ಗುಂಡ್ಲುಪೇಟೆ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ಸಭೆ ನಡೆಯಿತು. ಷಣ್ಮುಗ, ಶಶಿಧರ್, ಡಾ.ಅಲೀಂಪಾಶಾ, ಹೇಮಾವತಿ ಇದ್ದರು.
- ಜಿಪಂ ಎಇಇ ಸಹನಾ ಮಾಹಿತಿ
- ಶಾಸಕ ಗಣೇಶ್ ಪ್ರಸಾದ್ ಅಧ್ಯಕ್ಷತೆಯಲ್ಲಿ ಟಾಸ್ಕ್‌ಫೋಸ್ ಸಮಿತಿ ಸಭೆ
ಗುಂಡ್ಲುಪೇಟೆ: ಗ್ರಾಮಾಂತರ ಪ್ರದೇಶಗಳಲ್ಲಿ ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಲಭ್ಯತೆ ಬಗ್ಗೆ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಶಾಸಕ ಗಣೇಶ್ ಪ್ರಸಾದ್ ಅವರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾಪಂಚಾಯಿತಿ ಕುಡಿಯುವ ನೀರು ವಿಭಾಗದ ಎಇಇ ಸಹನಾ ಮಾತನಾಡಿ, ಹಂಗಳ ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆ ಇರುವುದರಿಂದ 5-6 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಆದ್ದರಿಂದ ಹಂಗಳ ಮತ್ತು ಮೇಲುಕಾಮನಹಳ್ಳಿಯಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದು, ಹೊಸದಾಗಿ ಕೊಳವೆಬಾವಿ ಕೊರೆಸಬೇಕಾಗುತ್ತದೆ ಎಂದು ಮನವಿ ಮಾಡಿದರು.
ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಮಾತನಾಡಿ, ಸದ್ಯಾ ತಾಲೂಕಿನಲ್ಲಿ ಮೇವಿನ ಸಂಗ್ರಹ ಕಡಿಮೆಯಾಗಿದ್ದು ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಂಭವ ಎದುರಾಗಿದೆ. ಆದರೆ ತಾಲೂಕಿನ ನಾನಾ ಗ್ರಾಮಗಳಲ್ಲಿ ರೈತರು ನೀರಾವರಿ ಜಮೀನುಗಳಲ್ಲಿ ಮುಸುಕಿನ ಜೋಳ ಬೆಳೆದಿದ್ದು ಇನ್ನೂ ನಾಲ್ಕು ಐದು ವಾರಕ್ಕೆ ಸಾಲುತ್ತದೆ. ಅಲ್ಲದೆ ಹಲವಾರು ರೈತರು ಮೇವಿನ ಬೀಜಗಳಿಗೆ ಬೇಡಿಕೆ ಇಡುತ್ತಿದ್ದು ಅವರಿಗೆ ಸರಬರಾಜು ಮಾಡಿದರೆ ಕೊರತೆಯನ್ನು ನೀಗಬಹುದು. ಆದರೆ ಹೆಚ್ಚಿನ ಹಣದಾಸೆಗೆ ತಾಲೂಕಿನ ಮೇವನ್ನು ಕೇರಳಕ್ಕೆ ಸಾಗಣೆ ಮಾಡಲಾಗುತ್ತಿದ್ದು ಇದನ್ನು ಚೆಕ್‌ಪೋಸ್ಟ್‌ಗಳಲ್ಲಿ ತಡೆಗಟ್ಟಿದರೆ ತಾಲೂಕಿನ ಮೇವಿನ ಕೊರತೆ ನಿವಾರಿಸಬಹುದು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂಪಾಷಾ ಮಾತನಾಡಿ, ತಾಪಮಾನ ಹೆಚ್ಚಳದಿಂದ ಹೆಚ್ಚಿನ ಜನರು ಆಸ್ಪತ್ರೆಗೆ ಬರುತ್ತಿದ್ದಾರೆ. ಶಾಲೆಗಳಿಗೆ ರಜೆಯಿರುವುದರಿಂದ ಚಿಕ್ಕ ಮಕ್ಕಳು ಹಾಗೂ 60ರ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮನೆ ಮನೆಗಳಿಗೆ ತೆರಳಿ ಬೆಳಗ್ಗೆ ಬಿಸಿಲು ಹೆಚ್ಚಾಗಿರುವ 10ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯಲ್ಲಿಯೇ ಇದ್ದು ಹೆಚ್ಚಿನ ಪ್ರಮಾಣದ ನೀರು ಸೇವನೆ ಮಾಡುವಂತೆ, ಅಕಸ್ಮಾತ್ ಹೊರಗೆ ಬರಬೇಕಾದರೆ ಮೈಗೆ ಬಿಸಿಲು ಬೀಳದಂತೆ ಎಚ್ಚರಿಕೆಯಿಂದ ಇರುವವಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ನಂತರ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಬೇಸಿಗೆ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕೂಡಲೇ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವುದೇ ಸಂದರ್ಭವನ್ನೂ ಎದುರಿಸಲು ಸಿದ್ಧವಾಗಿರಬೇಕು ಎಂದು ಸೂಚನೆ ನೀಡಿದರು.
ತಾಲೂಕು ಪಂಚಾಯಿತಿ ಇಒ ಷಣ್ಮುಗ, ಸಹಾಯಕ ಕೃಷಿ ನಿರ್ದೇಶಕ ಶಶಿಧರ್, ಶಿಶು ಅಭಿವೃದ್ಧಿ ಅಧಿಕಾರಿ ಹೇಮಾವತಿ, ಶಿರಸ್ತೇದಾರ್ ಲಕ್ಷ್ಮಣ್, ಹಂಗಳ ನಾಡಕಚೇರಿಯ ಕಂದಾಯಾಧಿಕಾರಿ ರಾಜಕುಮಾರ್, ಮಂಗಲ ಗ್ರಾಮಪಂಚಾಯಿತಿ ಪಿಡಿಒ ಮೋಹನ್ ಕುಮಾರ್, ಮೂಖಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ಪ್ರಸಾದ್ ಸೇರಿದಂತೆ ನಾನಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.