ಪಟ್ಟಣದ ಮಸೀದಿ ವೃತ್ತದಿಂದ ಚಿನ್ನದ ಬೀದಿ ರಸ್ತೆಗೆ ಸಂಪರ್ಕ ಬೆಸೆಯುವ ರಸ್ತೆಯ ಪುಟ್ಬಾತ್‌ಗಳಲ್ಲಿ ವ್ಯಾಪಾರ ಮಾಡದಂತೆ ನಗರಸಭೆ ಕಂದಾಯ ಅಧಿಕಾರಿ ರಮೇಶ್ ಸೂಚನೆ ನೀಡಿದರು. ನಂಜುಂಡಶೆಟ್ಟಿ, ಪ್ರಭಾಕರ್ ಇತರರು ಇದ್ದರು.
- ತಳ್ಳುಗಾಡಿ ವ್ಯಾಪಾರಿಗಳಿಗೆ ಕಂದಾಯ ಅಧಿಕಾರಿ ರಮೇಶ್ ತಿಳುವಳಿಕೆ
ಕೊಳ್ಳೇಗಾಲ: ಪಟ್ಣಣದ ಪ್ರಮುಖ ರಸ್ತೆಗಳ ಪುಟ್ಬಾತ್ ನಲ್ಲಿ ಹಾಕಿಕೊಂಡಿರುವ ತಳ್ಳುಗಾಡಿಗಳು, ಅಂಗಡಿ- ಮುಂಗಟ್ಟುಗಳನ್ನು ತೆರವುಗೊಳಿಸುವಂತೆ ವ್ಯಾಪಾರಿಗಳಿಗೆ ಸೋಮವಾರ ನಗರಸಭೆ ಅಧಿಕಾರಿಗಳು ಸೂಚನೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್, ಡಾ.ರಾಜಕುಮಾರ್, ಡಾ.ವಿಷ್ಣುವರ್ದನ್, ಚಿನ್ನದ ಅಂಗಡಿ ಬೀದಿ, ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪ, ಸರ್ಕಾರಿ ಆಸ್ಪತ್ರೆ ಮುಂಭಾಗದ ಹೆದ್ದಾರಿ ರಸ್ತೆಗಳ ಪುಟ್ಬಾತ್‌ಗಳನ್ನು ಅತಿಕ್ರಮಿಸಿಕೊಂಡು ವ್ಯಾಪಾರಿಗಳನ್ನು ನಗರಸಭೆ ಕಂದಾಯ ಅಧಿಕಾರಿ ರಮೇಶ್, ಬಿಲ್ ಕಲೆಕ್ಟರ್ ನಂಜುಂಡಶೆಟ್ಟಿ, ಪ್ರಭಾಕರ್, ಸುಂಕ ವಸೂಲಿಗಾರ ನಾಗರಾಜು, ಸಿಬ್ಬಂದಿ ಮಧು ಭೇಟಿ ಮಾಡಿ ತೆರವುಗೊಳಿಸುವಂತೆ ತಿಳುವಳಿಕೆ ಹೇಳಿದರು.
ಪಾದಚಾರಿಗಳ ಸುರಕ್ಷತೆ ಮತ್ತು ಓಡಾಟಕ್ಕೆ ಆಧ್ಯತೆ ನೀಡಬೇಕೆಂಬ ಉದ್ದೇಶದಿಂದ ಪುಟ್ಬಾತ್ ಅತಿಕ್ರಮಿಸಿಕೊಳ್ಳಬಾರದೆಂಬುದು ಸುಪ್ರೀಂ ಕೋರ್ಟ್ ಆದೇಶಿವಾಗಿದೆ. ಹಾಗಾಗಿ, ಇನ್ಮುಂದೆ ಪುಟ್ಬಾತ್ ನಲ್ಲಿ ಯಾವುದೇ ವ್ಯಾಪಾರ ವಹಿವಾಟು ಮಾಡಬಾರದು. ಅಂಗಡಿಯೊಳಗೆ ವಸ್ತುಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.
ನಗರಸಭೆ ಕಂದಾಯ ಅಧಿಕಾರಿ ರಮೇಶ್ ಮಾತನಾಡಿ, ಪಟ್ಟಣದ ಪ್ರಮುಖ ರಸ್ತೆಗಳ ಪುಟ್ಬಾತ್‌ನಲ್ಲಿ ತಲೆ ಎತ್ತಿರುವ ಅಂಗಡಿಗಳಿಗೆ ಭೇಟಿ ನೀಡಲಾಗಿದೆ. ಇನ್ನೆರಡು ದಿನದಲ್ಲಿ ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುವುದನ್ನು ನಿಲ್ಲಿಸಬೇಕು ಎಂದು ತಿಳಿಸಲಾಗಿದೆ. ನಿಯಮ ಉಲಂಘನೆ ಮಾಡಿದರೆ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುತ್ತದೆ ಎಂದರು.