ಹನೂರಿನ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲದಲ್ಲಿ ಎಳ್ಳಾಮಾವಾಸ್ಯೆ ಹಿನ್ನಲೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.
- ವಿವಿಧ ದೇಗುಲಗಳಲ್ಲೂ ವಿಶೇಷ ಪೂಜೆ
ಹನೂರು: ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಶುಕ್ರವಾರ ಎಳ್ಳಮಾವಾಸ್ಯೆಯ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿತು.
ಪಟ್ಟಣದ ಶ್ರೀ ಬೆಟ್ಟಳ್ಳಿ ಮಾರಮ್ಮನ ದೇಗುಲವನ್ನು ತಳಿರು ತೋರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಲಾಗಿತ್ತು. ದೇವಿಗೆ ಬೆಳಗ್ಗೆ ಪನ್ನೀರು, ಎಳನೀರು, ಕುಂಕುಮ, ಗಂಧ, ಜೇನುತುಪ್ಪ, ಹಾಲು, ಮೊಸರು, ಸಕ್ಕರೆ ಹಾಗೂ ಗಂಧದ ಅಭಿಷೇಕವನ್ನು ನೆರವೇರಿಸಲಾಯಿತು. ಬಳಿಕ ದೇವಿಯ ಮೂರ್ತಿಯನ್ನು ಚಿನ್ನಾಭರಣ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಮಹಾಮಂಗಳಾರತಿ ಬೆಳಗಿಸಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.
ಪಟ್ಟಣ ಸೇರಿದಂತೆ ಭೈರನತ್ತ, ಮಣಗಳ್ಳಿ, ಬಂಡಳ್ಳಿ, ಉದ್ದನೂರು, ಬೆಳತ್ತೂರು, ಮಾಲಾಪುರ, ಅಜ್ಜೀಪುರ, ಚಿಂಚಳ್ಳಿ, ಮಣಗಳ್ಳಿ, ಮಂಗಲ ಹಾಗೂ ಈ ಭಾಗದ ಇನ್ನಿತರೆ ಕಡೆಗಳಿಂದ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದರು. ಹಣ್ಣು-ಕಾಯಿ ನೀಡಿ ಪೂಜೆ ಸಲ್ಲಿಸಿದರು. ಹರಕೆ ಹೊತ್ತ ಭಕ್ತರು ದೇಗುಲದ ಮುಂಭಾಗದಲ್ಲಿ ಉಪ್ಪು ಸುರಿದು ಭಕ್ತಿ ಭಾವ ಮೆರೆದರು.
ವಿವಿಧ ದೇಗುಲಗಳಲ್ಲೂ ವಿಶೇಷ ಪೂಜೆ: ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿಯ ಶ್ರೀ ಮಹದೇಶ್ವರ, ದಿಂಬಾದಳೇಶ್ವರ, ಮಂಗಲದ ಕೋಣನ ಮಾರಮ್ಮ, ಲೊಕ್ಕನಹಳ್ಳಿಯ ಸಂಪಿಗೇಶ್ವರ, ಕೌದಳ್ಳಿಯ ಶ್ರೀ ಮಹದೇಶ್ವರ, ಶಾಗ್ಯದ ಜಲಕಂಠೇಶ್ವರ, ವೈಶಂಪಾಳ್ಯದ ಶಿವಲಂಕಾರೇಶ್ವರ, ಬಿ.ಎಂ ಸಮುದ್ರದ ಶ್ರೀ ಮಹದೇಶ್ವರ ದೇಗುಲ ಸೇರಿದಂತೆ ತಾಲೂಕಿನ ವಿವಿಧ ದೇಗುಲಗಳಲ್ಲಿ ಎಳ್ಳಾಮಾವಾಸ್ಯೆ ಅಂಗವಾಗಿ ದೇವರ ಮೂರ್ತಿಯನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು, ಹಣ್ಣು ಕಾಯಿ ನೀಡಿ ಪೂಜೆ ಸಲ್ಲಿಸಿದರು.