ಯಳಂದೂರು ಪಟ್ಟಣದ ಗೌತಮ್ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಆರ್. ವಿನೋತ್ ಪ್ರಿಯಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಸೇರಿಂತೆ ಅನೇಕರು ಇದ್ದರು.
ಯಳಂದೂರು: ಪಟ್ಟಣದ ತಾಲೂಕು ಆಸ್ಪತ್ರೆ, ಕರ್ನಾಟಕ ಪಬ್ಲಿಕ್ ಶಾಲೆ ಹಾಗೂ ಗೌತಮ್ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಪಶು ಸಂಗೋಪನೆ, ಮೀನುಗಾರಿಕೆ ಇಲಾಖೆಯ ಸಹಕಾರ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿರುವ ಆರ್. ವಿನೋತ್ ಪ್ರಿಯಾ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುತ್ತಿರುವ ಸಲವತ್ತುಗಳು, ಔಷಧೋಪಚಾರ, ವೈದ್ಯಕೀಯ ಸೇವೆ ಕುರಿತು ಪರಿಶೀಲನೆ ನಡೆಸಿದರು. ನಂತರ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ಇಲ್ಲಿನ ಶಿಕ್ಷಕರು ಬಿಇಒಯಿಂದ ಶಾಲೆಯ ಪ್ರಗತಿ, ಮಕ್ಕಳ ದಾಖಲಾತಿ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಶಾಲೆಯ ಮಕ್ಕಳು ಮೈದಾನದಲ್ಲಿ ಆಟ ಆಡುತ್ತಿದ್ದನ್ನು ಕಂಡು ಈಚೆ ಯಾಕೆ ಬಿಟ್ಟಿರುವುದು ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರು ಈಗ ದೈಹಿಕ ಶಿಕ್ಷಣದ ತರಗತಿ ಇರುವುದರಿಂದ ಈಚೆ ಬಿಟ್ಟುರುವುದಾಗಿ ಮಾಹಿತಿ ನೀಡಿದರು. ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಯಾವುದೇ ತೊಂದರೆಯಾಗಬಾರದು, ಪರೀಕ್ಷೆಗೆ ಏನೇನು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬುದರ ಬಗ್ಗೆ ಬಿಇಒರಿಂದ ಮಾಹಿತಿಯನ್ನು ಪಡೆದುಕೊಂಡರು.
ನಂತರ ಗೌತಮ್ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲವರು ಇಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಆಹಾರ ಪದಾರ್ಥಗಳನ್ನು ಪರಿಶೀಲನೆ ನಡೆಸಿದರು. ಅಕ್ಕಿ, ಬೇಳೆಕಾಳು ಸೇರಿದಂತೆ ಇತರ ವಸ್ತುಗಳು, ಆಹಾರ ತಯಾರಿಸುವ ಅಡುಗೆ ಕೋಣೆಯನ್ನು ಪರಿಶೀಲಿಸಿದರು. ಅಲ್ಲದೆ ಮಕ್ಕಳ ಮಾಹಿತಿ, ದಾಖಲಾತಿಗಳ ಕಡತಗಳನ್ನು ಪರಿಶೀಲಿಸಿದರು. ಕೇಂದ್ರದ ಮುಂಭಾಗದಲ್ಲಿರುವ ಮಕ್ಕಳ ಆಟಿಕೆ ಆಡುವ ಮೈದಾನದಲ್ಲಿ ಮಕ್ಕಳು ಬಿಸಿಲಿನಲ್ಲಿ ಆಟವಾಡುತ್ತಿದ್ದನ್ನು ಕಂಡು ಇವರಿಗೆ ನೆರಳು ಮಾಡಬೇಕು. ದಾಖಲೆಗಳನ್ನು ಸರಿಯಾಗಿ ಇಡಬೇಕು. ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ನೀಡುವ ಆಹಾರದ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಶಿಶು ಅಭಿವೃದ್ಧಿ ಅಧಿಕಾರಿ ಜಯಶೀಲರವರಿಗೆ ಸೂಚನೆ ನೀಡಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಸುರೇಶ್, ತಾಪಂ ವ್ಯವಸ್ಥಾಪಕ ರವೀಂದ್ರ, ಪಪಂ ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಬಿಇಒ ಮಾರಯ್ಯ, ಜೆಇ ನಾಗೇಂದ್ರ ಸೇರಿದಂತೆ ಅನೇಕರು ಇದ್ದರು.