ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಹೇಳಿ ಡ್ರಗ್ಸ್ ಬೇಡ (ಸೆ ನೊ ಡ್ರಗ್ಸ್) ಕಾರ್ಯಕ್ರಮದಡಿ ರೈಸ್ (ಆರ್.ಐ.ಎಸ್.ಇ) ಮತ್ತು ಬೇಡ ಬ್ರೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
- ಡಿಸಿ ಶ್ರೀರೂಪಾ ಸಲಹೆ
- ಎಸ್ಪಿ ಎಂ.ಮುತ್ತುರಾಜು ಭಾಗಿ
ಚಾಮರಾಜನಗರ: ನಾಗರಿಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಮಾದಕ ವಸ್ತುಗಳ ಆಕರ್ಷಣೆ, ಚಟಕ್ಕೆ ಒಳಗಾಗದೆ ಕರ್ನಾಟಕವನ್ನು ಮಾದಕ (ಡ್ರಗ್ಸ್) ಮುಕ್ತ ರಾಜ್ಯವನ್ನಾಗಿಸುವ ಸಂಕಲ್ಪ ಮಾಡುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅವರು ಸಲಹೆ ಮಾಡಿದರು.
ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಆಯೋಜಿಸಿದ್ದ ಹೇಳಿ ಡ್ರಗ್ಸ್ ಬೇಡ (ಸೆ ನೊ ಡ್ರಗ್ಸ್) ಕಾರ್ಯಕ್ರಮದಡಿ ರೈಸ್ (ಆರ್.ಐ.ಎಸ್.ಇ) ಮತ್ತು ಬೇಡ ಬ್ರೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಈ ದೇಶದ ಪ್ರಮುಖ ಆಸ್ತಿ. ದೇಶದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಆಕರ್ಷಣೆಗೆ ಯುವಕರು ಹೆಚ್ಚಾಗಿ ಒಳಗಾಗುತ್ತಿದ್ದಾರೆ. ಮಾದಕ ವಸ್ತುಗಳ ನಿರ್ಮೂಲನೆಗೆ ಸರ್ಕಾರವು ರಾಜ್ಯವನ್ನು ವ್ಯಸನ ಮುಕ್ತವನ್ನಾಗಿ ಮಾಡುವ ಯೋಜನೆ ಆರಂಭಿಸಿದೆ. ವಿದ್ಯಾರ್ಥಿಗಳು, ಯುವಕರು ಕುತೂಹಲಕ್ಕಾಗಿ ಮಾದಕ ವಸ್ತುಗಳನ್ನು ಒಮ್ಮೆ ಸೇವನೆ ಮಾಡಿ ಚಟವಾಗಿ ಪರಿವರ್ತಿಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಮಾದಕ ವ್ಯಸನದಿಂದ ಹೊರಬರಲು ಸಾಧ್ಯವಾಗದೆ ಪರಿತಪಿಸುತ್ತಿದ್ದು, ಇದರಿಂದ ಓದುವ ಕಡೆ ಗಮನ ಆಸಕ್ತಿ ಕಡಿಮೆಯಾಗಲಿದೆ ಎಂದರು.
ಈಗಾಗಲೇ ಪೊಲೀಸ್ ಇಲಾಖೆ ಡ್ರಗ್ಸ್ ಸೇವನೆ ವಿರುದ್ಧ ಸಾಕಷ್ಟು ಕಾನೂನು ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳು, ಯುವಕರು ದೇಶದ ಆಸ್ತಿಯಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಯುವಜನತೆ ಡ್ರಗ್ಸ್ ಚಟಕ್ಕೆ ಒಳಗಾಗದೆ ವಿಧ್ಯಾಭ್ಯಾಸದ ಕಡೆ ಗಮನ ನೀಡಿ ಪೋಷಕರ ಕನಸು ಈಡೇರಿಸುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ 71 ಡ್ರಗ್ಸ್ ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ಬಳಕೆ, ಮಾರಾಟ, ಸಾಗಣೆ, ಕಾನೂನು ಬಾಹಿರವಾಗಿದ್ದು. ಪದೆಪದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದಲ್ಲಿ ಗಡಿಪಾರು ಮಾಡಲು ಪ್ರಸ್ತಾವನೆಯನ್ನು ಇಲಾಖೆಯಿಂದ ಸಿದ್ದಪಡಿಸಲಾಗಿದೆ. ಯುವ ಜನತೆ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮಾದಕ ವ್ಯಸನದ ವಿರುದ್ಧ ಹೊರಾಡಬೇಕಾಗಿದೆ ಎಂದರು.
ಮಾದಕ ವಸ್ತುಗಳ ನಿಗ್ರಹಕ್ಕಾಗಿ ಪೋಲೀಸ್ ಇಲಾಖೆ ವತಿಯಿಂದ ರೈಸ್ ಮತ್ತು ಬೇಡ ಬ್ರೋ (ಮಾದಕ ವಸ್ತು ಸೇವನೆ ಬೇಡ ಬ್ರೋ) ಎಂಬ ಹೊಸ ಪರಿಕಲ್ಪನೆಯಡಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ, ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಕುರಿತ ಜಾಗೃತಿ ಕಾರ್ಯಕ್ರಮಗಳನ್ನು ಯುವ ಜನತೆಗೆ ತಲುಪಿಸಲಾಗುತ್ತಿದೆ. ತಮ್ಮ ಸುತ್ತಲಿನ ಪರಿಸರದಲ್ಲಿ ಡ್ರಗ್ಸ್ ಪ್ರಕರಣಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳು ನೇರವಾಗಿ ನಿಮ್ಮ ಪ್ರಾಂಶುಪಾ¯ರಿಗೆ ತಿಳಿಸಬೇಕು. ಸಾರ್ವಜನಿಕರು ಡ್ರಗ್ಸ್ ಮಾರಾಟ, ಸಾಗಣೆ ಕಂಡುಬಂದರೆ ಸಹಾಯವಾಣಿ ಟೋಲ್ ಫ್ರೀ ಸಂಖ್ಯೆ 1908 ಅಥವಾ ಡ್ರಗ್ಸ್ ಫ್ರೀ ಆಪ್ ಹಾಗೂ 112ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದರು.
ಎಎಸ್ಪಿ ಎಂ.ಎನ್. ಶಶಿಧರ್ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಎಚ್.ಜಿ. ಲೋಕೇಶ್ ಅವರು ಮಾದಕ ವ್ಯಸನದ ದುಷ್ಪರಿಣಾಮಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಿವೈಎಸ್‍ಪಿ ಸ್ನೇಹರಾಜ್, ಗ್ರಾಮಾಂತರ ಪೊಲೀಸ್ ಠಾಣೆ ಸರ್ಕಲ್ ಇನ್ಸ್‍ಪೆಕ್ಟರ್ ಶೇಷಾದ್ರಿ, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.