ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಖಂಡ ಅಯ್ಯನಪುರ ಶಿವಕುಮಾರ್ ಮಾತನಾಡಿದರು.
- ಬಲಗೈ ಸಮುದಾಯದ ಮುಖಂಡ ಅಯ್ಯನಪುರ ಶಿವಕುಮಾರ್ ಹೇಳಿಕೆ
- ನೂತನ ರೋಸ್ಟರ್ ಬಿಂದು ಪದ್ಧತಿ ಪರಿಷ್ಕರಿಸುವಂತೆ ಒತ್ತಾಯ
- ನಾಗಮೋಹನ್‌ದಾಸ್ ವರದಿ ತಿರಸ್ಕಾರಕ್ಕೆ ಆಗ್ರಹ
ಚಾಮರಾಜನಗರ: ಪರಿಶಿಷ್ಟ ಜಾತಿಯ ಒಳಮೀಸಲಾತಿಯಲ್ಲಿ ಬಲಗೈ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಅಧಿವೇಶನದಲ್ಲಿ ಚರ್ಚಿಸುವಂತೆ ಒತ್ತಾಯಿಸಿ ಜಿಲ್ಲೆಯ ನಾಲ್ಕೂ ಶಾಸಕರ ಮನೆಯ ಮುಂಭಾಗ ಮಾ.7 ರಂದು ಧರಣಿ ನಡೆಸಲಾಗುವುದು ಎಂದು ಬಲಗೈ ಸಮುದಾಯ ಒಕ್ಕೂಟದ ಮುಖಂಡ ಅಯ್ಯನಪುರ ಶಿವಕುಮಾರ್ ಹೇಳಿದರು.
ಜಿಲ್ಲೆಯ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್‌ಪ್ರಸಾದ್ ಹಾಗೂ ಎಂ.ಆರ್.ಮಂಜುನಾಥ್ ಅವರ ಮನೆ ಮುಂಭಾಗ ಜಮಾಯಿಸಿ, ಕೆಲಕಾಲ ಧರಣಿ ನಡೆಸಲಾಗುವುದು. ನಮ್ಮ ಸಮುದಾಯದ ಯುವಕರ ಶಿಕ್ಷಣ ಮತ್ತು ಉದ್ಯೋಗದ ದೃಷ್ಟಿಯಿಂದ ಒಳಮೀಸಲಾತಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿ ಮಾಡುವುದರಲ್ಲಿ ನಾವು ಯಾವುದೇ ವಿರೋಧವನ್ನು ವ್ಯಕ್ತಪಡಿಸಿಲ್ಲ. ಆದರೆ ಮಾದಿಗ ಸಮುದಾಯದ ಅರುಣ್‌ಕುಮಾರ್ ಮತ್ತು ಭಾಸ್ಕರ್ ಪ್ರಸಾದ್ ಅವರು ವಿನಾಃಕಾರಣ ಬಲಗೈ ಸಮುದಾಯದ ಸಚಿವರನ್ನು ಟೀಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ರಕ್ತಪಾತ ಮಾಡುತ್ತೇವೆ ಎಂಬಂತಹ ಮಾತುಗಳನ್ನಾಡಿ, ಜಾತಿ ಜಾತಿಗಳಲ್ಲಿ ವೈಷಮ್ಯ ಉಂಟು ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಡಾ.ಎಚ್.ಸಿ.ಮಹದೇವಪ್ಪ, ಪರಮೇಶ್ವರ್, ಖರ್ಗೆ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಸಮುದಾಯದವರ ನೆರವಿಲ್ಲದೇ ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ ಅಂತವರು ಹೇಗೆ ಗೆಲ್ಲುತ್ತಾರೆ ನೋಡುತ್ತೇವೆ ಎಂದು ಸವಾಲು ಹಾಕಿದರು.
ರಾಜ್ಯದಲ್ಲಿರುವ ಮಾದಿಗ ಸಮುದಾಯ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿಲ್ಲ. ಅವರ ಬಡಾವಣೆ ಹಾಗೂ ಮನೆಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವೇ ಇರುವುದಿಲ್ಲ. ನಮ್ಮ ಸಮಾಜಕ್ಕೆ ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಶೂನ್ಯವಾಗಿದ್ದು, ಅಂಬೇಡ್ಕರ್ ಅವರಿಗೆ ಪರ್ಯಾಯವಾಗಿ ಬಾಬು ಜಗಜೀವನ್ ರಾಮ್ ತಂದಿದ್ದಾರೆ. ಇಂತವರಿಂದ ನಾವು ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹೇಳಿದರು.
ನ್ಯಾ.ಎಚ್.ಎಸ್.ನಾಗಮೋಹನ್ ದಾಸ್ ಒಳಮೀಸಲಾತಿ ವರದಿಯೇ ಅವೈಜ್ಞಾನಿಕವಾಗಿದ್ದು, ಅದನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು. ರೋಸ್ಟರ್ ಬಿಂದು ಪದ್ಧತಿಯಲ್ಲಿ ಪರಿಷ್ಕರಣೆ ಮಾಡಬೇಕು. ಹಿಂದಿನ ಶೇ.50 ರಷ್ಟು ಮೀಸಲಾತಿಯ ನಿಯಮದಂತೆ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಲಗೈ ಸಮುದಾಯ ಒಕ್ಕೂಟದ ಆರ್.ಮಹದೇವ್, ನಲ್ಲೂರು ಸೋಮೇಶ್ವರ್, ಆರ್.ಪಿ.ನಂಜುಂಡಸ್ವಾಮಿ, ಸೋಮಣ್ಣ, ಪಾಪಣ್ಣ, ಹೆಬ್ಬಸೂರು ರಂಗಸ್ವಾಮಿ, ನಾಗವಳ್ಳಿ ನಾಗಯ್ಯ ಹಾಜರಿದ್ದರು.