ಮೆದಗನಾಣೆ ಗಿರಿಜನರ ಹಾಡಿಯಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹದಲ್ಲಿ ಅಸ್ವಸ್ಥಗೊಂಡ ವೃದ್ಧ.  
ಚಾಮರಾಜನಗರ

ಉಪವಾಸ ಸತ್ಯಾಗ್ರಹದಲ್ಲಿ ವೃದ್ಧ ಅಸ್ವಸ್ಥ

ಪ್ರಮುಖ ಮುಖ್ಯಾಂಶಗಳು

  • ಚಿಕಿತ್ಸೆ ನೀಡಿದ ಬಳಿಕ ಚೇತರಿಕೆ
ಹನೂರು: ವಿದ್ಯುತ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ತಾಲೂಕಿನ ಮೆದಗನಾಣೆ ಗಿರಿಜನರ ಹಾಡಿಯಲ್ಲಿ 3 ದಿನಗಳಿಂದ ನಡೆಸುತ್ತಿರುವ ಉಪವಾಸ ಸತ್ಯಾಗ್ರಹದಲ್ಲಿ ಭಾನುವಾರ ವೃದ್ಧರೊಬ್ಬರು ಅಸ್ವಸ್ಥಗೊಂಡರು.
ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆದಗನಾಣೆ ಗಿರಿಜನರ ಹಾಡಿಗೆ ವಿದ್ಯುತ್ ಸೌಕರ್ಯವಿರಲಿಲ್ಲ. ಇದರಿಂದ ಜನರು ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡ ಸರ್ಕಾರ ವಿದ್ಯುತ್ ಸೌಕರ್ಯ ಕಲ್ಪಿಸಲು ಮುಂದಾಯಿತು. ಸೆಸ್ಕ್ ವತಿಯಿಂದ ಕಾಮಗಾರಿ ಪೂರ್ಣಗೊಂಡು ವರ್ಷವೇ ಕಳೆದಿದೆಯಾದರೂ ಅರಣ್ಯ ಇಲಾಖೆಯಿಂದ ಅನುಮತಿ ದೊರಕಿಲ್ಲ ಎಂದು ಸಂಪರ್ಕ ನೀಡಿಲ್ಲ. ಈ ಸಂಬಂಧ ಸೆಸ್ಕ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಗಿರಿಜನರು ಜಿಲ್ಲಾ ಬುಡಕಟ್ಟು ಹಿತರಕ್ಷಣಾ ಸಮಿತಿ ಜತೆಗೂಡಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಆದರೆ ಅಧಿಕಾರಿಗಳಿಂದ ಧನಾತ್ಮಕ ಸ್ಪಂದನೆ ದೊರಕಿಲ್ಲ. ಇದರಿಂದ ಗಿರಿಜನರು ಸತ್ಯಾಗ್ರಹ ಮುಂದುವರಿಸಿದ್ದಾರೆ.
ಈ ನಡುವೆ ಭಾನುವಾರ ಬೆಳಗ್ಗೆ ಸುಮಾರು 80 ವರ್ಷದ ಗಿರಿಪಂದಪ್ಪ ಅವರು ನಿಶ್ಯಕ್ತಿಯಿಂದ ಅಸ್ವಸ್ಥಗೊಂಡು ನಿತ್ರಾಣಗೊಂಡರು. ಇವರನ್ನು ಡೋಲಿಯಲ್ಲಿ ಹೊತ್ತು ಮುಖ್ಯ ರಸ್ತೆಗೆ ಸಾಗಿದ ಬಳಿಕ ಅರಣ್ಯ ಇಲಾಖೆ ವಾಹನದಲ್ಲಿ ಮ.ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಯಿತು. ಅಗತ್ಯ ಚಿಕಿತ್ಸೆ ನೀಡಿದ ಬಳಿಕ ಸದ್ಯ ಚೇತರಿಸಿಕೊಂಡಿದ್ದಾರೆ.
ಒತ್ತಾಯ: ವಿದ್ಯುತ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಸತ್ಯಾಗ್ರಹವನ್ನು ಕೈಗೊಂಡು 3 ದಿನ ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ವೃದ್ಧಯೊಬ್ಬರೂ ಅಸ್ವಸ್ಥಗೊಂಡಿದ್ದಾರೆ. ಸತ್ಯಾಗ್ರಹ ಮುಂದುವರಿದರೆ ಜನರು ಅದರಲ್ಲೂ ವೃದ್ಧರು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸಮಸ್ಯೆಯಾಗಲಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯುತ್ ಸೌಕರ್ಯ ಕಲ್ಪಿಸುವಂತೆ ಜಿಲ್ಲಾ ಬುಡಕಟ್ಟು ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಒತ್ತಾಯಿಸಿದ್ದಾರೆ.