ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬದನಗುಪ್ಪೆ-ಪಣ್ಯದಹುಂಡಿ ಮಾರ್ಗ ಮಧ್ಯೆದ ಮೇಲ್ಸೇತುವೆ ನಿರ್ಮಾಣ ಸಂಬಂಧ ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಎನ್.ಎಚ್. ಅಧಿಕಾರಿಗಳು ಮತ್ತು ರೈತ ಮುಖಂಡರು, ಗ್ರಾಮಸ್ಥರ ಸಭೆ ನಡೆಯಿತು. ಎಎಸ್ಪಿ ಎಂ.ಎನ್.ಶಶಿಧರ್, ಎಡಿಸಿ ಟಿ.ಜವರೇಗೌಡ, ತಹಸೀಲ್ದಾರ್ ಗಿರಿಜಾ, ಡಿವೈಎಸ್ಪಿ ಸ್ನೇಹರಾಜ್ ಮತ್ತು ಗ್ರಾಮಸ್ಥರು, ಮುಖಂಡರು ಇದ್ದರು.
- ಪಣ್ಯದಹುಂಡಿ ಗ್ರಾಮಸ್ಥರ ಆಗ್ರಹ
- ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಸಭೆ
ಚಾಮರಾಜನಗರ: ಚಾಮರಾಜನಗರ-ಮೈಸೂರು ಮಾರ್ಗದ ತಾಲೂಕಿನ ಬದನಗುಪ್ಪೆ, ಪಣ್ಯದಹುಂಡಿ, ಮುತ್ತಿಗೆ ಮಾರ್ಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಲ್ಸೇತುವೆ ಕಾಮಗಾರಿಯನ್ನು ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮಾಡಿರಿ. ಇದರ ಕುರಿತ ಲಿಖಿತ ಪತ್ರ ಕೈಗಿಡಿ. ಇಲ್ಲದಿದ್ದರೆ ಯೋಜನೆಯನ್ನೇ ಕೈಬಿಡಿ ಎಂದು ರೈತ ಮುಖಂಡರು ಮತ್ತು ಗ್ರಾಮಸ್ಥರು ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಶ್ರೀರೂಪಾ ಅಧ್ಯಕ್ಷತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಸಂಬಂಧ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೊಟ್ಟ ಭರವಸೆಯನ್ನು ನಂಬದ ಗ್ರಾಮಸ್ಥರು ಲಿಖಿತವಾಗಿ ಬರೆದು ಕೊಡಿ, ಇಲ್ಲವೇ ಯೋಜನೆ ಕೈಬಿಡಿ ಎಂದರು.
ಸ್ವಾಧೀನವಾಗಿರುವ ಭೂಮಿಗೆ ಸೂಕ್ತ ದರ, ಮೇಲ್ಸೇತುವೆ ನಿರ್ಮಾಣಕ್ಕೂ ಮೊದಲು ಅಂಡರ್‌ಪಾಸ್ ಮತ್ತು ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಡುವುದಾಗಿ ಲಿಖಿತವಾಗಿ ಬರೆದುಕೊಡಿ ಎಂದು ಹೇಳಿದರು. ಸಭೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ ಮಾತನಾಡಿ, ಈ ಹಿಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಗ್ರಾಮಸ್ಥರ ಮನವಿ ಮೇರೆಗೆ ಡಿಪಿಆರ್ ಬದಲಾಯಿಸಲು ಎನ್‌ಎಚ್ ಅಧಿಕಾರಿಗಳಿಗೆ ತಿಳಿಸಿದ್ದರು. ಆಗ ಒಪ್ಪಿಗೆ ಸೂಚಿಸಿದ್ದ ಅಧಿಕಾರಿಗಳು ಈಗ ಹೊಸ ಡಿಸಿ ಶ್ರೀರೂಪಾ ಅವರ ಮುಂದೆ ಡಿಪಿಆರ್ ಬದಲಾಯಿಸಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಮೇಲ್ಸೇತುವೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿರುವ ಒಂದೇ ಕಡೆ ಇರುವ ಭೂಮಿಗೆ ಎರಡು ಬೆಲೆ ನಿಗದಿ ಮಾಡಿದ್ದಾರೆ. ಸೇತುವೆ ನಿರ್ಮಾಣದ ಟೆಂಡರ್ ತೆಗೆದುಕೊಂಡಿರುವ ಗುತ್ತಿಗೆದಾರರು ಬಿಜಾಪುರದಲ್ಲಿ ಇದೇ ರೀತಿಯ ಮೇಲ್ಸೇತುವೆಗೆ ಅಂಡರ್‌ಪಾಸ್ ಮಾಡಿಕೊಟ್ಟಿದ್ದಾರೆ. ಇಲ್ಲಿ ಯಾಕೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಅಧಿಕಾರಿಗಳ ಬಳಿ ಉತ್ತರವಿಲ್ಲ: ಪಣ್ಯದಹುಂಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರದ ಭೂಮಿ ಎಷ್ಟು ಬಳಕೆಯಾಗುತ್ತಿದೆ ಎಂದು ಎನ್‌ಎಚ್ ಅಧಿಕಾರಿಗಳನ್ನು ಗ್ರಾಮದ ಮುಖಂಡ ಸಂತೋಷ್ ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಗಳ ಬಳಿ ಉತ್ತರ ಸಿಗಲಿಲ್ಲ. ಶಾಲೆ, ಆಸ್ಪತ್ರೆಗಳನ್ನೆಲ್ಲಾ ಸರ್ಕಾರಿ ಜಾಗವೆಂದು ಭಾವಿಸಿದ್ದೀರಿ. ಶಾಲೆ, ಆಸ್ಪತ್ರೆಗೆ ನಮ್ಮೂರಿನ ಹಿರಿಯರು ದಾನವಾಗಿ ಭೂಮಿ ಕೊಟ್ಟಿದ್ದಾರೆ. ಇನ್ನೂ ಅವರ ಹೆಸರುಗಳಲ್ಲೇ ಭೂಮಿ ಇದೆ. ಅವರಿಗೆಲ್ಲ ನೋಟೀಸ್ ಕೊಡದೆ ಹೇಗೆ ಮೇಲ್ಸೇತುವೆ ನಿರ್ಮಾಣ ಶುರು ಮಾಡುತ್ತೀರಾ ಎಂದು ಪ್ರಶ್ನಿಸಿದರು. ಈ ವಿಷಯವನ್ನು ತಿಳಿದ ಜಿಲ್ಲಾಧಿಕಾರಿ ಶ್ರೀರೂಪಾ ಆಶ್ಚರ್ಯ ಪಟ್ಟು ಕಂದಾಯ ಇಲಾಖೆ ಅಧಿಕಾರಿಗಳ ಬಳಿಕ ಭೂಮಿ ಯಾರ ಹೆಸರಿನಲ್ಲಿವೆ ಎಂದು ಕೇಳಿ ತಿಳಿದುಕೊಂಡರು.
ರೈತ ಮುಖಂಡ ಹೆಗ್ಗೋಠಾರ ವಿಜಯ್‌ಕುಮಾರ್ ಮಾತನಾಡಿ, ಡಿಪಿಆರ್ ಬದಲಾವಣೆ ಮಾಡಲು ಆಗದಿದ್ದರೆ ನಮ್ಮ ಮೇಲೆ ನಿಮ್ಮ ನಿಯಮಗಳನ್ನು ಹೇರಬೇಡಿ. ಗ್ರಾಮಸ್ಥರಿಗೆ ಅನುಕೂಲವಾಗುವ ರೀತಿಯಲ್ಲೇ ಡಿಪಿಆರ್ ಬದಲಾಗಬೇಕು. ಗ್ರಾಮದ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು. ರೈತ ಮುಖಂಡ ಮೇಲಾಜಿಪುರ ಕುಮಾರ್ ಮಾತನಾಡಿ, ಜನರಿಗೆ ಅನುಕೂಲವಾಗು ರೀತಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಇನ್ನಷ್ಟು ಭೂಮಿಯನ್ನು ಕೊಡುತ್ತೇವೆ. ಆದರೆ ತೊಂದರೆ ಮಾಡುವ ಯೋಜನೆಗಳಿಗೆ ನಾವು ತುಂಡು ಭೂಮಿಯನ್ನೂ ಕೊಡುವುದಿಲ್ಲ. ಹಾಗಾಗಿಯೇ ಭೂ ಸ್ವಾಧೀನದ ಪರಿಹಾರದ ಹಣವನ್ನು ಪಡೆದುಕೊಂಡಿಲ್ಲ ಎಂದು ಹೇಳಿದರು. ಸಭೆಯಲ್ಲಿ ಗ್ರಾಮಸ್ಥರು ಮತ್ತು ರೈತ ಮುಖಂಡರು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಡಿವೈಎಸ್ಪಿ ಸ್ನೇಹಾರಾಜ್, ತಹಸೀಲ್ದಾರ್ ಗಿರಿಜಾ ಮತ್ತು ಎನ್‌ಎಚ್ ಅಧಿಕಾರಿಗಳು ಹಾಜರಿದ್ದರು.
ಪೊಲೀಸರ ಬಂದೋಬಸ್ತ್‌ನಲ್ಲಿ ಕಾಮಗಾರಿ:
ಎನ್‌ಎಚ್ ಅಧಿಕಾರಿಗಳು ಮೇಲ್ಸೇತುವೆಯ ಡಿಪಿಆರ್ ಬದಲಾಯಿಸಲು ಆಗದಿದ್ದ ಮೇಲೆ ಕಳೆದ ಸಭೆಯಲ್ಲಿ ಯಾಕೆ ಒಪ್ಪಿಗೆ ಸೂಚಿಸಿದಿದ್ದಾ ಎಂದು ಪ್ರಶ್ನಿಸಿದ ಡಿಸಿ ಶ್ರೀರೂಪಾ, ಇಷ್ಟು ದಿನಗಳಾದರೂ ಕಾಮಗಾರಿ ಯಾಕೆ ಆರಂಭವಾಗಿಲ್ಲ. ಪೊಲೀಸರನ್ನು ನಿಯೋಜಿಸಿ ಕೆಲಸ ಶುರು ಮಾಡಿಸಿ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹೇಳುತ್ತಿದ್ದಾರೆ ಎಂದು ತಿಳಿಸಿದರು. ಸಭೆಗೆ ನಿಮ್ಮ ಮೇಲಧಿಕಾರಿಗಳು ಬರುವುದೇ ಇಲ್ಲ. ಗ್ರಾಮಸ್ಥರು ಕೇಳುತ್ತಿರುವಂತೆ ಪಣ್ಯದಹುಂಡಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಮಾಡಲು ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಗಮನಕ್ಕೆ ತರಲಾಗುವುದು. ಕಾಮಗಾರಿ ಆರಂಭವಾಗಲಿ ಎಂದು ಹೇಳಿದರು. ಇದಕ್ಕೆ ಒಪ್ಪದ ಗ್ರಾಮಸ್ಥರು ಅಂಡರ್‌ಪಾಸ್ ಮಾಡಿಕೊಡುವುದಾಗಿ ಲಿಖಿತವಾಗಿ ಬರೆದುಕೊಡಿ. ಇಲ್ಲವೇ ಮೊದಲು ಅಂಡರ್‌ಪಾಸ್ ನಿರ್ಮಾಣ ಮಾಡಿ. ಇಲ್ಲದಿದ್ದರೆ ಯೋಜನೆಯನ್ನು ಕೈಬಿಡಿ ಎಂದರು. ಈ ವಿಚಾರವಾಗಿ ನಾವು ಮತ್ತೆ ಸಭೆಗೆ ಬರುವುದಿಲ್ಲ. ಅಂಡರ್‌ಪಾಸ್ ನಿರ್ಮಾಣಕ್ಕಾಗಿ ನಾವೂ ಸಹ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದರು.
ಕಚೇರಿ ಬಾಗಿಲಿಗೆ ಪಾದಯಾತ್ರೆ:
ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೇಳಿರುವಂತೆ ಪೊಲೀಸರನ್ನು ನಿಯೋಜಿಸಿ ಗ್ರಾಮಸ್ಥರಿಗೆ ಅನಾನುಕೂಲವಾಗುವಂತೆ ಸೇತುವೆ ನಿರ್ಮಾಣ ಮಾಡಿದರೆ ನನ್ನ ಹೋರಾಟದ ಸ್ವರೂಪವೂ ಬದಲಾಗಲಿದೆ. ಪ್ರಧಾನ ಕಾರ್ಯದರ್ಶಿಗಳ ಕಚೇರಿ ಬಾಗಿಲವರೆಗೂ ಪಾದಯಾತ್ರೆ ನಡೆಸುತ್ತೇವೆ. ಮೇಲ್ಸೇತುವೆ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮುಖಂಡ ಶಿವಲಿಂಗೇಗೌಡ ಹೇಳಿದರು.
ಹಿಂದಿನ ಡಿಸಿ ಶಿಲ್ಪಾನಾಗ್ ಅವರ ಸೂಚನೆಯಂತೆ ಮೇಲಧಿಕಾರಿಗಳ ಬಳಿ ಡಿಪಿಆರ್ ಬದಲಾವಣೆಗೆ ಕೇಳಲಾಯಿತು. ಆದರೆ ಇದು ಸಾಧ್ಯವಿಲ್ಲ. ಕಾಮಗಾರಿ ವಾಪಸ್ ಹೋದರೆ ಮತ್ತೆ 3-4 ವರ್ಷಗಳವರೆಗೂ ಬರುವುದಿಲ್ಲ ಎಂದು ಎನ್‌ಎಚ್ ಅಧಿಕಾರಿ ರೇಣುಕಾ ತಿಳಿಸಿದರು. ಇವರ ಹೇಳಿಕೆಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು. ಸಭೆಯಲ್ಲಿ ಎನ್‌ಎಚ್ ಅಧಿಕಾರಿಗಳನ್ನು ಮುಖಂಡರು ತರಾಟೆಗೆ ತೆಗೆದುಕೊಂಡರು.