ಕೊಳ್ಳೇಗಾಲ ಪಟ್ಟಣದಲ್ಲಿ ಹಾದು ಹಾಗಿರುವ ಚತುಷ್ಪಥ ರಸ್ತೆಯ ವಿಭಜಕಗಳಿಗೆ ವಿದ್ಯುತ್ ದೀಪಗಳ ಅಳವಡಿಸದಿರುವುದು.
- ರಸ್ತೆ ವಿಭಜಕಗಳಿಗೆ ಅಳವಡಿಸಿಲ್ಲ ಸಾಲು ವಿದ್ಯುತ್ ದೀಪ
ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಚತುಷ್ಪಥ ರಸ್ತೆಯ(ರಾಷ್ಟ್ರೀಯ ಹೆದ್ದಾರಿ-209) ವಿಭಜಕಗಳಿಗೆ ಸಾಲು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಅರೆಬರೆಯಾಗಿದೆ.
2016ರಲ್ಲಿ ಅಂದಿನ ಶಾಸಕ ಶಾಸಕ ಎಸ್.ಜಯಣ್ಣ ಅವರ ಅವಧಿಯಲ್ಲಿ ಮುಡಿಗುಂಡ ಬಡಾವಣೆಯಿಂದ ಹೊಸಅಣಗಳ್ಳಿ ಬಡಾವಣೆವರೆಗೆ ಚತುಷ್ಪಥ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ರಾತ್ರಿ ವೇಳೆ ವಾಹನಗಳ ಸುಗಮ ಸಂಚಾರಕ್ಕೆ ರಸ್ತೆಯ ವಿಭಜಕಗಳಲ್ಲಿ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸುವ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಅಂತೆಯೇ ನಗರಸಭೆಯ 15ನೇ ಹಣಕಾಸು ಯೋಜನೆಯಡಿ 47ಲಕ್ಷ ರೂ. ಹಾಗು ಜಿಲ್ಲಾ ನಗರಾಭಿವೃದ್ಧಿ ಕೋಶ ಇಲಾಖೆ (ಡಿಯುಡಿಸಿ)ಯಿಂದ ನಗರೋತ್ಥಾನ 4ನೇ ಹಂತದಲ್ಲಿ ಸುಮಾರು 1.66 ಕೋಟಿ ರೂ. ಸೇರಿದಂತೆ ಎರಡು ಹಂತದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಕ್ರಿಯಾ ಯೋಜನೆ ತಯಾರಿಸಲಾಯಿತು.
ಈ ಹಿಂದೆ ಕ್ಷೇತ್ರದ ಶಾಸಕರಾಗಿದ್ದ ಎನ್.ಮಹೇಶ್ ಅವಧಿಯಲ್ಲಿ ನಗರಸಭೆಯ 15ನೇ ಹಣಕಾಸು ಯೋಜನೆಯಡಿ 47 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಕಾಮಗಾರಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರ ಅಧಿಕಾರಾವಧಿಯಲ್ಲಿ (ಎರಡು ವರ್ಷದ ಹಿಂದೆ) ಪೂರ್ಣಗೊಂಡಿತು. ಅಚ್ಗಾಳ್ ಯಾತ್ರಿನಿವಾಸ್ ವೃತ್ತದಿಂದ ಐಬಿ ವೃತ್ತದವರೆಗೆ ಸುಮಾರು 59 ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ನಗರೋತ್ಥಾನದ 4ನೇ ಹಂತದ 1.66 ಕೋಟಿ ರೂ. ವೆಚ್ಚದಲ್ಲಿ ಮುಡಿಗುಂಡ ಬಡಾವಣೆಯಿಂದ ಅಚ್ಗಾಳ್ ವೃತ್ತ, ಅಣಗಳ್ಳಿ ಬಡಾವಣೆಯಿಂದ ಐಬಿ ವೃತ್ತದವರೆಗೆ ಬಾಕಿ ಉಳಿದಿರುವ ಸುಮಾರು 200 ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಇದರ ಜವಾಬ್ದಾರಿ ಹೊತ್ತ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಚತುಷ್ಪಥ ರಸ್ತೆ ಕಾಮಗಾರಿ ನಡೆದು 10 ವರ್ಷವಾದರೂ ರಸ್ತೆ ವಿಭಕಗಳಿಗೆ ಹಾಕಬೇಕಿದ್ದ ಸಾಲು ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಪೂರ್ಣಗೊಳ್ಳದಿರುವುದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಟೆಂಟರ್ ಪ್ರಕ್ರಿಯೆ ವಿಳಂಬ ಚತುಷ್ಪಥ ರಸ್ತೆಯಲ್ಲಿ ಬಾಕಿ ಉಳಿದಿರುವ ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಸಂಬಂಧ 2025 ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿತ್ತು. ಸುಮಾರು 18 ಎಲೆಕ್ಟ್ರಿಕಲ್ ಏಜೆನ್ಸಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿದ್ದವು. ಆದರೆ ಟೆಂಡರ್‌ದಾರರ ದಾಖಲಾತಿ ಪರಿಶೀಲನೆ ಅಧಿಕಾರಿಗಳಿಂದ ವಿಳಂಬವಾಗುತ್ತಿರುವ ಹಿನ್ನೆಲೆ ಯಲ್ಲಿ ಚತುಷ್ಪಥ ರಸ್ತೆಗೆ ಬೆಳಕು ನೀಡುವ ಕಾಮಗಾರಿಗೆ ತೊಡಕು ಎದುರಾಗಿದೆ.
ಸಂಚಾರಿಗಳಿಗೆ ಕತ್ತಲ ಭಾಗ್ಯ ಬೆಂಗಳೂರು, ತಮಿಳುನಾಡು, ಮೈಸೂರು, ಚಾಮರಾಜನಗರ, ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಈ ಮಾರ್ಗದಲ್ಲಿ ರಸ್ತೆಯಲ್ಲಿ ಸಂಚರಿಸುತ್ತವೆ. ಮುಡಿಗುಂಡ, ಬಾಪುನಗರ, ಜಿ.ಪಿ ಮಲ್ಲಪ್ಪಪುರಂ, ಆನಂದ ಜ್ಯೋತಿ ಕಾಲನಿ, ಹೊಸ ಅಣಗಳ್ಳಿ ಬಡಾವಣೆಗಳು ಚತುಷ್ಪತ ರಸ್ತೆಗೆ ಹೊಂದಿಕೊಂಡತಿವೆ. ಇಲ್ಲಿನ ನಿವಾಸಿಗಳು ಕೊಳ್ಳೇಗಾಲ ಪಟ್ಟಣದೊಳಗೆ ಪ್ರವೇಶಿಸಬೇಕಾದರೆ ಈ ರಸ್ತೆ ಮಾರ್ಗವಾಗಿ ಬರಬೇಕಿದೆ. ವಿದ್ಯುತ್ ದೀಪಗಳ ಅಳವಡಿಕೆ ಕಾಮಗಾರಿ ಅಪೂರ್ಣವಾಗದಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ಸಂಚರಿಸುವವರಿಗೆ ಕತ್ತಲ ಭಾಗ್ಯ ದೊರೆತಂತಾಗಿದೆ. ಇತ್ತೀಚೆಗೆ ಮುಂಡಿಗುಂಡ ಬಡಾವಣೆ ವ್ಯಾಪ್ತಿಯ ಚತುಷ್ಪಥ ರಸ್ತೆಯ ವಿಭಜಕಗಳಿಗೆ ಬಣ ತುಂಬಲಾಗಿದ್ದು, ಕತ್ತಲಲ್ಲಿ ವಿಭಜಕಗಳು ವಾಹನಗಳಲ್ಲಿ ಸಂಚರಿಸುವವರಿಗೆ ಸ್ಪಷ್ಟವಾಗಿ ಗೋಚರಿಸುವುದರಿಂದ ಅನುಕೂಲವಾಗಿದೆ. ಆದರೆ ಅಣಗಳ್ಳಿ ಬಡಾವಣೆ ಮುಂಭಾಗದ ರಸ್ತೆಯ ವಿಭಜಕಗಳಿಗೆ ಬಣ ತುಂಬಿಸಿಲ್ಲ. ಇಲ್ಲಿ ವಿದ್ಯುತ್ ದೀಪ ಕಂಬಗಳ ವ್ಯವಸ್ಥೆ ಇಲ್ಲದಿದ್ದರಿಂದ ವಿಭಜಕಗಳು ಕಾಣದೆ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆ ಅಪಘಾತಗಳ ಆತಂಕದಲ್ಲಿ ವಾಹನ ಸವಾರರು ಸಂಚರಿಸುವಂತಾಗಿದ್ದು, ಅನೇಕ ಬಾರಿ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸಿದೆ.
4 ತಿಂಗಳ ಹಿಂದೆಯೇ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಚತುಷ್ಪಥ ರಸ್ತೆಗೆ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಕರೆಯಲಾಗಿದೆ. 18 ಟೆಂಡರ್‌ದಾರರು ಭಾಗವಹಿಸಿದ್ದಾರೆ. ಇಲ್ಲಿಯವರೆಗೂ ಕೆಲವರ ಅಸಲಿ ದಾಖಲಾತಿ ಪರಿಶೀಲಿಸಲಾಗಿದೆ. ಇನ್ನೂ ಕೆಲವರು ಒದಗಿಸಿಲ್ಲ. ತಡ ಮಾಡಿದರೆ ಕೈಬಿಡಲಾಗುತ್ತದೆ ಎಂದು ಅವರಿಗೆ ಎಚ್ಚರಿಸಲಾಗಿದ್ದು, ಮೇ 11ಕ್ಕೆ ಗಡುವು ನೀಡಲಾಗಿದೆ. ಬಳಿಕ, ಸೂಕ್ತ ದಾಖಲೆ ಒದಗಿಸಿದವರನ್ನು ಟೆಂಡರ್ ನೀಡಲಾಗುತ್ತದೆ. 1 ತಿಂಗಳ ಹಿಂದಷ್ಟೆ ಅಧಿಕಾರ ವಹಿಸಿಕೊಂಡಿದ್ದೇನೆ. ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಲೈಟ್ ಅಳವಡಿಕೆ ಕಾಮಗಾರಿ ಜರೂರಾಗಿ ನಡೆಸಲು ಕ್ರಮವಹಿಸಿದ್ದೇನೆ.
ರಾಮಚಂದ್ರ ಇಇ, ಜಿಲ್ಲಾ ನಗರಾಭಿವೃದ್ಧಿ ಕೋಶ