ಗುಂಡ್ಲಪೇಟೆ ತಾಲೂಕಿನ ದೇಶಿಪುರದ ಮಲ್ಲಪ್ಪ ಅವರ ಜಮೀನಿನಲ್ಲಿ ಆನೆ ದಾಳಿಯಿಂದ ತೆಂಗಿನ ಬೆಳೆಗೆ ನಾಶವಾಗಿತ್ತು.
- ಬಂಡೀಪುರ ವ್ಯಾಪ್ತಿಯ ಗುಂಡ್ಲುಪೇಟೆ ಹಳ್ಳಿಗಳಲ್ಲಿ ಅಧಿಕ
- ರೈಲ್ವೆ ಬ್ಯಾರಿಗೇಟ್ ನಿರ್ಮಾಣಕ್ಕೆ ಮುಂದಾದ ರಾಜ್ಯ ಸರ್ಕಾರ
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಗುಂಡ್ಲುಪೇಟೆ ತಾಲೂಕಿನ ಹಳ್ಳಿಗಳಲ್ಲಿ ಕಾಡಾನೆಗಳ ಹಾವಳಿಗೆ ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ವಿಪರೀತ ಬೆಳೆ ಹಾನಿ ಸಂಭವಿಸುತ್ತಿದೆ.
ರಾಜ್ಯ ಅರಣ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 2022-23ನೇ ಸಾಲಿನಲ್ಲಿ 974, 2022-23ನೇ ಸಾಲಿನಲ್ಲಿ 1532, 2024-25ನೇ ಸಾಲಿನಲ್ಲಿ 1423, 2026-26ನೇ ಸಾಲಿನಲ್ಲಿ 1808 ಕಾಡಾನೆ ದಾಳಿಯಿಂದ ಆಗಿರುವ ಪ್ರಕರಣಗಳು ದಾಖಲಾಗಿವೆ.
ಗುಂಡ್ಲುಪೇಟೆ ತಾಲೂಕಿನ ಹೊಸಪುರ, ಯಡವನಹಳ್ಳಿ, ಬೇರಂಬಾಡಿ, ಕೋಟೆಕೆರೆ, ಯಲ್ಚೆಟ್ಟಿ, ಆಲತ್ತೂರು, ಲಕ್ಕಿಪುರ, ಕಣ್ಣೇಗಾಲ, ಬರಗಿ, ಕೆಬ್ಬೆಪುರ, ಜಕ್ಕಹಳ್ಳಿ, ಮಂಗಲ, ಹೊಂಗಳ್ಳಿ, ಕುಂದಕೆರೆ, ಶೆಟ್ಟಿಹಳ್ಲಿ, ಕಣಿಯನಪುರ, ಹಂಗಳ, ಬಾಚಳ್ಳಿ, ಮಂಚಳ್ಳಿ, ಚನ್ನಮಲ್ಲೀಪುರ ಇತರೆ ಗ್ರಾಮಗಳಲ್ಲಿ ಕಾಡಾನೆ ದಾಳಿಯಿಂದ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದೆ.
ಆನೆಗಳ ಉಪಟಳ ಹೆಚ್ಚಾಗಿರುವುದು ಕೃಷಿಕರಿಗೆ ಜೀವಭಯವನ್ನು ಹೆಚ್ಚು ಮಾಡಿದೆ. ರಾತ್ರಿ ವೇಳೆ ಬೆಳೆ ರಕ್ಷಣೆಗಾಗಿ ಕಾವಲು ಕಾಯಲು ಹೋದಾಗ ಆನೆ ದಾಳಿ ಮಾಡಿದರೆ ಪ್ರಾಣ ಹೋಗುವ ಸಂಭವವಿದೆ. ಆದರೂ ಇದನ್ನು ಲೆಕ್ಕಿಸದೆ ರೈತರು ಪ್ರತಿದಿನ ಬೆಳೆ ಕಾಯಲು ಹೋಗುತ್ತಿದ್ದಾರೆ. ಸಾಲ ಮಾಡಿ ಕೃಷಿಗೆ ಬಂಡವಾಳ ಹಾಕಿ ಬೆಳೆ ಹಾನಿಯಾದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರು ಬೇಸತ್ತು ಹೋಗಿದ್ದಾರೆ. ಕಾಡಂಚಿನಲ್ಲಿ ಜಮೀನುಗಳಲ್ಲಿ ಕೃಷಿ ನಡೆಯದೆ ಬೀಳು ಬಿದ್ದಿರುವುದನ್ನು ಕಾಣಬಹುದು. ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ನೀಡಲಾಗುತ್ತದೆ. ಆದರೆ ಈ ಪರಿಹಾರವನ್ನು ವೈಜ್ಞಾನಿಕವಾಗಿ ನೀಡಬೇಕು ಮತ್ತು ಆನೆಗಳ ಹಾವಳಿಯನ್ನು ನಿಯಂತ್ರಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳೇನು?:
ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲು ಕಾಡು ಮತ್ತು ನಾಡಿನ ಗಡಿಯಲ್ಲಿ ರೈಲ್ವೆ ಬ್ಯಾರಿಗೇಟ್, ಕಂದಕ, ಸೋಲಾರ್ ತಂತಿ ಬೇಲಿಗಳನ್ನು ನಿರ್ಮಾಣ ಮಾಡಲಾಗಿದೆ. ಆನೆ ಹಾವಳಿ ಇರುವ ಪ್ರದೇಶಗಳಲ್ಲಿ ಆನೆ ಕಾರ್ಯಪಡೆ ಸಿಬ್ಬಂದಿ ನಿಯೋಜಿಸಿ ಗಸ್ತು ನಡೆಸಿ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯವಾಗುತ್ತಿದೆ. ಜನವಸತಿ ಪ್ರದೇಶಕ್ಕೆ ಬರುತ್ತಲೇ ಇರುವ ಆನೆಯನ್ನು ಸ್ಥಳಾಂತರಿಸುವುದು, ಆನೆ ಹಿಮ್ಮೆಟ್ಟಿಸಲು ರೈತರಿಗೆ ಪಟಾಕಿ ನೀಡುವುದು, ಎಐ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯ ಮೂಲಕ ಸಂಘರ್ಷ ತಡೆಯಲು ಕ್ರಮವಹಿಸಲಾಗಿದೆ. ಥರ್ಮಲ್ ಡ್ರೋನ್ ಸಹಾಯದಿಂದ ಆನೆಗಳ ಚಲನವಲನವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಕಾಡಿನೊಳಗೆ ಮನುಷ್ಯರ ಸಂಚಾರ ತಡೆಗಟ್ಟುವುದು, ವನ್ಯಜೀವಿಗಳು ಮುಖಾಮುಖಿಯಾಗುವುದನ್ನು ತಪ್ಪಿಸಲು ಕ್ರಮವಹಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ರೈಲ್ವೆ ಬ್ಯಾರಿಗೇಟ್ ನಿರ್ಮಾಣ:
ಪ್ರಸ್ತುತ ಏನೆಲ್ಲಾ ಕ್ರಮಗಳನ್ನು ಕೈಗೊಂಡರೂ ಆನೆಗಳ ಹಾವಳಿ ತಡೆಯಲು ಪರಿಣಾಮಕಾರಿಯಾಗಿ ಸಾಧ್ಯವಾಗುತ್ತಿಲ್ಲ. ಇದರ ನಡುವೆ ರೈಲ್ವೆ ಬ್ಯಾರಿಗೇಟ್ ನಿರ್ಮಾಣ ಪರಿಣಾಮಕಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕೋಟ್ಯಾಂತರ ರೂ. ಖರ್ಚು ಮಾಡಿ ಅರಣ್ಯದಲ್ಲಿ ರೈಲ್ವೆ ಬ್ಯಾರಿಗೇಟ್ ಹಾಕಲಾಗುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ 2023-24ನೇ ಸಾಲಿನಲ್ಲಿ ಮದ್ದೂರು ವಲಯದಲ್ಲಿ ರೈಲ್ವೆ ಬ್ಯಾರಿಗೇಟ್ ನಿರ್ಮಾಣ ಮಾಡಲು 95.68 ಲಕ್ಷ ರೂ., ಓಂಕಾರ್ ವಲಯದಲ್ಲಿ 5.63 ಕೋಟಿ ರೂ., 2024-25ನೇ ಸಾಲಿನಲ್ಲಿ 2.46 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇನ್ನು 2025-26ನೇ ಸಾಲಿನಲ್ಲಿ 23.85 ಕೋಟಿ ರೂ. ವೆಚ್ಚದಲ್ಲಿ ಗುರಿ ನಿಗದಿ ಮಾಡಿರುವ 14 ಕಿ.ಮೀ ರೈಲ್ವೆ ಬ್ಯಾರಿಗೇಟ್ ಕಾಮಗಾರಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ 14 ಕಿ.ಮೀನಲ್ಲಿ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಗೇಟ್‌ನಿಂದ ಬಂಡಿಹಳ್ಳದವರಿಗೆ ಒಟ್ಟು 5.33 ಕಿ.ಮೀ ಬ್ಯಾರಿಗೇಟ್ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಲು ಆಕರ್ಷಿಸಿತ ಬೆಳೆಗಳನ್ನ ಬೆಳೆಯುವುದೂ ಕಾರಣ ಎಂದು ಹೇಳಲಾಗುತ್ತದೆ. ಆನೆಗಳಿಗೆ ಇಷ್ಟವಾಗುವ ಬಾಳೆ, ಕಬ್ಬು ಇತರೆ ಬೆಳೆಗಳನ್ನು ಹಾಕಿದ್ದರೆ ಅವು ಜಮೀನುಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತದೆ. ಕೃಷಿಗೆ ಸ್ಥಳೀಯವಾಗಿ ಎದುರಾಗುವ ಸವಾಲುಗಳನ್ನು ಅರ್ಥೈಸಿಕೊಂಡು ವೈಜ್ಞಾನಿಕವಾಗಿ ವ್ಯವಸಾಯ ಮಾಡಿದರೆ ಆನೆಗಳ ಉಪಟಳಕ್ಕೂ ಸ್ವಲ್ಪ ಕಡಿವಾಣ ಹಾಕಬಹುದಾಗಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶವಿರುವ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಆನೆಗಳ ಹಾವಳಿಯನ್ನು ತಪ್ಪಿಸಲು ಆನೆ ತಡೆ ಕಂದಕ, ಟೆಂಟೆಕಲ್ ಸೋಲಾರ್ ತಂತಿ ಬೇಲಿ, ಆನೆ ಕಾರ್ಯ, ಆನೆ ಹಿಮ್ಮೆಟ್ಟಿಸುವ ಶಿಬಿರ ರಚನೆ, ಸಿಬ್ಬಂದಿ ನಿಯೋಜನೆ, ರೈತರಿಗೆ ಪಟಾಕಿ ವಿತರಣೆ, ಕಾಡಿನೊಳಗೆ ಮಾನವ-ಪ್ರಾಣಿ ಮುಖಾಮುಖಿ ತಡೆಯುವುದು, ಎಐ ತಂತ್ರಜ್ಞಾನ ಮತ್ತು ಥರ್ಮಲ್ ಡ್ರೋನ್ ಮತ್ತು ಈ ವರ್ಷ 14 ಕಿ.ಮೀ ರೈಲ್ವೆ ಬ್ಯಾರಿಗೇಟ್ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
— ಈಶ್ವರ ಖಂಡ್ರೆ, ಅರಣ್ಯ ಸಚಿವ
ಗುಂಡ್ಲುಪೇಟೆ ತಾಲೂಕಿನಲ್ಲಿ ಆನೆ ಹಾವಳಿಯನ್ನು ತಡೆಗಟ್ಟಲು ರೈಲ್ವೆ ಬ್ಯಾರಿಗೇಟ್ ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಂಚಹಳ್ಳಿಯಲ್ಲಿ ರೈಲ್ವೆ ಬ್ಯಾರಿಗೇಟ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದೆ. ಇನ್ನೂ 9 ಕಿ.ಮೀ ರೈಲ್ವೆ ಬ್ಯಾರಿಗೇಟ್ ಅಳವಡಿಸಲಾಗುತ್ತದೆ. ಆನೆ ತಡೆ ಕಂದಕಗಳ ನಿರ್ಮಾಣವಾಗಿದೆ.
— ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ