ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಶ್ರೀ ಸಿದ್ದಪ್ಪಾಜಿ ಗದ್ದುಗೆ ದರ್ಶನವನ್ನು ಭಾನುವಾರ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಪಡೆದರು.  
ಚಾಮರಾಜನಗರ

ಅಭಿವೃದ್ಧಿ ಪ್ರಾಧಿಕಾರ ರಚಿಸಿದರೆ ಭಕ್ತರಿಗೆ ಅನುಕೂಲ

ಪ್ರಮುಖ ಮುಖ್ಯಾಂಶಗಳು

  • ಮಠದವರು ಅನುಮಾನಪಡಬೇಕಿಲ್ಲ
  • ಸಚಿವ ಎಚ್.ಸಿ.ಮಹದೇವಪ್ಪ ಚಿಕ್ಕಲ್ಲೂರು ಸಿದ್ದಪ್ಪಾಜಿ ಗದ್ದುಗೆ ದರ್ಶನ
ಕೊಳ್ಳೇಗಾಲ: ಶ್ರೀಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಕ್ರಮವಹಿಸಿರುವುದು ಭಕ್ತರಿಗೆ ಮೂಲ ಸೌಕರ್ಯ ಒದಗಿಸಬೇಕೆಂಬುದಾಗಿದೆ. ಹಾಗಾಗಿ ಮಠದವರು ಸರ್ಕಾರದ ಮೇಲೆ ಅನುಮಾನಪಡಬೇಕಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಚಿಕ್ಕಲ್ಲೂರಿನಲ್ಲಿ ಭಾನುವಾರ ಶ್ರೀ ಸಿದ್ದಪ್ಪಾಜಿ ಗದ್ದುಗೆ ದರ್ಶನ ಪಡೆದ ಬಳಿಕ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರೀಮಲೆ ಮಹದೇಶ್ವರ ಬೆಟ್ಟ ಇನ್ನಿತರ ಕಡೆ ಪ್ರಾಧಿಕಾರ ರಚನೆ ಮಾಡಲಾಗಿದೆ. ಅಂತೆಯೇ, ಶ್ರೀ ಮಂಟೇಸ್ವಾಮಿ, ಶ್ರೀರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೆ ಪರಂಪರೆಯ ವಸ್ತು ಸಂಗ್ರಹ, ಐತಿಹಾಸಿಕ ವಿಷಯಗಳು, ಆಚಾರ-ವಿಚಾರಗಳನ್ನು ಸಂರಕ್ಷಿಸಬಹುದಾಗಿದೆ. ಭಕ್ತರಿಗೆ ಮೂಲ ಸೌಕರ್ಯ ನೀಡಬಹುದಾಗಿದೆಯೇವಿನಃ ಸರ್ಕಾರ ಇಲ್ಲಿನ ಆಸ್ತಿಯ ಮೇಲೆ ಕಣ್ಣಿಟ್ಟಿಲ್ಲ, ವಶಕ್ಕೂ ಪಡೆಯುವುದಿಲ್ಲ. ಇಲ್ಲಿ ಯಾವುದೇ ಗೊಂದಲವಿಲ್ಲ. ಮುಂದಿನ ದಿನಗಳಲ್ಲಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚಿಸಿ ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಮಳವಳ್ಳಿ ಮಠ, ಕಪ್ಪಡಿ, ಚಿಕ್ಕಲ್ಲೂರು, ಕುರುಬನಕಟ್ಟೆ, ಬೊಪ್ಪೇಗೌಡನಪುರ ಮಠ ಮಂಟೇಸ್ವಾಮಿ ಪರಂಪರೆಗೆ ಸೇರಿದ ದೇವಾಲಯಗಳಾಗಿದೆ. ಶ್ರೀ ಮಂಟೇಸ್ವಾಮಿ, ಶ್ರೀ ರಾಚಪ್ಪಾಜಿ, ಶ್ರೀ ಸಿದ್ದಪ್ಪಾಜಿ, ದೊಡ್ಡಮ್ಮತಾಯಿ, ಚೆನ್ನಾಜಮ್ಮ, ಚೆನ್ನಯ್ಯ-ಲಿಂಗಯ್ಯ ಶರಣರಾಗಿದ್ದಾರೆ. ಅಲ್ಲಮ ಪ್ರಭುಗಳ ಉತ್ತಾರಾಧಿಕಾರಿಗಳೇ ಮಂಟೇಸ್ವಾಮಿಗಳಾಗಿದ್ದಾರೆ. 12ನೇ ಶತಮಾನದ ಬಸವ ಚಳವಳಿಯನ್ನು 15ನೇ ಶತಮಾನದ ಶ್ರೀ ಮಂಟೇಸ್ವಾಮಿ ಮುಂದುವರಿಸಿದ್ದಾರೆ ಎಂದರು.
ಶ್ರೀ ಮಂಟೇಸ್ವಾಮಿ ಪರಂಪರೆಯಲ್ಲಿ ಪ್ರಾಣಿ ಬಲಿ ಪದ್ಧತಿಯಿಲ್ಲ. ಮಾಂಸಾಹಾರಿ ಮತ್ತು ಸಸ್ಯಾಹಾರಿ ಪರಂಪರೆಯ ಭಕ್ತರಾಗಿದ್ದಾರೆ. ನ್ಯಾಯಾಲಯವೂ ಜಾತ್ರೆಯಲ್ಲಿ ಭಕ್ತರ ಆಹಾರ ಪದ್ಧತಿ ಹತ್ತಿಕ್ಕಬಾರದು, ಪ್ರಾಣಿ ಬಲಿ ಮೂಲಕ ಮೂಢನಂಬಿಕೆ ಆಚರಣೆಯೂ ಆಗಬಾರದು ಎಂದು ತಿಳಿಸಿದೆ ಎಂದು ಹೇಳಿದರು.
ಸಂವಿಧಾನ ಆಶಯ:
ಸಂವಿಧಾನ ಆಶಯವೇ ಶ್ರೀ ಮಂಟೇಸ್ವಾಮಿ ಚಳವಳಿಯಾಗಿದೆ. ಬಳಿಕ ದೇವಾಲಯ ಆವರಣದಲ್ಲಿ ಶ್ರೀ ಮಂಟೇಸ್ವಾಮಿ ಪರಂಪರೆ ಹಿತರಕ್ಷಣಾ ಹೋರಾಟ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಾಗಟೆ ಬಾರಿಸುವ ಮೂಲಕ ಚಾಲನೆ ನೀಡಿ, ಈ ಚಳವಳಿಯ ಕಿಡಿ ಆರದಂತೆ ನೋಡಿಕೊಳ್ಳಬೇಕು. ವಿಶ್ವ ಪ್ರಾಣಿ ದಯಾ ಮಂಡಳಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಡೆಯಬಾರದು ಎಂದು ನ್ಯಾಯಾಲಯ ಮೆಟ್ಟಿಲೇರಿದೆ. ಈಗಾಗಲೇ ನ್ಯಾಯಾಲಯ ಭಕ್ತರ ಆಚರಣೆಗೆ ಅಡ್ಡಿಯಾಗಬಾರದು ಎಂದು ಮಧ್ಯಂತರ ಆದೇಶ ನೀಡಿದೆ. ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಕೆಲಸ ಮಾಡಲಿ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು
ಮಠಾಧೀಶರ ಜತೆ ಚರ್ಚೆ
ವೇದಿಕೆ ಕಾರ್ಯಕ್ರಮ ಬಳಿಕ ಹಳೇ ಮಠದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮಧ್ಯಾಹ್ನದ ಭೋಜನ ಸವಿದು ಬೋಪ್ಪೇಗೌಡನಪುರದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚೆನ್ನರಾಜೇ ಅರಸ್ ಅವರ ಜತೆ ಕೆಲ ಕಾಲ ಚರ್ಚಿಸಿದರು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಮಾಜಿ ಶಾಸಕ ಆರ್.ನರೇಂದ್ರ ಇದ್ದರು.
ಚಿಕ್ಕಲ್ಲೂರಿಗೆ ಚತುಷ್ಪಥ ರಸ್ತೆ
ಬೆಂಗಳೂರು ಹೆದ್ದಾರಿ ರಸ್ತೆಯಿಂದ ಪಾಳ್ಯ ಮಾರ್ಗವಾಗಿ ಬರುವ ಚಿಕ್ಕಲ್ಲೂರು ಸಂಪರ್ಕಿಸುವ ರಸ್ತೆ ಹಾಗೂ ದೊಡ್ಡಿಂದುವಾಡಿ ಗ್ರಾಮದಿಂದ ಚಿಕ್ಕಲ್ಲೂರು ಸಂಪರ್ಕಿಸುವ ರಸ್ತೆಯನ್ನು ಚತುಷ್ಪಥ ರಸ್ತೆ ಮಂಜೂರು ಮಾಡಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. ಸಿದ್ದಪ್ಪಾಜಿ ಗದ್ದುಗೆ ದರ್ಶನ ಪಡೆದರು.
ಮಾಜಿ ಶಾಸಕ ಆರ್.ನರೇಂದ್ರ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಶ್ರೀ ಮಂಟೇಸ್ವಾಮಿ ಪರಂಪರೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಉಗ್ರ ನರಸಿಂಹ ಗೌಡ, ಸಾಹಿತಿ ಮಹದೇವ ಶಂಕನಪುರ, ಶಂಭುಲಿಂಗಸ್ವಾಮಿ, ಸಚಿವ ಎಚ್.ಸಿ ಮಹದೇವಪ್ಪ ಅಭಿಮಾನಿ ಬಳಗದ ಅಧ್ಯಕ್ಷ ವಿ.ಎನ್.ಮಹದೇವಯ್ಯ, ಮುಖಂಡ ವೆಂಕಟರಾಮಣ ಪಾಪು, ಶಿವಕುಮಾರ್ ಮಧುವನಹಳ್ಳಿ, ಕಿನಕಹಳ್ಳಿ ರಾಚಯ್ಯ, ಯೋಗೇಶ್ ಇತರರು ಇದ್ದರು.