ಹಲಗೂರು ಸಮೀಪದ ಬಾಣಗಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದ ರಸ್ತೆಯನ್ನು ತೆರವುಗೊಳಿಸಿದರು.
ಹಲಗೂರು: ಸಮೀಪದ ಬಾಣಗಹಳ್ಳಿ ಗ್ರಾಮದ ಸರ್ವೇ ನಂ.44ರಲ್ಲಿ ಖಾಸಗಿಯವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಾಗ ಮತ್ತು ರಸ್ತೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ತೆರವು ಗೊಳಿಸಿದರು.
ಗ್ರಾಮದಲ್ಲಿನ ಸಾರ್ವಜನಿಕ ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದಾಗಿ ನೆರೆಹೊರೆಯ ಜಮೀನುಗಳಿಗೆ ಹೋಗಲು ತೊಂದರೆ ಆಗುತ್ತಿದೆ. ಜಮೀನು ಮಾಲೀಕರು, ರೈತರು ಕೃಷಿ ಚಟುವಟಿಕೆಗೆ ಹೋಗಿ ಬರಲು ತೀವ್ರ ತೊಂದರೆ ಪಡಬೇಕಾಗಿದೆ. ಇದರಿಂದಾಗಿ ಕೃಷಿ ಚಟುವಟಿಕೆ ನಿಲ್ಲಿಸುವಂತಾಗಿದೆ. ರೈತರು, ಸಾರ್ವಜನಿಕರು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲ ಆಗುವಂತೆ ರಸ್ತೆ ತೆರವು ಮಾಡಿ ಕೊಡಬೇಕೆಂದು ಅಪ್ಪಾಜಯ್ಯನದೊಡ್ಡಿ ಗ್ರಾಮದ ರಾಜೇಶ್ ಮಳವಳ್ಳಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದರು.
ಈ ಸಂಬಂಧ ಉನ್ನತ ಅಧಿಕಾರಿಗಳ ಅದೇಶದ ಮೇರೆಗೆ ಕಸಬಾ ಎರಡನೇ ವೃತ್ತದ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕ ರವಿಕುಮಾರ್, ಶಿವಕುಮಾರ್ ಮತ್ತು ಸಿಬ್ಬಂದಿ ನೇತೃತ್ವದಲ್ಲಿ ತಾಲೂಕು ಸರ್ವೇಯರ್ ಎಂ.ಎಸ್.ಬೀರೇಶ್ ಸ್ಥಳಕ್ಕೆ ಆಗಮಿಸಿ ಸಂಬಂಧಿಸಿದ ರಸ್ತೆ ಜಾಗವನ್ನು ಗುರುತಿಸಿದರು. ಅಗ ಸ್ಥಳದಲ್ಲಿ ಸೇರಿದ್ದ ನೂರಾರು ರೈತರು ನಿರ್ದಿಷ್ಟಪಡಿಸಿದ ಒತ್ತುವರಿ ತೆರವು ಮಾಡಲು ಅಡ್ಡಿಪಡಿಸಿದರು.
ಸಮಸ್ಯೆ ಅರಿತು ರಸ್ತೆ ತೆರವು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಸ್.ವಿ.ಲೋಕೇಶ್ ಅವರಲ್ಲಿ ರಸ್ತೆ ಆರಂಭದಿಂದ ಅಂತ್ಯದವರೆಗೂ ತೆರವು ಮಾಡಬೇಕೆಂದು ರೈತರು ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಈ ದಿನವೇ ಸಂಪೂರ್ಣ ರಸ್ತೆ ತೆರವುಗೊಳಿಸುವಂತೆ ಸರ್ವೇಯರ್ ಅವರಿಗೆ ಸೂಚನೆ ನೀಡಿದರು.
ನಂತರ ಹಲಗೂರು ಪೊಲೀಸ್ ಠಾಣೆಯ ಪಿಎಸ್‌ಐ ಲೋಕೇಶ ಮತ್ತು ಸಿಬ್ಬಂದಿ ಬಿಗಿ ಭದ್ರತೆಯಲ್ಲಿ ಕಾಲು ದಾರಿಯನ್ನು ಜೆಸಿಬಿ ಯಂತ್ರದಿಂದ ತೆರವುಗೊಳಿಸಿ, ರೈತರ ಜಮೀನುಗಳಿಗೆ ಸಂಚರಿಸಲು ಅನುವು ಮಾಡಿಕೊಡಲಾಯಿತು.
ಕಸಬಾ ಮೂರನೇ ವೃತ್ತದ ರಾಜಸ್ವ ನಿರೀಕ್ಷಕ ಶಿವಕುಮಾರ್ ಗ್ರಾಮ ಲೆಕ್ಕಿಗ ಶಿವಶಂಕರ್, ಸಿದ್ದರಾಜು, ಶಿವಣ್ಣ, ಗ್ರಾಮ ಸಹಾಯಕ ಆನಂದ, ಅರ್ಜಿದಾರ ರಾಜೇಶ್, ಗ್ರಾಮಸ್ಥರಾದ ಮಾದೇಶ, ರೇವಣ್ಣ, ಶಂಕರೇಗೌಡ, ಕುಮಾರಸ್ವಾಮಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.