ಡಾ.ಎಸ್ ದತ್ತೇಶ್‌ಕುಮಾರ್ ಅವರು ಹುತ್ತೂರು ಗ್ರಾಮಕ್ಕೆ ಟ್ಯಾಂಕರ್ ಮೂಲಕ ಪೂರೈಸುತ್ತಿರುವ ಕುಡಿವ ನೀರನ್ನು ಜನರು ಹಿಡಿಯುತ್ತಿರುವುದು.
- ಮಾದರಿಯಾದ ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್‌ಕುಮಾರ್
ಹನೂರು: ತಾಲೂಕಿನ ಹುತ್ತೂರು ಗ್ರಾಮಕ್ಕೆ ಕಳೆದ ಒಂದು ತಿಂಗಳಿನಿಂದಲೂ ಬಿಜೆಪಿ ಮುಖಂಡ ಡಾ.ಎಸ್.ದತ್ತೇಶ್‌ಕುಮಾರ್ ಅವರು ನಿರಂತರವಾಗಿ ಕುಡಿಯುವ ನೀರು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈ ಬಾರಿ ಮಳೆ ಕೊರತೆಯಿಂದಾಗಿ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಹುತ್ತೂರಿನಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಜನ, ಜಾನುವಾರುಗಳಿಗೆ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ಸುಮಾರು 4 ಸಾವಿರ ಜನಸಂಖ್ಯೆ ಇದ್ದು, 600ಕ್ಕೂ ಹೆಚ್ಚು ಕುಟುಂಬ ಗಳಿವೆ. ಆದರೆ ಕಳೆದ 2 ತಿಂಗಳಿನಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿತ್ತು. ಇದರಿಂದ ಜನರು ಕುಡಿವ ನೀರಿಗಾಗಿ ಅಲೆಯುವಂತಾಗಿತ್ತು. ಜತೆಗೆ ಗ್ರಾಮದಲ್ಲಿ ಕುಡಿವ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತ್ತು. ಇದನ್ನು ಮನಗಂಡ ಡಾ.ಎಸ್.ದತ್ತೇಶ್‌ಕುಮಾರ್ ಅವರು ಅಗತ್ಯ ಕ್ರಮವಹಿಸಿದರು. ಇದರ ಪರಿಣಾಮ ಗ್ರಾಮದ ಜನ, ಜಾನುವಾರುಗಳಿಗೆ ನಿತ್ಯ ಕುಡಿವ ನೀರು ಪೂರೈಕೆಯಾಗುತ್ತಿದೆ.
ನಿತ್ಯ 2 ಟ್ಯಾಂಕರ್ ಮೂಲಕ ನೀರು: ಗ್ರಾಮದಲ್ಲಿ ಹಿಂದೆ ಕುಡಿವ ನೀರು ಸಮಸ್ಯೆ ತೀವ್ರವಾಗಿತ್ತು. ಇದರಿಂದ ಇಲ್ಲಿನ ನಿವಾಸಿಗಳು ಅದರಲ್ಲೂ ಮಹಿಳೆಯರು, ಮಕ್ಕಳು ನೀರಿಗಾಗಿ ಬಿಂದಿಗೆಯನ್ನಿಡಿದು ಜಮೀನಿನ ಪಂಪ್‌ಸೆಟ್‌ಗಳಿಗೆ ಅಲೆಯುವಂತಾಗಿತ್ತು. ಈ ಬಗ್ಗೆ ತಿಳಿದ ದತ್ತೇಶ್‌ಕುಮಾರ್ ಅವರು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಮಾ. 14ರಂದು 2 ಟ್ಯಾಂಕರ್ ಮೂಲಕ ಜನರಿಗೆ ಅಗತ್ಯಕ್ಕೆ ತಕ್ಕಂತೆ ನಿರಂತರವಾಗಿ ಕುಡಿಯುವ ನೀರು ಪೂರೈಸುವುದರ ಜತೆಗೆ ಜಾನುವಾರುಗಳ ತೊಟ್ಟಿಗೆ ನೀರು ತುಂಬಿಸುತ್ತಿದ್ದು, ಇಂದಿಗೆ ಒಂದು ತಿಂಗಳು ಕಳೆದಿದೆ. ಈ ಕಾರ್ಯ ಮುಂದುವರಿದಿದೆ. ಈವರೆಗೂ ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದ ಜನರು ನಿಟ್ಟುಸಿರು ಬಿಟ್ಟಂತಾಗಿದೆ. ಇವರ ಸಾಮಾಜಿಕ ಸೇವಾ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.