ಕೊಳ್ಳೇಗಾಲ: ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಆಜೀವಿಕಾ ಮಿಷನ್ ( ವಿಬಿಜಿ ರಾಮ್ ಜಿ) ಅಡಿಯಲ್ಲಿ ಕಾರ್ಯನಿರ್ವಹಿಸಿದ ಕೂಲಿ ಕಾರ್ಮಿಕರಿಗೆ ಕೂಲಿ ಹಣ ಪಾವತಿಸಿಲ್ಲ ಎಂದು ಆರೋಪಿಸಿ ಕುಂತೂರು ಗ್ರಾಮ ಪಂಚಾಯಿತಿ ಮುಂಭಾಗ ಮಂಗಳವಾರ ಮಹಿಳಾ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಕೂಲಿ ಕಾರ್ಮಿಕರ ಒಕ್ಕೂಟ ಜಿಲ್ಲಾ ಸಂಚಾಲಕಿ ಪುಟ್ಟಗೌರಿ ಮಾತನಾಡಿ, ಮೂರು ತಿಂಗಳಿನಿಂದ ಕುಂತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೂಲಿ ಕೆಲಸ ಮಾಡಿರುವ ಮಹಿಳೆಯರಿಗೆ ಕೂಲಿ ಹಣ ಬಿಡುಗಡೆ ಆಗಿಲ್ಲ. ಬೇರೆ ಪಂಚಾಯಿತಿಗಳಲ್ಲಿ ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ಸಿಗುತ್ತಿದೆ. ಆದರೆ ಈ ಪಂಚಾಯಿತಿಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಆಡಳಿತಾಧಿಕಾರಿ ಕೂಲಿ ಹಣ ಬಿಡುಗಡೆ ಪ್ರಕ್ರಿಯೆಯನ್ನು ತಡವಾಗಿ ಮಾಡುತ್ತಿದ್ದಾರೆ ಎಂದು ದೂರಿದರು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.
ದಿನನಿತ್ಯ ಕೂಲಿ ಕೆಲಸವನ್ನೇ ನಂಬಿ ಜೀವನ ಸಾಗಿಸುತ್ತಿರುವ ಬಡ ಕಾರ್ಮಿಕರಿಗೆ ಮೂರು ತಿಂಗಳ ಕೂಲಿ ಹಣ ಬಾರದಿರುವುದರಿಂದ ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.
ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಬಾಕಿ ಇರುವ ಕೂಲಿ ಹಣ ಪಾವತಿಸಬೇಕು. ಜತೆಗೆ ಮುಂದಿನ ದಿನಗಳಲ್ಲಿ ಕಾರ್ಮಿಕರಿಗೆ ಸಕಾಲದಲ್ಲಿ ಕೂಲಿ ಹಣ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಿಲ್ ಖಜಾನೆಗೆ ಸಲ್ಲಿಕೆ: ಕುಂತೂರು ಪಿಡಿಒ ಯೋಗೇಂದ್ರ ಮಾತನಾಡಿ, ಕೂಲಿ ಹಣ ಪಾವತಿಸುವ ನಿಟ್ಟಿನಲ್ಲಿ ಬಿಲ್ಗಳನ್ನು ಖಜಾನೆಗೆ ಸಲ್ಲಿಸಲಾಗಿದೆ. ಖಜಾನೆಯಿಂದ ಕೂಲಿ ಹಣ ಬಿಡುಗಡೆಯಾದ ತಕ್ಷಣವೇ ಕೂಲಿ ಕಾರ್ಮಿಕರಿಗೆ ಹಣ ಸಿಗಲಿದೆ ಎಂದರು. ಈ ವೇಳೆ ಪ್ರತಿಭಟನಾಕಾರರು ಬೇರೆ ಪಂಚಾಯಿತಿಗಳಲ್ಲಿ ಕೂಲಿ ಕಾರ್ಮಿಕರಿಗೆ ಸಕಾಲಕ್ಕೆ ಕೂಲಿ ಹಣ ಸಿಗುತ್ತಿದೆ. ನಿಮ್ಮ ಪಂಚಾಯಿತಿಯಲ್ಲಿ ತಡವಾಗಲು ಕಾರಣವೇನು. ನೀವು ಬಿಲ್ಲನ್ನು ನಿಗದಿತ ಸಮಯದಲ್ಲಿ ಖಜಾನೆಗೆ ತಲುಪಿಸಿಲ್ಲ ಎಂದು ಆರೋಪಿಸಿದರು.
ಬಳಿಕ ಸ್ಥಳಕ್ಕಾಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಪ್ರತಿಭಟನಾಕಾರರ ಮನವಿ ಆಲಿಸಿದರು. ಬಳಿಕ ಪಿಡಿಒ ಯೋಗೇಂದ್ರ, ಸಹಾಯಕ ಲೆಕ್ಕಾಧಿಕಾರಿ ರಾಜಣ್ಣ, ಬಿಲ್ ಕಲೆಕ್ಟರ್ ಪ್ರತಾಪ್, ಕಾರ್ಯದರ್ಶಿ ಶಿವಪ್ರಸಾದ್ ಅವರ ಬಳಿ ಮಾಹಿತಿ ಪಡೆದು ಮಾತನಾಡಿ, ಸ್ಥಳದಲ್ಲಿದ್ದ ಪಿಡಿಒ ಯೋಗೇಂದ್ರ ಅವರಿಗೆ ಕೂಲಿ ಕಾರ್ಮಿಕರ ಹಣ ಬಿಡುಗಡೆ ಆಗದಿದ್ದರೆ ಖಜಾನೆ ಕಚೇರಿಗೆ ತೆರಳಿ ವಿಚಾರಣೆ ಮಾಡುವುದು ನಿಮ್ಮ ಕರ್ತವ್ಯ ಎಂದು ತಾಕೀತು ಮಾಡಿದರು. ಅಲ್ಲದೆ ಜರೂರಾಗಿ ಕೂಲಿ ಹಣ ನೀಡುತ್ತೇವೆ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ನ.10 ರೊಳಗೆ ಕೂಲಿ ಹಣ ಕೊಡದಿದ್ದರೆ ತಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿ ಮಹಿಳೆಯರು ಪ್ರತಿಭಟನೆ ಸ್ಥಗಿತಗೊಳಿಸಿದರು. ಪ್ರತಿಭಟನೆಯಲ್ಲಿ ಕಾಯಕ ಬಂದು ಮಹದೇವಮ್ಮ, ಆಶಾ, ಗೌರಮ್ಮ, ಶಾಂತಮ್ಮ, ಕೂಲಿ ಕಾರ್ಮಿಕರಾದ ಚಿನ್ನಮ್ಮ, ಮಹದೇವಯ್ಯ, ಅನ್ನಪೂರ್ಣ, ನಂಜಮ್ಮಣಿ, ಜಯಮ್ಮ, ಮಹದೇವಮ್ಮ, ಗ್ರಾಪಂ ಮಾಜಿ ಸದಸ್ಯ ಪುರುಷೋತ್ತಮ್ ಇತರರು ಇದ್ದರು.