ಗುಂಡ್ಲುಪೇಟೆ ತಾಲೂಕಿನ ಚಿಕ್ಕತುಪ್ಪೂರು ಗ್ರಾಮಕ್ಕೆ ಸಮರ್ಪಕವಾಗಿ ನೀರು ಬಿಡುವಂತೆ ಒತ್ತಾಯಿಸಿ ಮಹಿಳೆಯರು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.  
ಚಾಮರಾಜನಗರ

ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಚಿಕ್ಕತುಪ್ಪೂರು ಗ್ರಾಮಸ್ಥರಿಂದ ಪ್ರತಿಭಟನೆ
ಗುಂಡ್ಲುಪೇಟೆ: ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ತಾಲೂಕಿನ ಚಿಕ್ಕತುಪ್ಪೂರು ಗ್ರಾಮದ ನಿವಾಸಿಗಳು ಖಾಲಿ ಬಿಂದಿಗೆಗಳನ್ನು ಹಿಡಿದು ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ಕಳೆದ ಹಲವು ದಿನಗಳಿಂದ ತಮ್ಮ ಮನೆಗಳಿಗೆ ನೀರು ಬರುತ್ತಿಲ್ಲ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ನಿನ್ನೆ ಗ್ರಾಮದಲ್ಲಿ ಮಾರಿಹಬ್ಬವಿದ್ದರೂ ನೀರು ಬಿಡದೆ ತೀವ್ರ ಸಮಸ್ಯೆ ಆಗಿದೆ. ಮುಂದಿನ ವಾರ ಶಿವರಾತ್ರಿ ಹಬ್ಬವಿದ್ದು ಮನೆಗಳನ್ನು ಶುಚಿಗೊಳಿಸಲು ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬುಧವಾರ ಜಿಲ್ಲಾ ಕೇಂದ್ರದ ರಸ್ತೆಯಲ್ಲಿ ಖಾಲಿ ಬಿಂದಿಗೆಗಳನ್ನು ಇಟ್ಟು ವಾಹನಗಳ ಸಂಚಾರ ಬಂದ್ ಮಾಡಿದರು.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತಾಲೂಕು ಪಂಚಾಯಿತಿ ಅಧಿಕಾರಿ ನಾಗಭೂಷಣ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎ.ಎಂ.ಮಹೇಶ್ ಅವರನ್ನು ಕರೆಸಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ನೀರಿನ ಕೊರತೆಯಾಗಿರುವ ಬೀದಿಗಳಲ್ಲಿ ಹೊಸದಾಗಿ ಗೇಟ್ ಅಳವಡಿಸಿ ನೀರು ಸರಬರಾಜು ಮಾಡುವ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.