ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸದಸ್ಯರು ಎಡಿಸಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಡಾ.ಸಿ.ಮಾದೇಗೌಡ, ಎಸ್.ಮಹದೇವಯ್ಯ, ರತ್ನಮ್ಮ ಮತ್ತು ಇತರರು ಪಾಲ್ಗೊಂಡಿದ್ದರು.
- ಪ್ರಶ್ನೆ ಮಾಡಿದ ಮುಖಂಡ ಮೇಲೆ ಹಲ್ಲೆ
- ಸೋಲಿಗ ಸಮುದಾಯದಿಂದ ಪ್ರತಿಭಟನೆ
- ಕ್ರಮಕ್ಕೆ ಒತ್ತಾಯಿಸಿ ಮನವಿ ಸಲ್ಲಿಕೆ
ಚಾಮರಾಜನಗರ: ಜಿಲ್ಲೆಯ ಹಾಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಬೇಕು ಮತ್ತು ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಯು.ರಂಗೇಗೌಡ ಮೇಲೆ ಹಲ್ಲೆ ಮಾಡಿರುವ ಆರೋಪಿಯನ್ನು ಬಂಧಿಸಬೇಕೆಂದು ಒತ್ತಾಯಿಸಿ ಆದಿವಾಸಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಶುಕ್ರವಾರ ಜಮಾಯಿಸಿದ ಪ್ರತಿಭಟನಾಕಾರರು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು. ಅಲ್ಲದೇ, ಹನೂರು ತಾಲೂಕಿನ ಬೂದಿಪಡಗ ಗ್ರಾಮದ ಪೋಡುಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ಪ್ರಶ್ನಿಸಿದ ರಂಗೇಗೌಡ ಮೇಲೆ ಕಿಶೋರ್ ಎಂಬಾತ ಹಲ್ಲೆ ಮಾಡಿದ್ದು, ಈತನ್ನು ಬಂಧಿಸಬೇಕೆಂದು ಆಗ್ರಹಿಸಿದರು.
ಅದಿವಾಸಿಗಳಿರುವ 148 ಪೋಡುಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಯುವಜನರು ಕುಡಿತದ ಚಟಕ್ಕೆ ಬಲಿಯಾಗಿ ಮರಣ ಹೊಂದುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟ ಮಾಡುವುದನ್ನು ತಡೆಯಬೇಕು ಎಂದು ಸಂಘದ ಸದಸ್ಯರು ಅಪರ ಜಿಲ್ಲಾಧಿಕಾರಿ ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ, ಜಂಟಿ ಕಾರ್ಯದರ್ಶಿ ಎಸ್.ಮಹದೇವಯ್ಯ, ರತ್ನಮ್ಮ ಮತ್ತು ಇತರರು ಹಾಜರಿದ್ದರು.