ಗುಂಡ್ಲುಪೇಟೆ ತಾಲೂಕಿನ ಕೋಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜೀವ ವೈವಿಧ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಆರ್.ಕೆ.ಮಧು ಮಾತನಾಡಿದರು.
ಗುಂಡ್ಲುಪೇಟೆ : ಪರಿಸರ ಸಮತೋಲನಕ್ಕೆ ಜೀವ ವೈವಿಧ್ಯತೆಯನ್ನು ಅಗತ್ಯವಾಗಿ ಉಳಿಸಬೇಕು ಎಂದು ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಹೇಳಿದರು.
ತಾಲೂಕಿನ ಕೋಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಜೀವ ವೈವಿಧ್ಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹಿಂದಿನಿಂದಲೂ ಭೂಮಿಯಲ್ಲಿ ದೊಡ್ಡ ಪ್ರಮಾಣದ ಅರಣ್ಯವಿದೆ. ಎಲ್ಲಾ ಜೀವಿಗಳಿಗೂ ಇದು ಆಶ್ರಯವಾಗಿತ್ತು. ಆದರೆ ಆಧುನಿಕತೆಯ ಭರಾಟೆಯಲ್ಲಿ ಅರಣ್ಯ ನಾಶದಿಂದ ನಾನಾ ವೈವಿಧ್ಯಮಯ ವನ್ಯಜೀವಿಗಳು ವಿನಾಶದಂಚಿಗೆ ತಲುಪಿವೆ. ಇದರಿಂದ ಪರಿಸರದ ಅಸಮತೋಲನಕ್ಕೆ ಕಾರಣವಾಗುತ್ತಿದೆ ಎಂದರು.
ಸರ್ಕಾರವು ವಿನಾಶದಂಚಿನಲ್ಲಿರುವ ವನ್ಯಜೀವಿಗಳ ಸಂರಕ್ಷಣೆಗೆ ಹಲವು ವನ್ಯಜೀವಿ ಧಾಮಗಳನ್ನು ಆರಂಭಿಸಿದೆ. ಕರ್ನಾಟಕ ಹಲವು ವಿಶೇಷ ವನ್ಯಜೀವಿ ಧಾಮಕ್ಕೆಹೆಸರು ವಾಸಿಯಾಗಿದ್ದು ಸಿಂಗಲೀಕಕ್ಕೆ ಸೋಮೆಶ್ವರ ವನ್ಯಜೀವಿ ಧಾಮವಿದ್ದರೆ ರಣಹದ್ದುಗಳಿಗಾಗಿ ರಾಮದೇವರ ಬೆಟ್ಟ, ಕರಡಿಗಳಿಗಾಗಿ ಬಳ್ಳಾರಿ ಜಿಲ್ಲೆಯ ದರೋಜಿ ಧಾಮ ವಿಶೇಷ ಆಶ್ರಯವಾಗಿದೆ. ಇವೆಲ್ಲವೂ ಪರಿಸರ ಸಮತೋಲನಕ್ಕೆ ಕೊಡುಗೆ ನೀಡಿವೆ ಎಂದರು.
ಸುರಂಗಮಾರ್ಗ , ಹೆದ್ದಾರಿಗಳು ಕಾಡಿನ ಅವನತಿ ಮತ್ತು ಮಾನವ ಪ್ರಾಣಿ ಸಂಘರ್ಷಕ್ಕೂ ಎಡೆ ಮಾಡಿಕೊಡಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯಶಿಕ್ಷಕಿ ಲೀಲಾವತಿ ಮಾತನಾಡಿ ಪರಿಸರದಲ್ಲಿ ಎಲ್ಲ ಜೀವಿಗಳಿಗೂ ಬಾಳುವ ಹಕ್ಕು ಇದೆ.
ಅವುಗಳ ರಕ್ಷಣೆ ಮಾಡಬೇಕು. ಮಕ್ಕಳು ಪ್ಲಾಸ್ಟಿಕ್ ಬಳಕೆಕಡಿಮೆ ಮಾಡಬೇಕು. ಗಿಡಮರ ಬೆಳೆಸಿ ಪರಿಸರ ಪ್ರೇಮಿಗಳಾಗಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ತಾವೇ ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶಿಸಿದ ಮಧು, ಪರಿಸರದಲ್ಲಿ ಜೀವ ವೈವಿಧ್ಯದ ವಿಶೇಷ ಮಹತ್ವವ ವಿವರಿಸಿ, ಮಕ್ಕಳ ಕುತೂಹಲ ತಣಿಸಿದರು. ಶಾಲೆಯ ಶಿಕ್ಷಕರು ಇದ್ದರು.