ಚಾಮರಾಜನಗರ ತಾಲೂಕಿನ ಮರಿಯಾಲ ಗ್ರಾಮದ ರಸ್ತೆಯಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದರು. ಮರಿಯಾಲ, ಕಾಳನಹುಂಡಿ, ಬೇಡರಪುರ, ನಂಜದೇವನಪುರ, ಹೆಗ್ಗೋಠಾರ, ಬದನಗುಪ್ಪೆ, ಪಣ್ಯದಹುಂಡಿ, ಕಲ್ಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಇದ್ದರು.
- ಮರಿಯಾಲ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು
- ಕೆರೆಗಳಿಗೆ ಎರಡನೇ ಹಂತದಲ್ಲಿ ನೀರು ತುಂಬಿಸಬೇಕೆಂದು ಒತ್ತಾಯ
ತಾಲೂಕಿನ ಕೆರೆಗಳಿಗೆ ಎರಡನೇ ಹಂತದಲ್ಲಿ ನೀರು ತುಂಬಿಸಬೇಕೆಂದು ಒತ್ತಾಯಿಸಿ ಮಂಗಳವಾರ ರೈತರು ಪ್ರತಿಭಟನೆ ನಡೆಸಿದರು.
ತಾಲೂಕಿನ ಮರಿಯಾಲ ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ರಸ್ತೆ ತಡೆ ನಡೆಸಿದರು. ಬಳಿಕ ರಸ್ತೆ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ನಂಜದೇವನಪುರ, ಕಾಳನಹುಂಡಿ, ಬೇಡರಪುರದ ಶಿವಗಂಗೆ, ಮಾಲಂಗೆರೆ ಕೆರೆಗಳಿಗೆ ಆಗಸ್ಟ್ ತಿಂಗಳ ಒಳಗೆ ನೀರು ತುಂಬಿಸಬೇಕೆಂದು ಆಗ್ರಹಿಸಿದರು.
ಈ ಭಾಗದ ಕೆರೆಗಳನ್ನು ಭರ್ತಿ ಮಾಡಲು ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಾವರಿ ಅವಧಿ ಶುರುವಾದ ಕೂಡಲೇ ಪ್ರಾರಂಭದಲ್ಲೇ ನೀರು ಹರಿಸಬೇಕು. ಮೊದಲ ಹಂತದಲ್ಲೇ ನೀರು ಕೊಡುವ ಕಾರ್ಯವನ್ನು ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಂಡು ನೋಡಿಕೊಳ್ಳಬೇಕು. ಎಲ್ಲ ಹಂತದ ಕೆರೆಗಳಿಗೆ ನೀರು ತುಂಬಿಸುವುದಕ್ಕೆ ವೈಜ್ಞಾನಿಕವಾದ ಮತ್ತು ಶಾಶ್ವತವಾದ ವೇಳಾಪಟ್ಟಿಯನ್ನು ತಯಾರಿಸಬೇಕು ಎಂದು ಒತ್ತಾಯಿಸಿದರು.
ತಾಲೂಕಿನ ಹಲವು ಗ್ರಾಮಗಳಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಹೆಚ್ಚಾಗಿದೆ. ರೈತರು ವ್ಯವಸಾಯ ಮಾಡಲು ಜಮೀನುಗಳಿಗೆ ಹೋಗಲು ಹೆದರುತ್ತಿದ್ದಾರೆ. ಜೀವಭಯದಲ್ಲಿರುವ ರೈತರು ಕೃಷಿ ಮಾಡಲು ಹಿಂದೇಟು ಹಾಕುವಂತಾಗಿದೆ. ಇದನ್ನು ತಪ್ಪಿಸಲು ಹುಲಿ ಮತ್ತು ಚಿರತೆಗಳನ್ನು ಸೆರೆ ಹಿಡಿಯಬೇಕು ಎಂದರು.
ಮೈಸೂರು-ಚಾಮರಾಜನಗರ ಮುಖ್ಯರಸ್ತೆಯಾಗಿರುವ ಮರಿಯಾಲ ವೃತ್ತದಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗಿವೆ. ಇಲ್ಲಿ ಅಪಘಾತ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕು. ರಸ್ತೆಯಲ್ಲಿ ಹಂಪ್ಸ್ ನಿರ್ಮಾಣ ಮಾಡಬೇಕು. ಕಲ್ಲಹಳ್ಳಿ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜಿಲ್ಲೆಯಲ್ಲಿ ಮೇವಿನ ಕೊರತೆ ಕಾಡುತ್ತಿದೆ. ಭತ್ತದ ಕಟಾವು ಆರಂಭವಾಗಿದ್ದು, ಹುಲ್ಲನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ತಡೆಯಬೇಕು. ಮೇವಿನ ಕೊರತೆಯಿಂದ ಜಾನುವಾರುಗಳಿಗೆ ಆಗುವ ತೊಂದರೆಯನ್ನು ತಪ್ಪಿಸಲು ಗ್ರಾಮಗಳಲ್ಲಿ ಗೋಶಾಲೆಗಳನ್ನು ತರೆಯಬೇಕು ಎಂದರು.
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಶ್ರೀರೂಪಾ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿದರು. ಧರಣಿಯಲ್ಲಿ ಮರಿಯಾಲ, ಕಾಳನಹುಂಡಿ, ಬೇಡರಪುರ, ನಂಜದೇವನಪುರ, ಹೆಗ್ಗೋಠಾರ, ಬದನಗುಪ್ಪೆ, ಪಣ್ಯದಹುಂಡಿ, ಕಲ್ಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.