ಗುಂಡ್ಲುಪೇಟೆ ತಾಲೂಕಿನ ಯಡಹುಂಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ವಿಸ್ತರಣಾ ಕಾರ್ಯಕ್ರಮವನ್ನು ಮಹದೇವಪ್ರಸಾದ್ ಉದ್ಘಾಟಿಸಿದರು. ಅನಿತಾರಾಣಿ, ಪ್ರಭುಸ್ವಾಮಿ, ಕುಮಾರ್, ನಾಗರಾಜು ಇದ್ದರು.
- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕೃಷಿ ಮೇಲ್ವಿಚಾರಕ ಮಹದೇವಪ್ರಸಾದ್ ಸಲಹೆ
ಕೃಷಿ ಕ್ಷೇತ್ರದ ಬಗ್ಗೆ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಮೇಲ್ವಿಚಾರಕ ಟಿ.ಎಂ.ಮಹದೇವಪ್ರಸಾದ್ ಸಲಹೆ ನೀಡಿದರು.
ತಾಲೂಕಿನ ಯಡಹುಂಡಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಲಾದ ಕೃಷಿ ಪದ್ಧತಿಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿದೆಯೇ ಹೊರತು ಕೃಷಿಯಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ. ಈ ಹಿನ್ನೆಲೆಯಲ್ಲಿ ಉತ್ಪಾದನಾ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಸಲಹೆ ನೀಡಿದರು.
ಉಳುಮೆಯಿಂದ ಕಟಾವಿನ ಹಂತದವರೆಗೆ ರೈತರು ಬದಲಾವಣೆ ಮಾಡಿಕೊಳ್ಳಬೇಕಾದ ಬಗ್ಗೆ ಜಾಗೃತಿ ಮೂಡಿಸಲು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಮಾರುಕಟ್ಟೆ ಮೇಲ್ವಿಚಾರಕ ಗೋಪಿ ಮಾತನಾಡಿ, ರೈತರು ಬೆಳೆ ಬೆಳೆಯುವ ಜತೆಗೆ ಮಾರಾಟದ ವಿಷಯದಲ್ಲಿ ತಂತ್ರಜ್ಞಾನ ಆಧಾರಿತ ಕೃಷಿ ಮಾರುಕಟ್ಟೆ ಬಗ್ಗೆ ತಿಳಿದುಕೊಳ್ಳಬೇಕು. ರೈತರು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತರುವ ಮೊದಲು ಗ್ರೇಡ್ ಮಾಡಬೇಕು.
ವಲಯ ಮೇಲ್ವಿಚಾರಕಿ ಅನಿತಾರಾಣಿ, ಸಂಘದ ಸದಸ್ಯರಾದ ಪ್ರಭುಸ್ವಾಮಿ, ಕುಮಾರ್, ನಾಗರಾಜು, ಸೇವಾ ಪ್ರತಿನಿಧಿ ಸುಮಾ, ಗ್ರಾಮದ ಮುಖಂಡರು, ಸಂಘದ ಸದಸ್ಯರು ಹಾಜರಿದ್ದರು.