ಕೊಳ್ಳೇಗಾಲ ಪಟ್ಟಣದ ವಕೀಲ್ ರಾಮಯ್ಯ ಬಡಾವಣೆ ಮುಖ್ಯ ರಸ್ತೆಯಿಂದ ಎಲ್ ಐಸಿ ಕಚೇರಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ಮದ್ಯದ ಪೌಚ್ ಗಳನ್ನು ಬಿಸಾಡಿರುವುದು.
- ರಾತ್ರಿ ವೇಳೆ ಮದ್ಯಪ್ರಿಯರ ಅಡ್ಡೆಯಾದ ಸಂಪರ್ಕರಸ್ತೆ
- ಕೊಳ್ಳೇಗಾಲದಲ್ಲಿ ಹಾಸ್ಟೆಲ್, ಶಾಲಾ ಮಕ್ಕಳಿಗೆ ಕಿರಿಕಿರಿ
ಕೊಳ್ಳೇಗಾಲ: ಪಟ್ಟಣದ ವಕೀಲ ರಾಮಯ್ಯ ಬಡಾವಣೆ ಮುಖ್ಯರಸ್ತೆಯಿಂದ ಎಲ್‌ಐಸಿ ಕಚೇರಿಗೆ ಸಂಪರ್ಕಿಸುವ ರಸ್ತೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ.
ರಸ್ತೆಯಲ್ಲಿ ಮದ್ಯದ ಖಾಲಿ ಪೌಚ್‌ಗಳು ರಾರಾಜಿಸುತ್ತಿದೆ. ರಾತ್ರಿ ವೇಳೆ ರಸ್ತೆಯಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕುಡುಕರು ಮದ್ಯದ ಅಂಗಡಿಗಳಿಂದ ಮದ್ಯ ಖರೀದಿಸಿ ತಂದು ಕಿಕ್ಕೇರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಈ ರಸ್ತೆ ಮೂತ್ರ ವಿಸರ್ಜನೆಯ ತಾಣವಾಗಿ ಬಿಟ್ಟಿದೆ. ಹಾಡಹಗಲೇ ರಸ್ತೆಯ ಬದಿಯ ಚರಂಡಿಗೆ ಮೂತ್ರ ವಿರ್ಸಜನೆ ಮಾಡುತ್ತಿದ್ದಾರೆ.
ಈ ರಸ್ತೆಯ ಎದುರೇ ಸಮಾಜ ಕಲ್ಯಾಣ ಇಲಾಖೆಯ ಬಾಲಕಿಯರ ವಿದ್ಯಾರ್ಥಿ ನಿಲಯವಿದೆ. ಪಕ್ಕದಲ್ಲಿಯೇ ಭವನ್ಸ್ ಗೀತಾ ಶಾಲೆ, ಎಲ್‌ಐಸಿ ಕಚೇರಿ, ಪೀಸ್ ಪಾರ್ಕ್ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಈ ರಸ್ತೆಯಲ್ಲಿ ಸಂಚಾರ ಮಾಡುವುದಿರಲಿ ನೋಡುವುದಕ್ಕೂ ಮುಜುಗರ ಎನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕತ್ತಲಾಗುತ್ತಿದಂತೆ ಮದ್ಯ ಪ್ರಿಯರು ಈ ರಸ್ತೆಯನ್ನೆ ಓಪನ್ ಬಾರ್ ಮಾಡಿಕೊಂಡು ಮದ್ಯ ಸೇವನೆ ಮಾಡುತ್ತಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮವಹಿಸುತ್ತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ನಶೆ ಏರಿಸಿಕೊಂಡು ಮದ್ಯದ ಪೌಚ್‌ಗಳನ್ನು ರಸ್ತೆಯಲ್ಲಿಯೇ ಎಸೆದು ತೆರಳುತ್ತಿದ್ದರೂ ಪೊಲೀಸರು ಕ್ರಮವಹಿಸುತ್ತಿಲ್ಲ.
ಈ ಕೂಡಲೇ ಪೊಲೀಸ್ ಇಲಾಖೆ ಎಚ್ಚತ್ತು ರಾತ್ರಿ ವೇಳೆ ಗಸ್ತು ನಡೆಸಿ ರಸ್ತೆಯಲ್ಲಿ ಮದ್ಯ ಸೇವನೆ ಮಾಡುವವರ ಮೇಲೆ ಕ್ರಮವಹಿಸಬೇಕು. ನಗರಸಭೆ ಅಧಿಕಾರಿಗಳು ಮೂತ್ರ ವಿಸರ್ಜನೆ ಮಾಡದ ರೀತಿಯಲ್ಲಿ ಕ್ರಮವಹಿಸಬೇಕೆಂಬುದು ಪ್ರಜ್ಞಾವಂತ ನಾಗರೀಕರ ಒತ್ತಾಯವಾಗಿದೆ.