ಅಯ್ಯನಪುರ ಶಿವಕುಮಾರ್ ಭಾವಚಿತ್ರವಿದೆ 
ಚಾಮರಾಜನಗರ

ನಾಗಮೋಹನ್ ದಾಸ್ ವರದಿ ತಿರಸ್ಕಾರಕ್ಕೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಮುಖಂಡ ಅಯ್ಯನಪುರ ಶಿವಕುಮಾರ್ ಆಗ್ರಹ
  • ನಾಗಮೋಹನ್‌ದಾಸ್ ವರದಿ ಅವೈಜ್ಞಾನಿಕವಾಗಿದೆ.
ಚಾಮರಾಜನಗರ: ಒಳ ಮೀಸಲಾತಿ ಜಾರಿ ಸಂಬಂಧ ಶುಕ್ರವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕೆಂದು ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಅಯ್ಯನಪುರ ಶಿವಕುಮಾರ್ ಒತ್ತಾಯಿಸಿದರು.
ನಾಗಮೋಹನ್‌ದಾಸ್ ವರದಿ ಅವೈಜ್ಞಾನಿಕವಾಗಿದೆ. ಸರಿಯಾದ ರೀತಿಯಲ್ಲಿ ಸಮೀಕ್ಷೆ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕಾರ ಮಾಡಬೇಕು. ಇಲ್ಲದಿದ್ದರೆ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವರದಿಲ್ಲಿ ಬಲಗೈ ಜಾತಿಯ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶದಿಂದ 16 ಜಾತಿಗಳನ್ನು ಅಲೆಮಾರಿ ಗುಂಪಿಗೆ ಸೇರಿಸಲಾಗಿದೆ. ಬಲಗೈ ಜನಾಂಗಗಳಿಗೆ ಬರಬೇಕಾದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಗುಂಪಿಗೆ ಸೇರಿದ ಜನರನ್ನು ಎಡಗೈ ಮತ್ತು ಬಲಗೈಗೆ ಹಂಚಿಕೆ ಮಾಡಲಾಗಿದೆ ಎಂದು ದೂರಿದರು.
ರಾಜ್ಯ ಎಸ್ಸಿ/ಎಸ್ಟಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರಯ್ಯ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಭಾಸ್ಕರ್ ಪ್ರಸಾದ್ ಒತ್ತಾಯಿಸಿದ್ದಾರೆ. ಚಂದ್ರಶೇಖರಯ್ಯ ಜನಾಂಗದ ಪರವಾಗಿ ಮಾತನಾಡಿದ್ದು, ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಅವರೊಂದಿಗೆ ಸಮುದಾಯ ನಿಲ್ಲಲಿದೆ ಎಂದರು. ಗೋಷ್ಠಿಯಲ್ಲಿ ಸೋಮೇಶ್ವರ್, ಆರ್.ಪಿ.ನಂಜುಂಡಸ್ವಾಮಿ, ಆರ್.ಮಹದೇವ್, ನಲ್ಲೂರು ಮದಹೇವಸ್ವಾಮಿ, ಸೋಮಣ್ಣ, ಗೋವಿಂದರಾಜು, ವೀರಭದ್ರಸ್ವಾಮಿ ಇದ್ದರು.