Devotee death at Nagamale
ಶವ ಸಾಗಿಸಲು ವಾಹನ ಒದಗಿಸದ್ದಕ್ಕೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ನಾಗಮಲೆಯಲ್ಲಿ ಪೂಜೆಗಾಗಿ ತೆರಳಿದ್ದ ಭಕ್ತರೊಬ್ಬರು ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗಾಣಿಗ ಹೊಸೂರು ಗ್ರಾಮದ ಜವರೇಗೌಡ (62) ಮೃತರು. ಇವರು ಕುಟುಂಬಸ್ಥರು ಹಾಗೂ ಗ್ರಾಮಸ್ಥರೊಂದಿಗೆ ಭಾನುವಾರ ನಾಗಮಲೆ ಮಾದಪ್ಪನ ಸನ್ನಿಧಿಗೆ ತೆರಳಿದ್ದರು. ಈ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಮಾತಿನ ಚಕಮಕಿ: ಮೃತಪಟ್ಟ ಕೂಡಲೇ ಜತೆಗೆ ತೆರಳಿದ್ದವರು ವಾಹನ ಸೌಕರ್ಯ ಕಲ್ಪಿಸುವಂತೆ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು. ಆದರೆ ವಾಹನವಿಲ್ಲದೆ 2 ಗಂಟೆ ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಾಗಮಲೆಗೆ ತೆರಳಬೇಕಾದರೆ 200 ರೂ. ಪ್ರವೇಶ ಶುಲ್ಕವನ್ನು ಇಲಾಖೆ ಪಡೆಯುತ್ತದೆ. ಆದರೆ ಇಲ್ಲಿ ಯಾವುದೇ ಸೌಕರ್ಯವಿಲ್ಲ. ಮೃತಪಟ್ಟ ವ್ಯಕ್ತಿಯ ಶವವನ್ನು ಸಾಗಿಸಲು ವಾಹನ ಸೌಕರ್ಯ ಒದಗಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೆಲ ಸಮಯದ ಬಳಿಕ ಮೃತದೇಹವನ್ನು ಅರಣ್ಯ ಇಲಾಖೆಯ ವಾಹನದಲ್ಲಿ ಮ.ಬೆಟ್ಟದ ಆಸ್ಪತ್ರೆಗೆ ಕರೆ ತರಲಾಯಿತು. ಸುದ್ದಿ ತಿಳಿದು ಶ್ರೀ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಎ.ಈ ರಘು ಅವರು ಆಸ್ಪತ್ರೆಗೆ ಆಗಮಿಸಿ ಅರಣ್ಯ ಇಲಾಖೆಯ ಅವ್ಯವಸ್ಥೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆರ್‌ಎಫ್‌ಒ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ಬಳಿಕ ಮೃತದೇಹವನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ.
ಮ.ಬೆಟ್ಟದಲ್ಲಿ ವ್ಯಕ್ತಿ ಸಾವು: ಮ.ಬೆಟ್ಟದ ರಂಗಮಂದಿರಲ್ಲಿ ಶನಿವಾರ ರಾತ್ರಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಮೂಡಲಪಾಳ್ಯದ ಕೆಂಪನ್ ಮೃತರು. ಇವರು ಕಳೆದ ಒಂದು ತಿಂಗಳಿನಿಂದ ಮ.ಬೆಟ್ಟಕ್ಕೆ ಆಗಮಿಸಿ ಒಡಾಡಿಕೊಂಡು ಇದ್ದರು ಎನ್ನಲಾಗಿದೆ. ಆದರೆ ರಾತ್ರಿ ರಂಗಮಂದಿರಲ್ಲಿ ಮಲಗಿದ್ದ ವೇಳೆ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲಿಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಚಾ.ನಗರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ.
ಈ ಎರಡೂ ಪ್ರಕರಣ ಸಂಬಂಧ ಮ.ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.