ಚಾಮರಾಜನಗರದ ಹೃದಯ ಭಾಗದಲ್ಲಿರುವ ನಗರಸಭೆ ಕಚೇರಿ
- ನಗರಸಭೆಯ ಆಡಳಿತದಲ್ಲಿ ಅವ್ಯವಸ್ಥೆಗೆ ಬೇಸತ್ತ ಆಸ್ತಿದಾರರು
- ನೀರಿನ ಸಮಸ್ಯೆಗೆ ದೊರಕದ ಪರಿಹಾರ
- ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ
ಚಾಮರಾಜನಗರ: ಜಿಲ್ಲಾ ಕೇಂದ್ರವಾಗಿರುವ ಚಾಮರಾಜನಗರ ನಗರಸಭೆಯಲ್ಲಿ ಆಸ್ತಿದಾರರಿಗೆ ಇ-ಸ್ವತ್ತು ಆಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದವರು ನಿತ್ಯವೂ ಅಲೆಯುತ್ತಿದ್ದಾರೆ. ಹಲವು ವರ್ಷಗಳಿಂದ ಇರುವ ಈ ಸಮಸ್ಯೆಯನ್ನು ಬಗೆಹರಿಸಲು ಆಡಳಿತ ವ್ಯವಸ್ಥೆಗೆ ಸಾಧ್ಯವೇ ಆಗುತ್ತಿಲ್ಲ. ಇ-ಸ್ವತ್ತು ಮಾಡಿಕೊಡುವ ಕೆಲಸ ಶುರುವಾದರೆ ದಲ್ಲಾಳಿಗಳ ಹಾವಳಿಯೂ ಹೆಚ್ಚಾಗುತ್ತಿದೆ. ಹೀಗಾಗಿ ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ಇ-ಸ್ವತ್ತು ಮಾಡಿಕೊಡಬೇಕಾಗಿದೆ. ಇನ್ನು ಸೋಮವಾರಪೇಟೆ, ರಾಮಸಮುದ್ರ, ಗಾಳೀಪುರ, ಹೌಸಿಂಗ್ ಬೋರ್ಡ್ ಕಾಲೋನಿ ಹಾಗೂ ಇನ್ನಿತರೆ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರಂತರವಾಗಿ ಕೇಳಿಬರುತ್ತಲೇ ಇದೆ. ನಗರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನಗರಸಭೆ ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳಿಂದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ಇ-ಸ್ವತ್ತು ಸಮಸ್ಯೆ ಬಗೆಹರಿಸಲಾಗಿದೆ
ಕುಡಿಯುವ ನೀರು ಸಮಸ್ಯೆ ಇದ್ದ ವಾರ್ಡ್‌ಗಳಲ್ಲಿ ಹೊಸದಾಗಿ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ. ಕೆಲವು ಕಡೆಗಳಲ್ಲಿ ಹಳೆಯ ಬೋರ್‌ಗಳನ್ನು ರಿಪೇರಿ ಮಾಡಿಸಲಾಗಿದ್ದು, ನೀರು ಪೂರೈಕೆ ಮಾಡಲಾಗುತ್ತಿದೆ. ಯಾವ ವಾರ್ಡ್‌ಗಳಿಗೆ ಕಾವೇರಿ ನೀರು ಪೂರೈಕೆಯಾಗುತ್ತಿಲ್ಲ, ಅವುಗಳಿಗೆ ನೀರು ಪೂರೈಸಲು ಕ್ರಮವಹಿಸಲಾಗಿದೆ. ಕಳೆದ ಒಂದು ತಿಂಗಳಿಂದ ಇ-ಸ್ವತ್ತು ಸಮಸ್ಯೆಗಳು ಕಂಡುಬರುತ್ತಿತ್ತು. ಈಗ ಅದನ್ನು ಬಗೆಹರಿಸಲಾಗಿದ್ದು, ಬಾಕಿಇರುವ ಅರ್ಜಿಗಳನ್ನು ಹಂತಹಂತವಾಗಿ ವಿಲೇವಾರಿ ಮಾಡಲಾಗುತ್ತಿದೆ.
ಸುಧಾ, ಯೋಜನಾ ನಿರ್ದೇಶಕಿ, ನಾಗರಾಭಿವೃದ್ಧಿಕೋಶ, ಚಾಮರಾಜನಗರ
*ಅಧಿಕಾರಿಗಳಿಗೆ ಚುರುಕು ಮುಟ್ಟಿಸಿ
ನಗರಸಭೆ ವ್ಯಾಪ್ತಿಯಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಚುರುಕಾಗಿ ಕೆಲಸ ಮಾಡದೇ ತುಂಬಾ ತೊಂದರೆಯಾಗುತ್ತಿದೆ. ನನ್ನ ನಿವೇಶನದ ಇ-ಸ್ವತ್ತು ಮಾಡಿಸಲು ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದಿದ್ದು, ಈವರೆಗೂ ಸಹ ಸ್ಪಂದನೆ ನೀಡಿಲ್ಲ. ನಗರಸಭೆಗೆ ಅಳೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕುಡಿಯುವ ನೀರನ್ನು ಒಂದು ವಾರ್ಡ್‌ಗೆ ಬಿಡುತ್ತಾರೆ. ಮತ್ತೊಂದು ವಾರ್ಡ್‌ಗೆ ಬಿಡುವುದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಗಮನಹರಿಸಿ ಆಡಳಿತ ವ್ಯವಸ್ಥೆಗೆ ಚುರುಕುಮುಟ್ಟಿಸಬೇಕಿದೆ.
ಪದ್ಮಾ ಪುರುಷೋತ್ತಮ್, ಜಿಲ್ಲಾ ಜಾಗೃತಿ ಸಮಿತಿ ಸದಸ್ಯೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ
ಇತ್ತೀಚೆಗೆ ನಗರಸಭೆ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ನಮ್ಮ ನಿವೇಶನದ ಇ-ಸ್ವತ್ತು ಮಾಡಿಸಲು ಅರ್ಜಿ ಕೊಟ್ಟು ಸಾಕಷ್ಟು ವರ್ಷಗಳೇ ಕಳೆದಿದೆ. ನಗರಸಭೆಗೆ ತಿರುಗಾಡಿ ಬೇಸತ್ತು ಹೋಗಿದೆ. ಜಿಲ್ಲಾ ಕೇಂದ್ರದಲ್ಲಿ ನೀರಿನ ಸಮಸ್ಯೆಗೆ ಇಂದಿಗೂ ಮುಕ್ತಿ ದೊರೆತಿಲ್ಲ. ಕಾವೇರಿ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುತ್ತಿಲ್ಲ. ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನ ಮುಂಭಾಗದ ಉದ್ಯಾನವನಗಳು ಅಭಿವೃದ್ಧಿ ಮಾಡುವಲ್ಲಿ ವಿಲರಾಗಿದ್ದಾರೆ.
ಬಸವಣ್ಣ, ಟೀ ಅಂಗಡಿ ಮಾಲೀಕ, ಚಾಮರಾಜನಗರ
ನಮ್ಮ ಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಇರುವ ಒಂದು ಬೋರ್‌ವೆಲ್ ಕೆಟ್ಟು ಹೋದರೆ ಸಮಸ್ಯೆ ಬಿಗಡಾಯಿಸುತ್ತದೆ. ಇಂತಹ ಸಂದರ್ಭದಲ್ಲಿ ದೂರದ ಕೋಡಿಮೋಳೆ ಕೆರೆಯಲ್ಲಿ ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಮಹಿಳೆಯರು, ಹಿರಿಯ ನಾಗರೀಕರು ಹಾಗೂ ಮಕ್ಕಳು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಅದಲ್ಲದೇ ನಮ್ಮ ವಾರ್ಡ್‌ನಲ್ಲಿ ಕಾಲಕಾಲಕ್ಕೆ ಕಸ ವಿಲೇವಾರಿ ಮಾಡುವುದಿಲ್ಲ. ಇದರಿಂದ ನಿವಾಸಿಗಳಿಗೆ ನಿತ್ಯವೂ ಸಮಸ್ಯೆಯಾಗುತ್ತಿದೆ.
ಚೇತನ್ ರಾಜ್, 30ನೇ ವಾರ್ಡ್ ನಿವಾಸಿ, ಚಾಮರಾಜನಗರ
*ಕೆರೆ ನೀರು ತುಂಬಿಸಲು ಹಿಂದೇಟು
ಕೆರೆ ನೀರು ತುಂಬಿಸುವ ಯೋಜನೆಯಡಿ ಬಂಡಿಗೆರೆಗೆ ನೀರು ತುಂಬಿಸಲಾಗುತ್ತಿದೆ. ಆದರೆ ಸಮೀಪದ ಮರಗದಕೆರೆಗೆ ಯಾವ ದುರುದ್ದೇಶದಿಂದ ನೀರು ತುಂಬಿಸಲಾಗುತ್ತಿಲ್ಲವೋ ತಿಳಿಯುತ್ತಿಲ್ಲ. ಮರಗದ ಕೆರೆಗೆ ನೀರು ತುಂಬಿಸಿದರೇ, ನಮ್ಮ ಭಾಗದ ಅಂತರ್ಜಲ ಸಮಸ್ಯೆಗೆ ಸೂಕ್ತ ಪರಿಹಾರ ದೊರಕುತ್ತದೆ. ಇ-ಸ್ವತ್ತು ನಾನಾ ಕಾರಣಗಳಿಂದ ವಿಳಂಬವಾಗುತ್ತಿದೆ. ಆದರೆ ಸಾರ್ವಜನಿಕರು ಆನ್‌ಲೈನ್ ಮೂಲಕ ಇ-ಸ್ವತ್ತು ಪಡೆಯಲು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳನ್ನು ಪ್ರಶ್ನಿಸಲು ಅನುಕೂಲವಾಗುತ್ತದೆ. ಅದರಿಂದ ಆದಷ್ಟು ಬೇಗ ಇ-ಸ್ವತ್ತು ಪಡೆದುಕೊಳ್ಳಬಹುದಾಗಿದೆ.
ಮನೋಜ್ ಪಟೇಲ್, ಮಾಜಿ ಸದಸ್ಯ, ನಗರಸಭೆ, ಚಾಮರಾಜನಗರ
*ಸಮಸ್ಯೆಗಳಿಗೇ ಕೊನೆ ಇಲ್ಲದಂತಾಗಿದೆ
ಜಿಲ್ಲಾ ಕೇಂದ್ರವಾಗಿ ಇಷ್ಟು ವರ್ಷಗಳೂ ಕಳೆದಿದ್ದರೂ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಹಿಡಿದಿಲ್ಲ. ಹಾಗಾಗಿ ಕೆಲವು ವಾರ್ಡ್‌ಗಳಲ್ಲಿ ನಿವಾಸಿಗಳು ತುಂಬಾ ಸಮಸ್ಯೆ ಅನುಭವಿಸುವಂತಾಗಿದೆ. ಇ-ಸ್ವತ್ತು ಮತ್ತು ಇನ್ನಿತರೆ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿದೆ. ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಚುರುಕಾಗಿ ಕೆಲಸ ಮಾಡುವಂತೆ ಮಾರ್ಗದರ್ಶನ ಮಾಡುವವರ ಅಗತ್ಯವಿದೆ.
ನಾಗಶಿಲ್ಪ ಉಮೇಶ್, ಜಿಲ್ಲಾಧ್ಯಕ್ಷೆ, ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕ, ಚಾ.ನಗರ
*ಹಂತ ಹಂತವಾಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ
ನಗರಸಭೆ ವ್ಯಾಪ್ತಿಯ 1 ನೇವಾರ್ಡ್‌ನಲ್ಲಿ ಒಂದು ಬೋರ್ ರಿಪೇರಿ ಮಾಡಿಸಲಾಗಿದೆ, ಮತ್ತೊಂದು ಹೊಸ ಬೋರ್ ಕೊರೆಸಲಾಗಿದ್ದು, ಅದರಲ್ಲಿ ಸಾಕಷ್ಟು ನೀರು ಬಂದಿದೆ. 3ನೇ ವಾರ್ಡ್‌ನಲ್ಲಿ ಸಮಸ್ಯೆಗಳನ್ನು ಬಗೆಹರಿಲಾಗಿದೆ. 26ನೇ ವಾರ್ಡ್‌ನಲ್ಲಿ ಕಾವೇರಿ ನೀರು ಪೂರೈಕೆಯಾಗದ ಬಡಾವಣೆಗಳಿಗೆ ನೀರು ಪೂರೈಕೆ ಮಾಡಲಾಗಿದೆ. 28, 29 ಮತ್ತು 30 ನೇ ವಾರ್ಡ್‌ನಲ್ಲಿ ಸಮಸ್ಯೆ ಹೆಚ್ಚಾಗಿದ್ದು, ಅದರ ಸಮಸ್ಯೆ ಬಗೆಹರಿಸಲು ಸೂಚನೆ ನೀಡಲಾಗಿದೆ.
ಕೆ.ಎಚ್.ಪ್ರಕಾಶ್, ಎಇಇ, ನಗರಸಭೆ, ಚಾಮರಾಜನಗರ
*ಶಾಸಕ ಪುಟ್ಟರಂಗಶೆಟ್ಟಿ ಅವರೇ ಕಾರಣ
ನಗರಸಭೆಗೆ ಪೌರಾಯುಕ್ತರ ನೇಮಕ ಮಾಡಿದರೂ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಕುಡಿಯುವ ನೀರು ಪೂರೈಕೆ ಮಾಡುವ ಮೂಲಸೌಲಭ್ಯವನ್ನೇ ಕೊಟ್ಟಿಲ್ಲ ಎನ್ನುವುದು ರಾಜ್ಯ ಸರ್ಕಾರದ ವೈಲ್ಯವಾಗಿದೆ. ಇನ್ನು ಅಭಿವೃದ್ಧಿ ಕಾರ್ಯಗಳನ್ನು ಹೇಗೆ ಮಾಡಲು ಸಾಧ್ಯ. ಇದಕ್ಕೆ ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರೇ ಕಾರಣ.
ಬಾಲರಾಜು, 1ನೇ ವಾರ್ಡ್ ನಿವಾಸಿ, ಚಾಮರಾಜನಗರ