ಹನೂರು ತಾಲೂಕಿನ ಕೌಳಿಹಳ್ಳ ಡ್ಯಾಂ ಗ್ರಾಮದಲ್ಲಿ ಬೋರ್‌ವೆಲ್‌ನ ಅಂತರ್ಜಲ ಕುಸಿದು ಕುಡಿಯುವ ನೀರಿಗೆ ತೊಂದರೆಯಾಗಿರುವುದು 
ಚಾಮರಾಜನಗರ

ಬರ ಕುಡಿಯುವ ನೀರಿಗೆ ಗರ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಮುಂಬರುವ ದಿನಗಳಲ್ಲಿ 89 ಹಳ್ಳಿಗಳಲ್ಲಿ ತೊಂದರೆ ಸಾಧ್ಯತೆ
  • ಹನೂರಿನಲ್ಲೇ ಅಧಿಕ ಸಮಸ್ಯೆ, ಕೌಳಿಹಳ್ಳದಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು
ಚಾಮರಾಜನಗರ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗದೆ ಸಾಮಾನ್ಯ ದಿನಗಳಲ್ಲೇ ಹಾಹಾಕಾರ ಎದುರಾಗುತ್ತದೆ. ಇನ್ನು ಮಳೆ ಅಭಾವದಿಂದ ಬರದ ಛಾಯೆ ಆವರಿಸುತ್ತಿರುವ ಈ ಸಂದರ್ಭದಲ್ಲಿ ಕುಡಿಯುವ ನೀರಿಗೆ ಗರ ಬಡಿಯುವ ಲಕ್ಷಣಗಳು ಗೋಚರಿಸುತ್ತಿದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಯಳಂದೂರು ತಾಲೂಕಿನಲ್ಲಿ 1, ಹನೂರು ತಾಲೂಕಿನಲ್ಲಿ 35 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಗ್ರಾಮಗಳಿಗೆ ಖಾಸಗಿ ಬೋರ್‌ವೆಲ್ ಮತ್ತು ಟ್ಯಾಂಕರ್, ತೆರದ ಬಾವಿ, ಕೈಪಂಪ್‌ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.
89 ಗ್ರಾಮಗಳಿಗೆ ಬಾಯಾರಿಕೆ: ಜಿಲ್ಲೆಯಲ್ಲಿ ಮುಂಬರುವ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಸಂಖ್ಯೆ 89ಕ್ಕೆ ಏರಿಕೆಯಾಗಲಿದೆ. ಚಾಮರಾಜನಗರ ತಾಲೂಕಿನ 26 ಗ್ರಾಮ ಪಂಚಾಯಿತಿಗಳ 42 ಗ್ರಾಮಗಳು, ಗುಂಡ್ಲುಪೇಟೆ ತಾಲೂಕಿನ 6 ಗ್ರಾಮ ಪಂಚಾಯಿತಿಗಳ 7 ಗ್ರಾಮಗಳು, ಯಳಂದೂರು ತಾಲೂಕಿನ 7 ಗ್ರಾಮ ಪಂಚಾಯಿತಿಗಳ 9 ಹಳ್ಳಿಗಳು, ಹನೂರು ತಾಲೂಕಿನ 5 ಗ್ರಾಮ ಪಂಚಾಯಿತಿಗಳ 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಲಿದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ಮತ್ತು ಮುಂಬರುವ ದಿನಗಳಲ್ಲಿ ಸಮಸ್ಯೆ ಉಂಟಾಗುವ ಗ್ರಾಮಗಳನ್ನು ಒಟ್ಟುಗೂಡಿಸಿದರೆ 125 ಹಳ್ಳಿಗಳಲ್ಲಿ ಜಲ ಸಂಕಷ್ಟ ಉಂಟಾಗಲಿದೆ. ಜಿಲ್ಲೆಯಲ್ಲಿ ಹನೂರು ತಾಲೂಕಿನಲ್ಲೇ ಅಧಿಕ ಪ್ರಮಾಣದಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಪ್ರಸ್ತುತ ಹನೂರಿನ 35 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬರ ಬಂದಿದೆ. ಸರ್ಕಾರದ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿ ಹೋಗಿದೆ. ಮತ್ತೆ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಮತ್ತೆ 31 ಹಳ್ಳಿಗಳು ಸೇರಿ ಒಟ್ಟು 66 ಗ್ರಾಮಗಳಲ್ಲಿ ಜನರು ಕುಡಿಯುವ ನೀರಿಗೆ ಪರಿತಪರಿಸಬೇಕಾಗುತ್ತದೆ.
ಕೌಳಿಹಳ್ಳದಲ್ಲಿ ಸಿಟ್ಟಿಗೆದ್ದ ಗ್ರಾಮಸ್ಥರು:
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೌಳಿಹಳ್ಳ ಡ್ಯಾಂ ಎಂಬ ಹಳ್ಳಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಗ್ರಾಮಸ್ಥರು ಸಿಟ್ಟಿಗೆದ್ದಿದ್ದಾರೆ. ಕಳೆದ ಐದಾರು ದಿನಗಳಿಂದ ಕುಡಿಯುವ ನೀರು ಬರುತ್ತಿಲ್ಲ. ಸಂಜೆಯಾದರೆ ಕಾಡಾನೆ ಬಂದು ನಿಲ್ಲುತ್ತಿದೆ. ವಿದ್ಯುತ್ ಸೌಲಭ್ಯವೂ ಇಲ್ಲದೆ ಪರಿದಾಡುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಕುಡಿಯುವ ನೀರಿಗಾಗಿ ಡ್ಯಾಂಗೆ ಹೋಗಿ ಬಿಂದಿಗೆಯಲ್ಲಿ ನೀರು ತರಬೇಕಾಗಿದೆ. ಕಾಡುಪ್ರಾಣಿಗಳು ದಾಳಿ ಮಾಡಿದರೆ ಪ್ರಾಣಾಪಾಯ ಸಂಭವಿಸುತ್ತದೆ ಎಂದು ಮಹಿಳೆಯರು ಕಿಡಿಕಾರಿದ್ದಾರೆ.
ಪೂರ್ವ ಸಿದ್ಧತೆಗಳೇನಾಗಿವೆ?:
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಮಾಡಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ನೀರು ಸರಬರಾಜು ಮಾಡಲು ಸ್ಥಳೀಯವಾಗಿ ಲಭ್ಯವಿರುವ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಿ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಖಾಸಗಿ ಬೊರ್‌ವೆಲ್ ಖಾಸಗಿ ಬೋರ್‌ವೆಲ್‌ಗಳು ಲಭ್ಯವಿಲ್ಲದ ಪ್ರದೇಶಗಳಲ್ಲಿ ಬ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮವಹಿಸಲಾಗಿದೆ. ಜಿಲ್ಲಾ ಹಂತದಲ್ಲಿ ಹಾಗೂ ತಾಲೂಕು ಹಂತದಲ್ಲಿ ಕುಡಿಯುವ ನೀರಿನ ಸಂಬಂಧ 24*7 ಸಹಾಯವಾಣಿಗಳನ್ನು ತೆರೆಯಲಾಗಿದೆ. ಪ್ರಸ್ತುತ ಸಮಸ್ಯೆ ಇರುವ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಪ್ರತಿ ತಿಂಗಳು ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ, ಜಿಲ್ಲಾ ಟಾಸ್‌‌ಕೆೆರ್ಸ್ ಸಮಿತಿ ಸಭೆ, ವಿಪತ್ತು ನಿರ್ವಹಣಾ ಸಭೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಟಾಸ್ಕ್‌ಪೋರ್ಸ್ ಸಭೆಗಳನ್ನು ಆಯೋಜಿಸಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಕ್ರಮವಹಿಸಲಾಗಿದೆ.
ಜಿ.ಐ.ಪೈಪ್ ಕೇಬಲ್ ಅಳವಡಿಕೆ:
ಕುಡಿಯುವ ನಿರಿನ ಸಮಸ್ಯೆಗೆ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಇಳಿಕೆ ಕಂಡು ಬಂದಲ್ಲಿ ಹೆಚ್ಚುವರಿ ಜಿ.ಐ ಪೈಪ್ ಕೇಬಲ್ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ. ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆ ಇದ್ದಲ್ಲಿ ಮರು ಆಳಪಡಿಸಲು ಕ್ರಮ ವಹಿಸಲಾಗುತ್ತಿದೆ. ಅತ್ಯವಶ್ಯಕವಿದ್ದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆದು ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗುತ್ತಿದೆ. ಟಾಸ್ಕ್‌ಫೋರ್ಸ್ ಯೋಜನೆಯಡಿ ಬಿಡುಗಡೆಯಾಗಿರುವ 150 ಕೋಟಿ ರೂ. ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಿ, ಕ್ರಿಯಾಯೋಜನೆಗೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿಯಲ್ಲಿ ಅನುಮೋದಿಸಲಾಗಿದೆ. ಈಗಾಗಲೇ ಟಾಸ್ಕ್‌ಪೋರ್ಸ್ ಯೋಜನೆಯಡಿ ಬಿಡುಗಡೆಯಾಗಿರುವ 2.50 ಕೋಟಿ ರೂ.ಅನುದಾನದಲ್ಲಿ, 1.30 ಕೋಟಿ ರೂ. ತಾಲೂಕು ಮಟ್ಟದ ಟಾಸ್ಕ್‌ಪೋರ್ಸ್ ಸಭೆಗಳಲ್ಲಿ ಅನುಮೋದನೆ ಪಡೆದು ಕ್ರಿಯಾ ಯೋಜನೆ ತಯಾರಿಸಿ ಸಲ್ಲಿಸಲಾಗಿದೆ.
ನೋಡಲ್ ಅಧಿಕಾರಿಗಳಿಂದ ವರದಿ ಸಲ್ಲಿಕೆ:
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸಿರುವ ಗ್ರಾಮಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಿಲ್ಲ. ಅಲ್ಲದೇ, ಪದೇ ಪದೇ ನೀರಿನ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಸೂಚನೆ ನೀಡಿದ್ದರು. ಅದರಂತೆ ಕರ್ತವ್ಯಕ್ಕಿಳಿದ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ಭೇಟಿ ನೀಡಿ ವಸ್ತುಸ್ಥಿತಿ ಪರಿಶೀಲಿಸಿ, ವರದಿ ಸಲ್ಲಿಸಿರುತ್ತಾರೆ.
ಕೌಳಿಹಳ್ಳ ಡ್ಯಾಂ ಸಮುದ್ರ ರೀತಿ ಇದೆ. ಇಲ್ಲಿನ ಹಳ್ಳಿಯಲ್ಲಿ ಅಂತರ್ಜಲ ಕುಸಿದಿರುವುದು ದೊಡ್ಡ ಅಘಾತವನ್ನುಂಟು ಮಾಡಿದೆ. ಬೋರ್‌ವೆಲ್‌ನ ಪೈಪ್ ಅನ್ನು ಇನ್ನೂ ಕೆಳ ಹಂತಕ್ಕೆ ಬಿಡಬೇಕು. ಗ್ರಾಮದಲ್ಲಿರುವ ಜನಸಂಖ್ಯೆಗೆ ಅನುಗುಣವಾಗಿ ನಲ್ಲಿ ತೊಂಬೆಗಳಿಲ್ಲ. ಕುಡಿಯುವ ನೀರಿನ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಗ್ರಾಮಸ್ಥರು ಡ್ಯಾಂನಲ್ಲಿ ನೀರು ತರಲು ಹೋದರೆ ಕಾಡುಪ್ರಾಣಿಗಳ ಹಾವಳಿ ಇದೆ. ಗ್ರಾಮದಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಜಿಲ್ಲಾಧಿಕಾರಿ ಶ್ರೀರೂಪಾ ಲೊಕ್ಕನಹಳ್ಳಿ ಭಾಗದ ಗಿರಿಜನರ ಗ್ರಾಮಗಳಿಗೆ ಒಮ್ಮೆ ಭೇಟಿ ನೀಡಿ ಸಮಸ್ಯೆ ಆಲಿಸಬೇಕೆಂದು ಒತ್ತಾಯಿಸುತ್ತೇನೆ.
ಕೃಷ್ಣಮೂರ್ತಿ, ಪರಿವರ್ತನ ಗ್ರಾಮ ಅರಣ್ಯ ಸಮಿತಿ, ಅಧ್ಯಕ್ಷ, ಹೊಸದೊಡ್ಡಿ, ಹನೂರು
ಕುಡಿಯುವ ನೀರಿನ ಸಮಸ್ಯೆ ಇರುವ ಮತ್ತು ಮುಂದಿನ ದಿನಗಳಲ್ಲಿ ತೊಂದರೆಯಾಗುವ ಹಳ್ಳಿಗಳನ್ನು ಗುರುತಿಸಲಾಗಿದೆ. ಟಾಸ್‌‌ಕೆೆರ್ಸ್ ಅನುದಾನದಲ್ಲಿ ಖಾಸಗಿ ಬೊರ್‌ವೆಲ್, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಇಮ್ಯಾನುವಲ್ ಸಂತೋಷ್‌ಕುಮಾರ್, ಕಾರ್ಯಪಾಲಕ ಇಂಜಿನಿಯರ್,
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಚಾಮರಾಜನಗರ