಚಿಂತನೆ
- ಸ್ಥಳೀಯರಿಗೆ ಜೀಪ್ ಚಾಲನೆ ಕೆಲ್ಸ, ಗೈಡ್ಸ್‌ಗಳ ನಿಯೋಜನೆ
ಚಾಮರಾಜನಗರ: ಅಸಂಖ್ಯಾತ ಭಕ್ತರ ಪಾಲಿನ ಆರಾಧ್ಯ ದೈವವಾಗಿರುವ ಮಾಯ್ಕರ ಮಾದಪ್ಪನ 77 ಮಲೆಗಳಲ್ಲಿ ಒಂದಾಗಿರುವ ನಾಗಮಲೆ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸ್ಥಳೀಯರಿಗೆ ಉದ್ಯೋಗ, ಭಕ್ತರಿಗೆ ರಕ್ಷಣೆ ಕೊಟ್ಟು ತೆರವು ಮಾಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಕ್ಷೇತ್ರ ಮಾದಪ್ಪ ತಪಸ್ಸು ಮತ್ತು ಪವಾಡ ಮಾಡಿದ ಪುಣ್ಯಸ್ಥಗಳಲ್ಲೊಂದು. ನಡುಮಲೆಯ ಸನ್ನಿಧಿಗೆ ಬರುವ ಭಕ್ತರು ಬೆಟ್ಟಗುಡ್ಡಗಳ ಹಾದಿಯಲ್ಲಿರುವ ನಾಗಮಲೆಗೆ ಕಾಲ್ನಡಿಗೆಯಲ್ಲಿ ಬರುತ್ತಾರೆ. ಈ ರೀತಿ ಮೇನಲ್ಲಿ ಪಾಲಕರೊಂದಿಗೆ ಬಂದಿದ್ದ ಬೆಂಗಳೂರಿನ ಬಾಲಕ ಹರ್ಷಿತ್(10) ಚಿರತೆ ದಾಳಿಗೆ ಬಲಿಯಾದ. ಅರಣ್ಯ ಇಲಾಖೆ ಭಕ್ತರ ಸುರಕ್ಷತೆ ದೃಷ್ಟಿಯಿಂದ ನಾಗಮಲೆ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧ ವಿಧಿಸಿತು. ಇದೀಗ ಮರಳಿ ನಾಗಮಲೆಗೆ ಪ್ರವೇಶ ಕಲ್ಪಿಸಲು ಭಕ್ತರಿಗೆ ಸುರಕ್ಷಣೆ ನೀಡುವ ಹೊಣೆಗಾರಿಕೆಯನ್ನು ಸ್ಥಳೀಯರಿಗೆ ಕೊಟ್ಟು ಇದರಿಂದ ಸ್ಥಳೀಯರಿಗೆ ಉದ್ಯೋಗವೂ ದೊರೆಯುವಂತೆ ಮಾಡಲು ಯೋಜನೆ ರೂಪಿಸಿದೆ.
ಚಾಲಕ, ಗೈಡ್ಸ್‌ಗಳಿಗೆ ಉದ್ಯೋಗ: ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಸುಮಾರು 13 ಕಿ.ಮೀ ದೂರವಿದೆ. ಕಲ್ಲು, ಮುಳ್ಳಿನ ದುರ್ಗಮ ಹಾದಿಯಲ್ಲಿರುವ ಕ್ಷೇತ್ರಕ್ಕೆ ಸಾಮಾನ್ಯ ವಾಹನಗಳಲ್ಲಿ ಸಂಚಾರ ಮಾಡಲಾಗದು. ಇಂಡಿಗನತ್ತ ಗ್ರಾಮದವರೆಗೆ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು.
ಇಲ್ಲಿಂದ ಕಾಲ್ನಡಿಗೆಯಲ್ಲಿ ನಾಗಮಲೆ ಬೆಟ್ಟ ಹತ್ತಬೇಕು. ಈ ಹಿಂದೆ ಸ್ಥಳೀಯರು ಜೀಪ್‌ಗಳಲ್ಲಿ ಭಕ್ತರನ್ನು ಕರೆದುಕೊಂಡು ಬರುವ, ಹೋಗುವ ಉದ್ಯೋಗ ಮಾಡುತ್ತಿದ್ದರು. ಸುರಕ್ಷತೆ ಇಲ್ಲವೆಂದು ಇದಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಜೀಪ್ ಚಾಲಕರು ಕೆಲಸ ಕಳೆದುಕೊಂಡಿದ್ದರು. ಆದರೆ ಮುಂದಿನ ದಿನಗಳಲ್ಲಿ ಜೀಪ್‌ಗಳಲ್ಲಿ ಭಕ್ತರನ್ನು ಕರೆದುಕೊಂಡು ಹೋಗಲು ಅರಣ್ಯ ಇಲಾಖೆ ಅನುಮತಿ ನೀಡಲು ನಿರ್ಧರಿಸಿದೆ. ಹಳದಿ ಬಣ್ಣದ ಬೋರ್ಡ್ ಮತ್ತು ದಾಖಳೆಗಳಿರುವ ಜೀಪ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯವಾಗಿ ಉದ್ಯೋಗ ದೊರೆಯುವಂತೆ ಮಾಡಲು ತೀರ್ಮಾನ ಮಾಡಿದೆ. ಹಳೆಯೂರು ಗೇಟ್‌ನಿಂದ ಇಂಡಿಗನತ್ತದವರೆಗೆ ಭಕ್ತರು ಜೀಪ್‌ನಲ್ಲಿ ಬಂದ ನಂತರ ಇಲ್ಲಿಂದ ನಾಗಮಲೆಗೆ ಹೋಗಲು ಸ್ಥಳೀಯ ಗೈಡ್ಸ್‌ಗಳನ್ನು ನಿಯೋಜನೆ ಮಾಡಲಾಗುತ್ತದೆ. ಇವರು ಭಕ್ತರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಮರಳಿ ಕರೆದುಕೊಂಡು ಬರುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಇಲ್ಲಿನ ಜನರಿಗೆ ವನ್ಯಜೀವಿಗಳ ಚಲನವಲನ, ಸಂಚಾರದ ಪ್ರವೇಶಗಳು ಚೆನ್ನಾಗಿ ಗೊತ್ತಿದೆ. ಇದರಿಂದ ಭಕ್ತರಿಗೆ ಸೂಕ್ತ ರಕ್ಷಣೆಯೂ ದೊರೆಯಲಿದೆ.
ಪರಿಸರ ಅಭಿವೃದ್ಧಿ ಸಮಿತಿಗೆ ಜವಾಬ್ದಾರಿ:
ಇಂಡಿಗನತ್ತ ಗ್ರಾಮದಲ್ಲಿ ಪರಿಸರ ಅಭಿವೃದ್ಧಿ ಸಮಿತಿಯನ್ನು ಪುನರ್ ರಚನೆ ಮಾಡಿ ಇದರ ಮೂಲಕ ಜೀಪ್ ಚಾಲಕರು, ಗೈಡ್ಸ್‌ಗಳಿಗೆ ಉದ್ಯೋಗ ನೀಡಲು ಮಲೆ ಮಹದೇಶ್ವರ ವನ್ಯಜೀವಿಧಾಮ ಅರಣ್ಯ ಇಲಾಖೆ ಸಭೆ ಮಾಡಿದೆ. ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪರಿಸರ ಅಭಿವೃದ್ಧಿ ಸಮಿತಿ ರಚನೆ ಮಾಡುವುದು, ಭಕ್ತರನ್ನು ಜೀಪ್ ಕರೆದುಕೊಂಡು ಬರುವುದು, ಹೋಗುವುದಕ್ಕೆ ದರ ನಿಗದಿ ಮಾಡಿ ಟೋಕನ್ ಕೊಡುವುದು, ಇದರಿಂದ ಬರುವ ಹಣವನ್ನು ಅರಣ್ಯ ಇಲಾಖೆ ಮತ್ತು ನಿಯಮಾನುಸಾರ ಪರಿಸರ ಅಭಿವೃದ್ಧಿ ಸಮಿತಿಗೂ ನೀಡುವುದರ ಬಗ್ಗೆ ಚರ್ಚೆ ಮಾಡಲಾಗಿದೆ. ಜೀಪ್ ಚಾಲಕರು, ಗೈಡ್ಸ್‌ಗಳಿಗೆ ಸಂಬಳ ಕೊಟ್ಟು ಸ್ಥಳೀಯರಿಗೆ ಉದ್ಯೋಗ, ಗ್ರಾಮದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಮಹತ್ವದ ಅವಕಾಶದ ಬಗ್ಗೆ ಮಾತನಾಡಲಾಗಿದೆ. ಈ ರೀತಿ ಮಾಡಿದರೆ ಜೀಪ್‌ಗಳ ಸಂಚಾರಕ್ಕೆ ನಿರ್ಬಂಧ ಬಿದ್ದ ಮೇಲೆ ಕೂಲಿ ಅರಸಿ ಬೇರೆ ರಾಜ್ಯ, ಊರುಗಳಿಗೆ ವಲಸೆ ಹೋಗಿದ್ದವರು ವಾಪಸ್ ಊರಿಗೆ ಬರಲು ಸಾಧ್ಯವಾಗುತ್ತದೆ.
ಪ್ಲಾಸ್ಟಿಕ್ ಸಂಗ್ರಹಕ್ಕೆ ಸ್ಥಳ ನಿಗದಿ:
ನಾಗಮಲೆಗೆ ಬರುವ ಭಕ್ತರ ಬಳಿ ಇರುವ ಪ್ಲಾಸ್ಟಿಕ್ ಬಾಟಲ್, ಕವರ್‌ಗಳನ್ನು ವಶ ಪಡಿಸಿಕೊಳ್ಳಲು ಸ್ಥಳ ನಿಗದಿ ಮಾಡಲಾಗುತ್ತದೆ. ಬಾಯಾರಿದ ಭಕ್ತರಿಗೆ ಸ್ಟೀಲ್ ಬಾಟಲ್‌ಗಳಲ್ಲಿ ನೀರು ಕೊಡಲು ಸ್ಥಳೀಯರಿಗೆ ಜವಾಬ್ದಾರಿ ನೀಡಲಾಗುತ್ತಿದೆ.
ನಾಗಮಲೆ ಪ್ರವೇಶಕ್ಕೆ ಭಕ್ತರಿಗೆ ಪ್ರವೇಶ ನೀಡಲು ದರ ನಿಗದಿ ಮಾಡಲು ಅರಣ್ಯ ಇಲಾಖೆಯ ಪಿಸಿಸಇಎ್ಗೆ ಪತ್ರ ಬರೆಯುವುದಾಗಿ ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎ್ ಭಾಸ್ಕರ್ ತಿಳಿಸಿದ್ದಾರೆ. ಈ ಕ್ಷೇತ್ರವು ಮಲೆ ಮಹದೇಶ್ವರ ಮತ್ತು ಕಾವೇರಿ ವನ್ಯಜೀವಿಧಾಮಗಳ ವ್ಯಾಪ್ತಿಗೆ ಬರುತ್ತದೆ. ಎರಡೂ ವನ್ಯಜೀವಿಧಾಮಗಳಿಂದ ಪತ್ರ ಬರೆಯಬೇಕೆಂದುಕೊಂಡಿದ್ದೇವೆ ಎಂದು ಹೇಳಿದ್ದಾರೆ.
ನಾಗಮಲೆ ಪ್ರವೇಶಕ್ಕೆ ವಿಧಿಸಿದ್ದ ತಾತ್ಕಾಲಿಕ ನಿರ್ಬಂಧವನ್ನು ತೆರವುಗೊಳಿಸಲು ಚಿಂತನೆ ನಡೆಸಲಾಗಿದೆ. ಪರಿಸರ ಅಭಿವೃದ್ಧಿ ಸಮಿತಿ ಮೂಲಕ ಸ್ಥಳೀಯರಿಗೆ ಉದ್ಯೋಗ ಕೊಟ್ಟು ಬರುವ ಭಕ್ತರಿಗೆ ಜೀಪ್ ಸೌಲಭ್ಯ, ರಕ್ಷಣೆ ಕೊಡುವ ಕೆಲಸ ಮಾಡಿಸಲಾಗುತ್ತದೆ. ಈ ಸಂಬಂಧ ಗ್ರಾಮದಲ್ಲಿ ಸಭೆ ನಡೆಸಲಾಗಿದೆ. ಜೀಪ್‌ಗಳಲ್ಲಿ ಭಕ್ತರನ್ನು ಕರೆದುಕೊಂಡು ಬರುವ ಮತ್ತು ಹೋಗುವುದಕ್ಕೆ ದರ ನಿಗದಿ ಮಾಡಬೇಕಿದ್ದು, ಇದಕ್ಕಾಗಿ ಪಿಸಿಸಿಎ್ಗೆ ಪತ್ರ ಬರೆಯಲಾಗುವುದು.
ಭಾಸ್ಕರ್, ಡಿಸಿಎ್, ಮಲೆ ಮಹದೇಶ್ವರ ವನ್ಯಜೀವಿಧಾಮ
ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿ ಸ್ಥಳೀಯರಿಗೆ ಉದ್ಯೋಗ, ನಾಗಮಲೆ ಪ್ರವೇಶ ನಿರ್ಬಂಧ ತೆರವು ಮಾಡುವ ಬಗ್ಗೆ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಹೇಳುತ್ತಿರುವ ರೀತಿ ಮಾಡಿದರೆ ನಮಗೂ ಊರಿನಲ್ಲೇ ಕೆಲಸ ಸಿಗುತ್ತದೆ. ಭಕ್ತರನ್ನೇ ಅವಲಂಬಿಸಿರುವ ಅಂಗಡಿಗಳ ವ್ಯಾಪಾರವೂ ನಡೆದು ಕುಗ್ರಾಮದಲ್ಲಿ ಆರ್ಥಿಕ ಚಟುವಟಿಕೆ ಶುರುವಾಗಿ ಆದಾಯ ದೊರೆಯುತ್ತದೆ.
ಸಿದ್ದರಾಜು, ಇಂಡಿಗನತ್ತ ಗ್ರಾಮಸ್ಥ, ಮಹದೇಶ್ವರ ಬೆಟ್ಟ