ಬಂಡಳ್ಳಿಯಲ್ಲಿ ಆಯೋಜಿಸಿದ್ದ ನರೇಗಾ ಗ್ರಾಮಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮಹಿಳೆಯರು ಒತ್ತಾಯಿಸಿದರು. ಶಾಹುಲ್ ಆಹಮದ್, ಡಾ.ಸಿದ್ದರಾಜು, ನಾರಾಯಣ್, ವಿಶ್ವನಾಥ್ ಇತರರಿದ್ದರು.
- ಗ್ರಾಮಸ್ಥರಿಂದ ದೂರುಗಳ ಸುರಿಮಳೆ
- ನರೇಗಾ ಯೋಜನೆ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆ
ಹನೂರು: ತಾಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣಾ ಗ್ರಾಮಸಭೆಯಲ್ಲಿ ಗ್ರಾಮಸ್ಥರು ದೂರಿನ ಮಳೆ ಸುರಿಸಿದರು.
ಗ್ರಾಮಸಭೆಯನ್ನು ಕೊಳ್ಳೇಗಾಲ ತಾಲೂಕು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗ್ರಾಪಂ ಆಡಳಿತಾಧಿಕಾರಿ ಡಾ.ಸಿದ್ದರಾಜು, ನರೇಗಾ ತಾಲೂಕು ಸಂಯೋಜಕ ನಾರಾಯಣ್, ಅರಣ್ಯ ಇಲಾಖೆಯ ಮಹಾಂತೇಶ್ ಹಾಗೂ ಗ್ರಾಪಂ ಕೆಲ ಚುನಾಯಿತ ಪ್ರತಿನಿಧಿಗಳು ಆಗಮಿಸಿದ್ದರು. ಆದರೆ ನೆರೆದಿದ್ದ ಗ್ರಾಮಸ್ಥರ ಸಂಖ್ಯೆ ಕಡಿಮೆ ಇತ್ತು.
ಸಭೆ ಆರಂಭವಾಗುತ್ತಿದ್ದಂತೆ ನರೇಗಾ ತಾಲೂಕು ಸಂಯೋಜಕ ನಾರಾಯಣ್ ಅವರು, ಈ ಹಿಂದೆ ಆಯೋಜಿಸಿದ್ದ ಸಭೆಯು 2 ಬಾರಿ ರದ್ದಾಗಿತ್ತು. ಈ ಸಭೆಯ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದೀರಾ ಎಂದು ಪಿಡಿಒ ವಿಶ್ವನಾಥ್ ಅವರಿಗೆ ಕೇಳಿದರು.
ಈ ವೇಳೆ ರೈತ ಸಂಘದ ರವಿ ಅವರು ಗ್ರಾಮಸಭೆಯ ಬಗ್ಗೆ ಜನರಿಗೆ ಸರಿಯಾಗಿ ಮಾಹಿತಿ ತಿಳಿಸಿಲ್ಲ. ಹಾಗಾಗಿ ಸಭೆಗೆ ಹೆಚ್ಚಿನ ಜನರು ಆಗಮಿಸಿಲ್ಲ. ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಸಹ ಆಗಮಿಸಿಲ್ಲ. ಗ್ರಾಮದಲ್ಲಿ ಹಲವು ಸಮಸ್ಯೆಗಳಿವೆ. ಜನರಿಲ್ಲದೆ ಸಭೆ ನಡೆಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಹಲವು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇದರಿಂದ ತುಂಬ ತೊಂದರೆ ಎದುರಿಸುತ್ತಿದ್ದೇವೆ. ಈ ಬಗ್ಗೆ ಗ್ರಾಪಂಗೆ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಮಹಿಳೆಯರು ಆರೋಪಿಸಿದರು. ಅಂಗನವಾಡಿ ಕೇಂದ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯ ಕೇಳಿಬಂತು. ಜತೆಗೆ ಸಭೆಯಲ್ಲಿ ಇನ್ನು ಕೆಲವು ಸಮಸ್ಯೆಗಳು ಧ್ವನಿ ಎತ್ತಿ ಗ್ರಾಮದ ಮೂಲಸೌಕರ್ಯ, ಸರ್ಕಾರಿ ಯೋಜನೆಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ನರೇಗಾ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ತಿಳಿಸಲಾಯಿತು. ಆದರೂ ಸಮಸ್ಯೆಗಳ ಬಗ್ಗೆ ಗಮನಹರಿಸದಿರುವ ಗ್ರಾಪಂ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.