ಪಾಲಾರ್ ಗ್ರಾಮದಲ್ಲಿ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಸಂಸದ ಸುನೀಲ್ ಬೋಸ್ ಸ್ಥಳೀಯರ ಸಮಸ್ಯೆ ಆಲಿಸಿದರು. ಆರ್.ನರೇಂದ್ರ, ಬಿಂದ್ಯಾ, ಚೈತ್ರಾ, ಉಮೇಶ್ ಇತರರಿದ್ದರು. 
ಚಾಮರಾಜನಗರ

ಮನೆ ನಿರ್ಮಾಣಕ್ಕೆ ತೊಂದರೆ ನೀಡಬೇಡಿ

ಹನೂರು: ಅರಣ್ಯ ಇಲಾಖೆ ತಡೆಯೊಡ್ಡಿರುವ ಮನೆಗಳ ನಿರ್ಮಾಣ ಕಾಮಗಾರಿ ಶೀಘ್ರ ಪೂರ್ಣವಾಗಬೇಕು. ಜನರಿಗೆ ತೊಂದರೆ ನೀಡಿದರೆ ಸುಮ್ಮನಿರಲ್ಲ ಎಂದು ಸಂಸದ ಸುನೀಲ್ ಬೋಸ್ ಎಚ್ಚರಿಸಿದರು.
ತಾಲೂಕಿನ ಗಡಿ ಪಾಲಾರ್ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕುಂದು ಕೊರತೆ ಸಭೆಯಲ್ಲಿ ಜನರಿಂದ ಸಮಸ್ಯೆ ಆಲಿಸಿ ಮಾತನಾಡಿದ ಅವರು, ಸ್ವಾತಂತ್ರ ಬಂದು 7 ದಶಕಗಳಾದರೂ ಅರಣ್ಯದಂಚಿನಲ್ಲಿರುವ ಪಾಲಾರ್ ಗ್ರಾಮದ ಜನರು ಮನೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯದಿಂದ ವಂಚಿತರಾಗಿರುವುದು ನಿಜಕ್ಕೂ ವಿಪರ್ಯಾಸ. ಸರ್ಕಾರದಿಂದ ಮಂಜೂರಾಗಿರುವ 18 ಮನೆಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿ ಜನರಿಗೆ ತೊಂದರೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿರುವ ಇಲ್ಲಿನ ಜನರಿಗೆ ಮನಷ್ಯತ್ವ ತೋರಿ ಅಗತ್ಯ ಮೂಲಸೌಕರ್ಯ ಒದಗಿಸಲು ಅವಕಾಶ ನೀಡಬೇಕು. ಸ್ಥಗಿತವಾಗಿರುವ ಮನೆಗಳ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ, ಬಸ್ ಶೆಲ್ಟರ್ ಹಾಗೂ ಸ್ಮಶಾನಕ್ಕೆ ಸ್ಥಳಾವಕಾಶ ನೀಡುವಂತೆ ಎಸಿಎಫ್ ಸಂದೀಪ್‌ಗೆ ಸೂಚನೆ ನೀಡಿದರು.
ಸ್ಥಳೀಯ ನಿವಾಸಿ ಮಾಸ್ತಮ್ಮ ಎಂಬುವರು ಮಾತನಾಡಿ, 2022ರಲ್ಲಿ ಸರ್ಕಾರದಿಂದ ಮಂಜೂರಾಗಿರುವ ಮನೆಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ತಡೆಯೊಡ್ಡಿದ್ದಾರೆ. ಈ ಹಿಂದೆ ನಡೆಸುತ್ತಿದ್ದ ಸ್ಥಳದಲ್ಲಿ ಶವ ಸಂಸ್ಕಾರ ನಡೆಸಲು ಬಿಡುತ್ತಿಲ್ಲ. ಬಸ್ ಶೆಲ್ಟರ್, ಬಿಎಸ್‌ಎನ್‌ಎಲ್ ಟವರ್ ನಿರ್ಮಾಣಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಈ ಬಗ್ಗೆ ಗಮನಹರಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಗರಂ ಆದ ಸಂಸದರು
ಗೋಪಿನಾಥಂನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಗತ್ಯ ಮೂಲಸೌಕರ್ಯ ಪಡೆಯಲು ತೊಂದರೆ ನೀಡುತ್ತಿರುವ ಅರಣ್ಯ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಆರ್‌ಎಫ್‌ಒ ಗುರುಮೂರ್ತಿ ಅವರಿಂದ ಮಾಹಿತಿ ಪಡೆದು ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆಯ ಕಾರ್ಯ ವೈಖರಿಯ ಬಗ್ಗೆ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದರು.
ಮಾಜಿ ಶಾಸಕ ಆರ್.ನರೇಂದ್ರ ಮಾತನಾಡಿ, ಗೋಪಿನಾಥಂನಲ್ಲಿ ಜನರು ತಲೆಮಾರುಗಳಿಂದ ವಾಸಿಸುತ್ತಿದ್ದಾರೆ.ಅವಲಂಬಿತರಿಗೆ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದರು.
ಇದಕ್ಕೂ ಮುನ್ನಾ ಮ. ಬೆಟ್ಟಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಸಂಸದರು ಸ್ಥಳೀಯರಿಂದ ಸಮಸ್ಯೆ ಆಲಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ತಹಸೀಲ್ದಾರ್ ಕೆ.ಎನ್.ಚೈತ್ರಾ, ತಾಪಂ ಇಒ ಉಮೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಇ ಸಂತೋಷ್, ಪಿಡಿಒ ಕಿರಣ್, ರಾಜಕುಮಾರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮುಕುಂದ ವರ್ಮ, ರಾಮಾಪುರ ಈಶ್ವರ್ ಇದ್ದರು.