ದೊಮ್ಮನಗದ್ದೆ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಣಾಮ ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಶಾಸಕರನ್ನು ಭೇಟಿಯಾಗಲು ಹನೂರಿಗೆ ಆಗಮಿಸಿದ್ದರು.
- ಹನೂರು ತಾಲೂಕಿನ 29 ಗ್ರಾಮಗಳಲ್ಲಿಲ್ಲ ಜೀವಜಲ
- 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 29 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ
ಹನೂರು: ತಾಲೂಕಿನಲ್ಲಿ ಕಳೆದ ವರ್ಷ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಇದೀಗ ಬೇಸಿಗೆ ಮುನ್ನವೇ 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ 29 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಹನೂರು ತಾಲೂಕು ಭೌಗೋಳಿಕವಾಗಿ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಮಳೆಯಾಶ್ರಿತ ಪ್ರದೇಶ. ತಾಲೂಕಿನಲ್ಲಿ 26 ಗ್ರಾಮ ಪಂಚಾಯಿತಿಗಳಿದ್ದು, ಸುಮಾರು 400ಕ್ಕೂ ಹೆಚ್ಚು ಗ್ರಾಮಗಳಿವೆ. ಕಳೆದ 3 ವರ್ಷದಿಂದಲೂ ತಾಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದ ಪರಿಣಾಮ ಕೃಷಿ ಪ್ರಗತಿಗೆ ಹಿನ್ನಡೆಯಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಕೆಲವು ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆಯಾಗಿತ್ತು. ಈ ಬಗ್ಗೆ ಅಗತ್ಯ ಕ್ರಮವಹಿಸಿದ್ದ ಅಧಿಕಾರಿಗಳು ಸಮಸ್ಯೆ ಬಗೆಹರಿಸುವುದರತ್ತ ಗಮನಹರಿಸಿದ್ದರು. ಆದರೂ ಜೂನ್ ವೇಳೆಗೆ 22 ಗ್ರಾಪಂಗಳ 32 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಆಗಿತ್ತು. ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದ್ದರು. ಶಾಸಕ ಎಂ.ಆರ್.ಮಂಜುನಾಥ್ ಅಧಿಕಾರಿಗಳೊಂದಿಗೆ ಟಾಸ್ಕ್‌ಫೋರ್ಸ್ ಸಭೆ ನಡೆಸಿ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದ್ದರು. ಈ ವೇಳೆ ಅಧಿಕಾರಿಗಳು ಬೋರ್ ಕೊರೆಸುವಿಕೆ, ಟ್ಯಾಂಕರ್ ಹಾಗೂ ಜಮೀನಿನ ಪಂಪ್‌ಸೆಟ್‌ಗಳ ಮೂಲಕ ಕುಡಿಯುವ ನೀರಿನ್ನು ಪೂರೈಸಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈ ವರ್ಷ ಬೇಸಿಗೆ ಮುನ್ನವೇ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಸಿಕೊಂಡಿದೆ. ಹಾಗಾಗಿ ಪ್ರತಿವರ್ಷ ಜಿಲ್ಲೆಯಲ್ಲಿಯೇ ಹನೂರು ಭಾಗದಲ್ಲಿ ಕುಡಿಯುವ ನೀರಿನದ್ದೇ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದ ಜೀವಜಲಕ್ಕೆ ಜನರು ತೊಂದರೆಪಡುವಂತಾಗಿದೆ.
ಹನೂರು ಭಾಗದಲ್ಲಿ ನದಿ ಮೂಲಗಳಿಲ್ಲದ ಪರಿಣಾಮ ಕುಡಿಯುವ ನೀರಿಗಾಗಿ ಹೆಚ್ಚು ಬೋರ್‌ವೆಲ್ಗಳನ್ನೇ ಅವಲಂಬಿಸಿದ್ದು, ಆ ಮೂಲಕ ಗ್ರಾಮದ ತೊಂಬೆ ಹಾಗೂ ನಲ್ಲಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಬೆರಳೆಣಿಕೆ ಗ್ರಾಮಗಳಲ್ಲಿ ಮಾತ್ರ ನೀರಿನ ಪೂರೈಕೆಯಾಗುತ್ತಿದೆ. ಕಳೆದ ವರ್ಷ ಸಮರ್ಪಕ ಮಳೆಯಾಗದ ಪರಿಣಾಮ ಅಂತರ್ಜಲ ಮಟ್ಟ ಕುಸಿದ ಪರಿಣಾಮ ತಾಲೂಕಿನ 13 ಗ್ರಾಪಂ ವ್ಯಾಪ್ತಿಯ 29 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಈಗಾಗಲೇ ಎದುರಾಗಿದೆ.
ಅಜ್ಜೀಪುರ ಗ್ರಾಪಂ ವ್ಯಾಪ್ತಿಯ ದೊಮ್ಮನಗದ್ದೆ, ರಾಮಾಪುರ ಗ್ರಾಪಂನ ಮಾಮರದೊಡ್ಡಿ, ಗೋಪಿಶೆಟ್ಟಿಯೂರು, ಪುದು ರಾಮಾಪುರ, ದಿನ್ನಳ್ಳಿ ಗ್ರಾಪಂನ ಕೆರೆದೊಡ್ಡಿ, ಮಾರಳ್ಳಿ, ಎಲ್ಲೇಮಾಳ ಗ್ರಾಪಂನ ಬಿ.ಎಂ. ಹಳ್ಳಿ, ಎಂ.ಟಿ ದೊಡ್ಡಿ, ಕೆ.ವಿ.ಎನ್.ದೊಡ್ಡಿ, ಕಾಗೇರಿ ದೊಡ್ಡಿ, ದೊಡ್ಡಲತ್ತೂರು ಗ್ರಾಪಂನ ಕೇಂದ್ರ ಸ್ಥಾನ, ಕೌದಳ್ಳಿ ಗ್ರಾಪಂನ 2ನೇ ವಾರ್ಡ್, ಎಂ.ಜಿ ದೊಡ್ಡಿ, ಮಲ್ಲಯ್ಯನಪುರ, ಮಿಣ್ಯಂ ನಕ್ಕುಂದಿ ಆಸ್ಪತ್ರೆ, ಮಾರ್ಟಳ್ಳಿ ಗ್ರಾಪಂನ ಟಗರು ಕೊಟ್ಟಾಯಿ, ಕಡಬೂರು, ವಡ್ಡರದೊಡ್ಡಿ, ಮಲೆಮಹದೇಶ್ವರ ಬೆಟ್ಟ ಗ್ರಾಪಂನ ಆಣಗಾಡು, ತೋಕೆರೆ, ಹುತ್ತೂರು ಗ್ರಾಪಂನ 2ನೇ ವಾರ್ಡ್, ಕರಿಯಪ್ಪನದೊಡ್ಡಿ, ಮಸಿಯಾ ಬೋವಿದೊಡ್ಡಿ, ಶೆಟ್ಟಳ್ಳಿಯ ವಿ.ಎಸ್.ದೊಡ್ಡಿ, ಸೂಳೇರಿಪಾಳ್ಯ ಗ್ರಾಪಂನ ಕಾಂಚಳ್ಳಿ, ಪಚ್ಚೆದೊಡ್ಡಿ, ಮಂಚಾಪುರ ಹಾಗೂ ಪಿ.ಜಿ ಪಾಳ್ಯ ಗ್ರಾಪಂನ ಎಸ್ಸಿ, ಆದಿ ಜಾಂಬವ, ಕ್ರಿಶ್ಚಿಯನ್ ಕಾಲನಿ ಹಾಗೂ ಉದ್ದಟ್ಟಿ ಗ್ರಾಮದಲ್ಲಿ ಜೀವಜಲದ ಸಮಸ್ಯೆ ಎದುರಾಗಿವೆ.
ಕೆಲವು ಗ್ರಾಮಗಳಲ್ಲಿ ರೈತರು ಜಾನುವಾರುಗಳಿಗೆ ನೀರುಣಿಸಲು ಪರತಪಿಸುವಂತಹ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ 15 ಗ್ರಾಪಂಗಳ 21 ಗ್ರಾಮಗಳಲ್ಲೂ ನೀರಿನ ಸಮಸ್ಯೆಯಾಗುವ ಮುನ್ಸೂಚನೆ ಇದೆ. ಹಾಗಾಗಿ ಸಮರ್ಪಕ ಕುಡಿವ ನೀರು ಒದಗಿಸಿ ಸಮಸ್ಯೆ ಬಗೆಹರಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದ್ದು, ಅಗತ್ಯ ಕ್ರಮವಹಿಸಬೇಕಿರುವುದು ಅನಿವಾರ್ಯವಾಗಿದೆ.
ನೀರಿಗಾಗಿ ಜನರಿಂದ ಆಕ್ರೋಶ ವ್ಯಕ್ತ
ಈಗಾಗಲೇ ತಾಲೂಕಿನಲ್ಲಿ ಪ್ರಸ್ತುತ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಿದ್ದು, ಅಧಿಕಾರಿಗಳು ಸಮಸ್ಯೆ ನಿವಾರಣೆಗೆ ಅಗತ್ಯ ವಹಿಸಿದ್ದು, ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಆದರೂ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಪಿಡಿಒಗಳು ಕ್ರಮವಹಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಜನರದ್ದು. ಮಲ್ಲಯ್ಯನಪುರದ ಗ್ರಾಮಸ್ಥರು ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದರೆ, ದೊಮ್ಮನಗದ್ದೆ ಗ್ರಾಮದಲ್ಲಿ ನೀರಿನ ಸಮಸ್ಯೆ ಪರಿಣಾಮ ಗ್ರಾಮಸ್ಥರು ಖಾಲಿ ಬಿಂದಿಗೆ ಹಿಡಿದು ಶಾಸಕರನ್ನು ಭೇಟಿಯಾಗಲು ಹನೂರಿಗೆ ಆಗಮಿಸಿದ್ದರು. ಬಂಡಳ್ಳಿ ಗ್ರಾಮದಲ್ಲೂ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ ಇದ್ದು, ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ನೆರೆದಿದ್ದ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.
ಹನೂರಿಗೆ ಇತ್ತೀಚಿಗೆ ಆಗಮಿಸಿದ್ದ ನೂತನ ಜಿಲ್ಲಾಧಿಕಾರಿ ಶ್ರೀರೂಪಾ ಅವರ ಗಮನಕ್ಕೂ ಬಂದಿದ್ದು, ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶಾಸಕ ಎಂ.ಆರ್.ಮಂಜುನಾಥ್ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಕೂಡಲೇ ಸ್ಪಂದಿಸುವಂತೆ ಹೇಳಿದ್ದಾರೆ. ಹನೂರಿನಲ್ಲಿ ಜಿಪಂ ಉಪ ಕಾರ್ಯದರ್ಶಿ ಶ್ರುತಿ ಅಧ್ಯಕ್ಷತೆಯಲ್ಲಿ ತಾಪಂನಲ್ಲಿ ನಡೆದ ಸಭೆಯಲ್ಲಿ ಗ್ರಾಮಗಳಲ್ಲಿ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನೀರಿನ ಸಮಸ್ಯೆ ಇದ್ದರೆ ಸಹಾಯವಾಣಿ 08224 200130ಗೆ ಕರೆ ಮಾಡುವಂತೆ ತಿಳಿಸಿದ್ದಾರೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಹನೂರು ಕ್ಷೇತ್ರದಲ್ಲಿ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದರಿಂದ ಜನರು ಪರದಾಡುವಂತಹ ಸ್ಥಿತಿಯಿದೆ. ಜಾನುವಾರುಗಳಿಗೆ ನೀರುಣಿಸಲು ರೈತರು ತೊಂದರೆಪಡುತ್ತಿದ್ದಾರೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ.
>ಕೆ.ಪಿ.ವೃಷಬೇಂದ್ರಸ್ವಾಮಿ ಅಧ್ಯಕ್ಷ, ಬಿಜೆಪಿ ಹನೂರು ಮಂಡಲ
ತಾಲೂಕಿನಲ್ಲಿ ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುತಿಸಲಾಗಿದೆ. ಈ ಸಂಬಂಧ ಪಿಡಿಒಗಳ ಸಭೆ ನಡೆಸಲಾಗಿದೆ. ಸಮಸ್ಯೆ ಇರುವ ಗ್ರಾಮಗಳಿಗೆ ಖಾಸಗಿ ಜಮೀನಿನ ಪಂಪ್‌ಸೆಟ್ ಇಲ್ಲವೇ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ಹಣ ಬಿಡುಗಡೆ ಮಾಡಿಸಿ ಕೊಡುವಂತೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
>ಉಮೇಶ್ ಇಒ ತಾಲೂಕು ಪಂಚಾಯಿತಿ ಹನೂರು