ಭೈರನತ್ತ ಗ್ರಾಮದಲ್ಲಿ ತಲೆದೋರಿರುವ ಸ್ಮಶಾನ ರಸ್ತೆ ಸಮಸ್ಯೆಯನ್ನು ಬಗೆಹರಿಸುವಂತೆ ಆದಿಜಾಂಭವ ಸಮುದಾಯ ಮುಖಂಡರು ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದರು. ಮಾದೇಶ್ ಶಂಭುಲಿಂಗ, ನಿಂಗಪ್ಪ, ಚಿಕ್ಕಮಾದಯ್ಯ ಇತರರು ಇದ್ದರು.
ಶಾಸಕ ಎಂ.ಆರ್.ಮಂಜುನಾಥ್‌ಗೆ ಮನವಿ
ಹನೂರು: ಗ್ರಾಮದಲ್ಲಿ ತಲೆದೋರಿರುವ ಸ್ಮಶಾನಕ್ಕೆ ತೆರಳುವ ರಸ್ತೆಯ ಸಮಸ್ಯೆಯನ್ನು ಬಗೆಹರಿಸುವಂತೆ ಭಾನುವಾರ ತಾಲೂಕಿನ ಭೈರನತ್ತ ಆದಿಜಾಂಬವ ಸಮುದಾಯದ ಮುಖಂಡರು ಶಾಸಕ ಎಂ.ಆರ್.ಮಂಜುನಾಥ್ ಅವರಲ್ಲಿ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಆಗಮಿಸಿದ ವೇಳೆ ಸಮುದಾಯದ ಮುಖಂಡರು ಶಾಸಕರನ್ನು ಭೇಟಿಯಾಗಿ ಮಾತನಾಡಿ, ಡಿ.ಎಂ.ಸಮುದ್ರ ಗ್ರಾಮದ ಸರ್ವೇ ನಂ.75ರಲ್ಲಿ ಈ ಹಿಂದೆಯೇ ಸರ್ಕಾರದಿಂದ ಸಮುದಾಯಕ್ಕೆ ಸ್ಮಶಾನ ಮಂಜೂರು ಮಾಡಿದ್ದು, ತೆರಳಲು ಮೂಲ ರಸ್ತೆಯೂ ಇದೆ. ಇದರಿಂದ ಶವ ಸಂಸ್ಕಾರ ನಡೆಸಲು ಯಾವುದೇ ಸಮಸ್ಯೆ ಇರಲಿಲ್ಲ. ಆದರೆ 2 ತಿಂಗಳ ಹಿಂದೆ ಈ ಭಾಗದಲ್ಲಿನ ರೈತರೊಬ್ಬರೂ ರಸ್ತೆಯನ್ನು ಅತಿಕ್ರಮಿಸಿಕೊಂಡಿದ್ದಾರೆ. ಹಳ್ಳದ ಮೂಲಕ ತೆರಳುವಂತೆ ಸೂಚಿಸುತ್ತಿದ್ದಾರೆ. ಇದರಿಂದ ಅಂತ್ಯ ಸಂಸ್ಕಾರಕ್ಕೆ ತೆರಳಬೇಕಾದರೆ ತುಂಬ ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮ ವಹಿಸಿ ಅತಿಕ್ರಮಿಸಿರುವ ರಸ್ತೆಯನ್ನು ತೆರವುಗೊಳಿಸುವುದರ ಮೂಲಕ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿ ಕೊಡಬೇಕು. ಜತೆಗೆ ಗ್ರಾಮದಲ್ಲಿ ಸಿಸಿ ರಸ್ತೆಯನ್ನು ನಿರ್ಮಿಸಿ ಕೊಡುವಂತೆ ಮನವಿ ಸಲ್ಲಿಸಿದರು.
ಬಳಿಕ ಶಾಸಕರು ಸ್ಮಶಾನ ರಸ್ತೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಗ್ರಾಮದ ಬಡಾವಣೆಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸುವುದಾಗಿ ತಿಳಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಮಾದೇಶ್, ಮುಖಂಡರಾದ ಶಂಭುಲಿಂಗ, ಮಂಟೇಸ್ವಾಮಿ, ನಿಂಗಪ್ಪ, ಚಿಕ್ಕಮಾದಯ್ಯ, ಸಿದ್ದಪ್ಪ, ದೊಡ್ಡಸ್ವಾಮಿ ಹಾಗೂ ಇನ್ನಿತರರು ಇದ್ದರು.