ಚಾಮರಾಜನಗರ ತಾಲೂಕಿನ ಆಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಾರು ಸಾಂಸ್ಕೃತಿಕ ಪ್ರತಿಷ್ಠಾನ, ಶಾಲಾ ಶಿಕ್ಷಣಇಲಾಖೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ) ಪ್ರಾರಂಭ ಸಮಾರಂಭವನ್ನು ಶಾಸಕ ಸಿ. ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ಶೀಲಾಕುಮಾರಿ, ಚಂದ್ರಪಾಟೀಲ್, ಹನುಮಶೆಟ್ಟಿ, ಜಿ.ಎಂ.ರವಿಶಂಕರಮೂರ್ತಿ, ಸಿಆರ್‌ಪಿ ನಂಜುಂಡಸ್ವಾಮಿ ಇತರರಿದ್ದರು. 
ಚಾಮರಾಜನಗರ

ಸರ್ಕಾರಿ ಶಾಲೆಗಳ ಅಭಿವೃದ್ಧಿ ಆದ್ಯತೆ

ಕಿರಣ್ ಮಾದರಹಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿಕೆ
  • ಆಲೂರು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭ
  • ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗ
ಚಾಮರಾಜನಗರ: ಬಡ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ದೃಷ್ಟಿಯಿಂದ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ತಾಲೂಕಿನ ಆಲೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಚಾರು ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರ ಪೂರ್ವ ಪ್ರಾಥಮಿಕ ಶಾಲೆ (ಎಲ್‌ಕೆಜಿ, ಯುಕೆಜಿ) ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಿ ಅವರು ಮಾತನಾಡಿದರು.
ಆಲೂರು ಗ್ರಾಮದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲಾಗುವುದು. ಒಂದೇ ಸೂರಿನಡಿಯಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಆಂಗ್ಲ ಮಾಧ್ಯಮ ಶಾಲೆಯನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ಚಾರು ಸಾಂಸ್ಕೃತಿಕ ಟ್ರಸ್ಟ್ ಸಹಯೋಗದಲ್ಲಿ ಈಗ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುತ್ತಿರುವುದು ಸಂತಸವಾಗಿದೆ . ಇಂತಹ ದಾನಿಗಳು ಮುಂದೆ ಬಂದರೆ ಶಾಲೆಗಳು ಅಭಿವೃದ್ಧಿ ಹೊಂದುತ್ತವೆ. ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತದೆ. ಹಿಂದೆ ಬಡವರಾಗಿದ್ದರು ಕೂಡ ಶಾಲೆಗಳಿಗೆ ಜಮೀನು ದಾನ ಮಾಡಿರುವ ನಿರ್ದಶನಗಳಿವೆ ಎಂದರು.
ಆಲೂರು ಒಂದು ದೊಡ್ಡ ಗ್ರಾಮ, ಪ್ರಬುದ್ಧ ರಾಜಕಾರಣಿಗಳನ್ನು ಕೊಟ್ಟಿರುವ ಗ್ರಾಮದ ಇದಾಗಿದೆ. ದಿ.ಬಿ.ರಾಚಯ್ಯ ಅವರು ರಾಜ್ಯಪಾಲರಾಗಿದ್ದರು, ಈ ಗ್ರಾಮದವರೇ ಶಾಸಕರು, ಜಿ.ಪಂ.ಅಧ್ಯಕ್ಷರು, ಸದಸ್ಯರು ಸಹ ಆಗಿದ್ದರು. ಅವರ ಅವಧಿಯಲ್ಲಿ ಗ್ರಾಮದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬೇಕಿತ್ತು. ಅಧಿಕಾರ ಸಿಕ್ಕಾಗ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದರೆ ಜನರು ಸ್ಮರಿಸಿಕೊಳ್ಳುತ್ತಾರೆ ಎಂದು ಹೇಳಿದರು.
ನಾನು ಶಾಸಕನಾದ ಬಳಿಕ ಕ್ಷೇತ್ರ ಮತ್ತು ಆಲೂರು ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಆಲೂರಿನ ಎಲ್ಲ ಸಮುದಾಯದವರ ಬೀದಿಗಗಳಿಗೆ ಸಿಮೆಂಟ್ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಶಾಲೆ ಅಭಿವೃದ್ಧಿ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂದರು.
ಚಾರು ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷೆ ಶೀಲಾಕುಮಾರಿ ಮಾತನಾಡಿ, ನಾನು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬು ಹಂಬಲವಿತ್ತು. ನನ್ನ ಪತಿ ಡಾ.ನಂಜಪ್ಪ ಅವರ ನಿಧನದ ಬಳಿಕ ಕಳೆದ 2 ವರ್ಷಗಳಿಂದಲೂ ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಈಗ ಸರ್ಕಾರಿ ಶಾಲೆಗಳಿಗೆ ಮಕ್ಕ ಳ ದಾಖಲಾತಿ ಕಡಿಮೆ ಆಗುತ್ತಿರುವುದನ್ನು ಗಮನಿಸಿ, ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸುವ ಪ್ರಸ್ತಾಪ ವನ್ನು ಅಂದಿನ ಮುಖ್ಯ ಶಿಕ್ಷಕರು ನನ್ನ ಗಮನಕ್ಕೆ ತಂದರು. ನಾನು ಇದರ ವೆಚ್ಚವನ್ನು ಸಂಪೂರ್ಣವಾಗಿ ಭರಿಸಿ ಒಂದು ಸುಸಜ್ಜಿತ ಎಲ್‌ಕೆಜಿ, ಯುಕೆಜಿಯನ್ನು ಆರಂಭಿಸಿದ್ದೇವೆ. ಈ ಶಾಲೆಯನ್ನು ಉದ್ಘಾಟಿಸಲು ಶಾಸಕರು ಆಗಮಿಸಿರುವುದು ತುಂಬಾ ಸಂತಸವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಚಂದ್ರಪಾಟೀಲ್, ಬಿಇಓ ಹನುಮಶೆಟ್ಟಿ, ಎಪಿಎಂಸಿ ನಿರ್ದೇಶಕ ಜಿ.ಎಂ.ರವಿಶಂಕರಮೂರ್ತಿ, ಸಿಆರ್‌ಪಿ ನಂಜುಂಡಸ್ವಾಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಿಮ್ಮರಾಜು, ಮುಖ್ಯ ಶಿಕ್ಷಕರಾದ ಪ್ರಭುಸ್ವಾಮಿ, ಆರ್.ಮಹಾದೇವಸ್ವಾಮಿ ಗ್ರಾ.ಪಂ. ಪಿಡಿಓ ಸೋಮಶೇಖರ್, ಗ್ರಾ.ಪಂ.ಮಾಜಿ ಅಧ್ಯಕ್ಷ ಮಹದೇವಸ್ವಾಮಿ,ಮಾಜಿ ಸದಸ್ಯರಾದ ಬಸವಣ್ಣ, ರವಿ, ಮುಖಂಡರಾದ ನಂದೀಶ್, ಬಿರ್ಲಾ ನಾಗರಾಜು, ದೊರೆಸ್ವಾಮಿ, ಕುಮಾರ್, ಶೇಷಣ್ಣ, ಮಲ್ಲಣ್ಣ, ಚಂದ್ರು, ಪರಶಿವಮೂರ್ತಿ, ಗಿರೀಶ್, ಮಲ್ಲು ಹಾಗೂ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು.