ಗುಂಡ್ಲುಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೆಎಸ್‌ಆರ್‌ಟಿಸಿ ಬಸ್ ಡಿಪೋ ಮ್ಯಾನೇಜರ್ ಕುಮಾರನಾಯಕ್ ಭೇಟಿ ಮಾಡಿ ಮಾಹಿತಿ ನೀಡಿದರು.
- 8ನೇ ದಿನಕ್ಕೆ ಕಾಲಿರಿಸಿದ ರೈತರ ಅನಿರ್ದಿಷ್ಟಾವಧಿ ಧರಣಿ
- ಬೇಡಿಕೆ ಈಡೇರಿಸದಿದ್ದರೆ ಕಾನೂನುಭಂಗ ಚಳವಳಿಗೂ ಸಿದ್ಧ ಎಂದು ಎಚ್ಚರಿಕೆ
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ರೈತರಿಗೆ ಸಾಗುವಳಿ ಪತ್ರ ಹಾಗೂ ನಿರಾಕ್ಷೇಪಣಾ ಪತ್ರ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರೈತ ಸಂಘದ ತಾಲೂಕು ಘಟಕದಿಂದ ತಾಲೂಕು ಕಚೇರಿ ಆವರಣದಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ 7 ದಿನ ಪೂರೈಸಿತು.
ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ತಾಲೂಕು ಕಚೇರಿ ಎದುರು ಆ.24ರಿಂದ ರೈತರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದರೂ ಸ್ಥಳಕ್ಕೆ ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ತಾಲೂಕು ಆಡಳಿತ, ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸದಿರುವ ಬಗ್ಗೆ ರೈತ ಸಂಘದ ಜಿಲ್ಲಾಧ್ಯಕ್ಷ ಮಹದೇವಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಿನ 37ನೇ ಸರ್ವೇ ನಂಬರ್‌ಗಳಲ್ಲಿರುವ ಡಿಮ್ಸ್ ಫಾರೆಸ್ಟ್ ಪ್ರದೇಶದ ರೈತರಿಗೆ ಸಾಗುವಳಿ ಪತ್ರ ಹಾಗೂ ನಿರಾಪೇಕ್ಷಣಾ ಪತ್ರ ನೀಡಬೇಕು. 1935ರಿಂದ 1992ರವರೆಗೆ ಸಾಗುವಳಿ ವಿತರಣೆ ಮಾಡಿರುವ 2,570 ಜನರಿಗೆ ಹಕ್ಕುಪತ್ರ ವಿತರಿಸುವವರೆಗೆ ಹೋರಾಟ ಮುಂದುವರಿಸಲಾಗುವುದು. ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ದ ಸಂಘ ಚಳವಳಿಯನ್ನು ತೀವ್ರಗೊಳಿಸಲಿದೆ. ಆ.31ರಿಂದ ಚಳವಳಿಯನ್ನು ಹಂತ ಹಂತವಾಗಿ ತೀವ್ರಗೊಳಿಸಲಾಗುವುದು. ಮೊದಲ ಹಂತದಲ್ಲಿ ಮಕ್ಕಳ ಚಳವಳಿ, ಮುಂದಿನ ದಿನಗಳಲ್ಲಿ ಪೂರಕೆ ಚಳವಳಿ, ಬಾರುಕೋಲು ಚಳವಳಿ, ಎತ್ತಿನಗಾಡಿ ಚಳವಳಿ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ದನಕರುಗಳೊಂದಿಗೆ ಇಡೀ ರೈತ ಕುಟುಂಬವೇ ತಾಲೂಕು ಕಚೇರಿ ಆವರಣದಲ್ಲಿ ವಾಸ್ತವ್ಯ ಹೂಡುವ ಮೂಲಕ ಪ್ರತಿಭಟನೆ ನಡೆಸಲಿದೆ. ನಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ಹಂತದಲ್ಲಿ ಕಾನೂನುಭಂಗ ಚಳವಳಿಗೂ ಸಿದ್ಧ ಎಂದು ಎಚ್ಚರಿಸಿದರು.
ರೈತ ಸಂಘದ ಕಾರ್ಯಾಧ್ಯಕ್ಷ ಕುಮಾರ್, ತಾಲೂಕು ಅಧ್ಯಕ್ಷ ಶಿವಣ್ಣ, ಸೋಮಶೇಖರ್, ತಾಲೂಕು ಗೌರವಾಧ್ಯಕ್ಷ ನಾಗರಾಜಪ್ಪ, ಪ್ರಧಾನ ಕಾರ್ಯದರ್ಶಿ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹದೇವಸ್ವಾಮಿ, ತಾಲೂಕು ಉಪಾಧ್ಯಕ್ಷ ಪುಟ್ಟೇಗೌಡ, ಸಂಘಟನಾ ಕಾರ್ಯದರ್ಶಿ ರವಿ ಇದ್ದರು.