ಯಳಂದೂರು ತಾಲೂಕಿನ ಯರಿಯೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಶನಿವಾರ 1 ಮತ್ತು 2 ನೇ ವಾರ್ಡ್ ನಿವಾಸಿಗಳು ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಯರಿಯೂರು ಗ್ರಾಮದ 1, 2ನೇ ವಾರ್ಡ್ ನಿವಾಸಿಗಳ ಪ್ರತಿಭಟನೆ
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ 1 ಮತ್ತು 2ನೇ ವಾರ್ಡ್‌ನ ಉಪ್ಪಾರ ಬಡಾವಣೆಯಲ್ಲಿ ಒಂದು ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಸಮಸ್ಯೆ ಬಗಹರಿಸುವಂತೆ ಒತ್ತಾಯಿಸಿ ವಾರ್ಡ್‌ನ ನಿವಾಸಿಗಳು ಶನಿವಾರ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇದೇ ವೇಳೆ ಪ್ರತಿಭಟನಾಕಾರರು ಖಾಲಿ ಕೊಡಗಳನ್ನು ಪ್ರದರ್ಶಿಸುವ ಮೂಲಕ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಈ ಎರಡೂ ವಾರ್ಡ್‌ಗಳಲ್ಲಿ ಒಂದು ತಿಂಗಳಿಂದಲೂ ನೀರಿನ ಸಮಸ್ಯೆ ಇದೆ. ಗ್ರಾಮ ಪಂಚಾಯಿತಿಗೆ ಈ ಸಂಬಂಧ ಹಲವು ಬಾರಿ ದೂರು ನೀಡಲಾಗಿದೆ. ಇಲ್ಲಿ ನೀರಿನ ತೊಂಬೆ ನಿರ್ಮಿಸಲಾಗಿದೆಯಾದರೂ ಅದು ತುಂಬುವುದಿಲ್ಲ. ಈ ಪ್ರದೇಶ ಎತ್ತರವಾಗಿದ್ದು ನೀರು ಬಿಟ್ಟರೆ ಇಲ್ಲಿಗೆ ಬರುವುದೇ ಇಲ್ಲ. ಇಲ್ಲಿರುವ ಕೈಪಂಪು ಕೆಟ್ಟು ಹಲವು ವರ್ಷಗಳೇ ಕಳೆದಿದ್ದು, ಅದನ್ನು ದುರಸ್ತಿಪಡಿಸಿ ನೀರು ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡ ಪಂಚಾಯಿತಿ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಜಲಜೀವನ ಮಿಷನ್ ಯೋಜನೆಯಡಿ ಅಳವಡಿಸಲಾದ ನಲ್ಲಿಗಳಲ್ಲಿ ನೀರೇ ಬರುತ್ತಿಲ್ಲ. ಪಂಚಾಯಿತಿಗೆ ದೂರು ನೀಡಿದರೆ ಇಲ್ಲಸಲ್ಲದ ಸಬೂಬು ಹೇಳಿ ವಾಪಸ್ ಕಳುಹಿಸಲಾಗುತ್ತಿದೆ. ಈಗ ಬೇಸಿಗೆಯಾಗಿದ್ದು ನೀರಿನ ಹಾಹಾಕಾರ ಹೆಚ್ಚಾಗಿದೆ. ನೀರು ಸಿಗದೆ ದೂರದಿಂದ ಬಿಸಿಲಿನಲ್ಲಿ ನೀರು ತರುವುದು ಕಷ್ಟವಾಗುತ್ತದೆ. ಮಹಿಳೆಯರು, ಒಬ್ಬಂಟಿ ಇರುವ ವೃದ್ಧರು ಹೆಚ್ಚಿನ ಬವಣೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಹೊಸದಾಗಿ ನೀರಿನ ಪಂಪ್ ಅಳವಡಿಸಿ ಪ್ರತ್ಯೇಕವಾಗಿ ನೀರು ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಿಡಿಒ ಶಿವಕುಮಾರ್ ಮಾತನಾಡಿ, ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಈ ಬಡಾವಣೆ ಎತ್ತರ ಪ್ರದೇಶದಲ್ಲಿದ್ದು ನೀರು ಏರುತ್ತಿರಲಿಲ್ಲ. ಇದರ ಬಳಿ ಇರುವ ಬೋರ್‌ವೆಲ್‌ಗೆ ಹೊಸ ಮೋಟಾರ್ ಅಳವಡಿಸಿ ಶೀಘ್ರ ನೀರಿನ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗುವುದು ಎಂದರು.
ಗ್ರಾಮದ ನಿವಾಸಿಗಳಾದ ನಿರ್ಮಲಾ, ಶಕುಂತಲಾ, ಮಹದೇವಮ್ಮ. ಕೆಂಪಮ್ಮ, ಸಿದ್ದರಾಜು, ಮಹದೇವಮ್ಮ, ಚಂದ್ರಶೇಖರ್ ಸೇರಿದಂತೆ ಅನೇಕರ ಇದ್ದರು.