ಗುಂಡ್ಲುಪೇಟೆ ತಾಲೂಕಿನ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರಿಗೆ ರೈತ ಮುಖಂಡರು ಮನವಿ ಪತ್ರ ಸಲ್ಲಿಸಿದರು. ರೈತ ಮುಖಂಡ ಎಸ್.ಎಂ.ನಾಗಾರ್ಜುನಕುಮಾರ್ ಇತರರು ಇದ್ದರು. 
ಚಾಮರಾಜನಗರ

ನದಿಯಿಂದ ಕೆರೆಗಳಿಗೆ ನೀರು ಹರಿಸುವಂತೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಕಚೇರಿ ಎದುರು ರೈತರಿಂದ ಪ್ರತಿಭಟನೆ
  • ಪೈಪ್‌ಲೈನ್ ಯೋಜನೆ ಕೈ ಬಿಡಬೇಕೆಂದು ಆಗ್ರಹ
ಗುಂಡ್ಲುಪೇಟೆ: ನದಿ ಮೂಲದಿಂದ ಕೆರೆಗಳಿಗೆ ನೀರು ಬಿಡದೆ ರೈತರನ್ನು ವಂಚಿಸುತ್ತಿರುವ ತಾಲೂಕು ಆಡಳಿತ, ಜಿಲ್ಲಾಡಳಿತ ವಿರುದ್ಧ ಹುತ್ತೂರು ಏತ ನೀರಾವರಿ ಯೋಜನೆಯ 4ನೇ ಹಂತದ ಅಚ್ಚುಕಟ್ಟು ಪ್ರದೇಶದ ರೈತರು ಪಟ್ಟಣದ ತಾಲೂಕು ಕಚೇರಿ ಎದುರು ಗುರುವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ರೈತ ಮುಖಂಡ ಎಸ್.ಎಂ.ನಾಗಾರ್ಜುನಕುಮಾರ್ ಮಾತನಾಡಿ, ಜೂನ್ ವೇಳೆಗೆ ತಾಲೂಕಿನ ಕೆರೆಗಳಿಗೆ ನೀರು ತುಂಬಿಸಬೇಕಾಗಿದ್ದರೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ನೀರು ಹರಿಸದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಈ ಬಗ್ಗೆ ನವೆಂಬರ್ ಮೊದಲ ವಾರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಭೇಟಿ ನೀಡಿದ್ದ ಶಾಸಕ ಗಣೇಶ್ ಪ್ರಸಾದ್ ಡಿಸೆಂಬರ್ ಮೊದಲ ವಾರದಲ್ಲಿ ನೀರು ಹರಿಸುವ ಭರವಸೆ ನೀಡಿದ್ದರು. ಡಿ.5ರಂದು ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದ್ದರೂ ನಾಲ್ಕೇ ದಿನದಲ್ಲಿ ಹುತ್ತೂರು ಕೆರೆಗೆ ನೀರು ಹರಿಸುವುದನ್ನು ನಿಲ್ಲಿಸಿದ್ದರಿಂದ ರೈತರಿಗೆ ಮೋಸವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಮುಂದಿನ ಬಾರಿಗೆ ಕೆರೆಯಿಂದ ಕೆರೆಗೆ ಪೈಪ್‌ಲೈನ್ ಅಳವಡಿಸುವ ಯೋಜನೆ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ. ಗುಂಡ್ಲುಪೇಟೆ ತಾಲೂಕು ಮಳೆ ನೆರಳಿನ ಪ್ರದೇಶವಾಗಿದ್ದು ಇಲ್ಲಿಗೆ ಬೀಳುವ ಮಳೆ ಗಣನೀಯವಾಗಿ ಕಡಿಮೆಯಾಗಿದೆ. ಅಲ್ಲದೆ ತಾಲೂಕಿನಲ್ಲಿ ಮಳೆ ನೀರನ್ನು ಹಿಡಿದುಕೊಳ್ಳಲು ಉತ್ತಮವಾದ ಕೆರೆ ವ್ಯವಸ್ಥೆ ಇದ್ದು ಅದರ ಜತೆಗೆ ಗುಂಡ್ಲುಪೇಟೆ ಭೂಸ್ವರೂಪವು ಸಹ ಉತ್ತಮ ಅಂತರ್ಜಲವನ್ನು ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿದೆ. ಅಂತರ್ಜಲವು ಮರುಪೂರಣವಾಗಬೇಕೆಂದರೆ ನದಿ ಮೂಲದಲ್ಲಿ ನೀರು ಹರಿಯಬೇಕು. ಪೈಪ್‌ಲೈನ್ ಯೋಜನೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಎಂ.ಎಸ್.ತನ್ಮಯಿ ಅವರಿಗೆ ಮನವಿ ಪತ್ರ ನೀಡಿದರು. ಪ್ರತಿಭಟನೆಯಲ್ಲಿ ವಿವಿಧ ಗ್ರಾಮಗಳ ರೈತರು ಇದ್ದರು.