ಯಳಂದೂರಿನ ಗೌತಮ ಬಡಾವಣೆಯಲ್ಲಿ ಭಾನುವಾರ ಶ್ರೀ ಭಗವಾನ್ ಬುದ್ಧ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಅಭಿನಂದನಾ ಸಮಾರಂಭದಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು.
- ಸರ್ಕಾರಿ ನಿವೃತ್ತ ನೌಕರ ಜೆ.ನಾಗರಾಜು ಅಭಿಪ್ರಾಯ
- ಪ್ರತಿಭಾ ಪುರಸ್ಕಾರ, ಅಭಿನಂದನಾ ಕಾರ್ಯಕ್ರಮ
ಯಳಂದೂರು: ವಿದ್ಯಾರ್ಥಿಗಳು ಇತ್ತೀಚೆಗೆ ಮೊಬೈಲ್ ದಾಸರಾಗುತ್ತಿದ್ದಾರೆ ಎಂದು ಸರ್ಕಾರಿ ನಿವೃತ್ತ ನೌಕರ ಜೆ. ನಾಗರಾಜು ಹೇಳಿದರು.
ಪಟ್ಟಣದ ಗೌತಮ ಬಡಾವಣೆಯಲ್ಲಿ ಶ್ರೀ ಭಗವಾನ್ ಬುದ್ಧ ಸೇವಾ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ಸರ್ಕಾರಿ ನೌಕರರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮೊಬೈಲ್‌ನಲ್ಲಿ ಸಾಮಾಜಿಕ ಜಾಲತಾಣಗಳನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಇದು ಚಟವಾಗಿ ಮಾರ್ಪಟ್ಟರೆ ಶಿಕ್ಷಣ ದಿಕ್ಕು ತಪ್ಪುತ್ತದೆ. ಇದರಿಂದ ಬದುಕು ಹಸನಾಗುವುದು ಕಷ್ಟವಾಗುತ್ತದೆ. ಹಾಗಾಗಿ ಮೊಬೈಲ್‌ನಿಂದ ಶಾಲಾ ಮಕ್ಕಳು ಸಾಧ್ಯವಾದಷ್ಟು ದೂರವಿರಿ ಎಂದು ಸಲಹೆ ನೀಡಿದರು.
ವಿದ್ಯೆ ಇಲ್ಲದಿದ್ದರೆ ಬದುಕು ಕಷ್ಟ, ಎಲ್ಲರೂ ವಿದ್ಯಾವಂತರಾಗಬೇಕು, ನಮಗೆ ಸಂವಿಧಾನ ನೀಡಿರುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ನಮ್ಮ ಪೂರ್ವಜರು ಅನುಭವಿಸಿದ ನೋವನ್ನು ಡಾ.ಬಿ.ಆರ್. ಅಂಬೇಡ್ಕರ್‌ರಿಂದ ನಿವಾರಣೆಗೊಂಡಿದೆ. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳಲು ನಾವು ಹಿಂದೇಟು ಹಾಕಬಾರದು, ಓದುವ ಸಮಯದಲ್ಲಿ ವಿನಾಕಾರಣ ಸಮಯವನ್ನು ವ್ಯರ್ಥ ಮಾಡದೆ ಮಕ್ಕಳು ಇದಕ್ಕೆ ಸಮಯವನ್ನು ಮೀಸಲಿಡಬೇಕು ಎಂದು ಹೇಳಿದರು.
ಬಿಳಿಗಿರಿರಂಗನಾಥಸ್ವಾಮಿ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜೆ.ಶ್ರೀನಿವಾಸ್ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವುದರಿಂದ ಅವರಿಗೆ ಕಲಿಕೆಯಲ್ಲಿ ಮತ್ತಷ್ಟು ಆಸಕ್ತಿ ಮೂಡುತ್ತದೆ ಎಂದು ತಿಳಿಸಿದರು.
ಭಗವಾನ್ ಬುದ್ಧ ಸೇವಾ ಸಂಸ್ಥೆ ಗೌರವಾಧ್ಯಕ್ಷರಾದ ಸಿ.ಬಸವರಾಜ, ಎನ್.ರಾಮಯ್ಯ, ಪಪಂ ಮಾಜಿ ಸದಸ್ಯೆ ಸವಿತಾ ಬಸವರಾಜು, ನಿವೃತ್ತ ಸೆಸ್ಕ್ ಅಧಿಕಾರಿ ನಂಜುಂಡಸ್ವಾಮಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ಎಸ್. ಪುಟ್ಟರಾಜು, ದೊಡ್ಡ ಯಜಮಾನರಾದ ನಾಗರಾಜು, ಮಹೇಶ್, ಪುಟ್ಟಸ್ವಾಮಿ, ನಂಜುಂಡಯ್ಯ, ಕಾರ್ಯದರ್ಶಿ ಶ್ಯಾಮ್‌ಸುಂದರ್, ಉಪಾಧ್ಯಕ್ಷ ಬಿ.ಮಲ್ಲಿಕಾರ್ಜುನ, ಖಜಾಂಚಿ ಎಂ. ಮಲ್ಲಿಕಾರ್ಜುನ, ನಿರ್ದೇಶಕರಾದ ಎ.ಎನ್.ನಾಗೇಂದ್ರ, ಎಂ.ಶಶಿಧರ್, ಕೃಷ್ಣಯ್ಯ, ಎಂ. ಶಶಿಧರ್, ಎಸ್.ಗುರುಲಿಂಗಯ್ಯ ಇತರರು ಇದ್ದರು.