ಗುಂಡ್ಲುಪೇಟೆ ತಾಲೂಕಿನ ಗರಗನಹಳ್ಳಿ ಸಮೀಪ ನೂತನ ನರ್ಸಿಂಗ್ ಕಾಲೇಜನ್ನು ದಿನೇಶ್ ಗುಂಡೂರಾವ್ ಉದ್ಘಾಟಿಸಿದರು. ಎಚ್.ಎಂ.ಗಣೇಶ್‌ಪ್ರಸಾದ್, ಜೋಸೆಫ್ ಪಾಂಡ್ಲೆ, ಶ್ರೀಕಾಂತ್ ಪುಲಾರಿ, ಲೋಕೇಶ್, ಶಿವನಾಗಪ್ಪ ಇದ್ದರು.
- *ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಗುಂಡ್ಲುಪೇಟೆ: ನರ್ಸಿಂಗ್ ವೃತ್ತಿಗೆ ತನ್ನದೇ ಆದ ಮಹತ್ವವಿರುವುದರಿಂದ ಅದೊಂದು ಗೌರವಾನ್ವಿತ ಹುದ್ದೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ತಾಲೂಕಿನ ಗರಗನಹಳ್ಳಿ ಸಮೀಪ ಭಾನುವಾರ ಸ್ಯಾಂಕ್ಟಾ ಮಥ ನರ್ಸಿಂಗ್ ಕಾಲೇಜು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳು ಆಗಿರುವುದರಿಂದ ಜನರ ಜೀವನಾವಧಿ ಏರಿಕೆಯಾಗಿದೆ. ಇದರಿಂದ ಪ್ರತಿ ವರ್ಷವೂ ಆರೋಗ್ಯ ಸಂಬಂಧಿತ ಉದ್ಯೋಗಗಳಿಗೆ ರಾಜ್ಯದಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಬೇಡಿಕೆಯಿದೆ. ನಿಮ್ಮ ಪರಿಶ್ರಮ, ತ್ಯಾಗ ಹಾಗೂ ಸೇವೆಗಳಿಗೆ ಉತ್ತಮ ಫಲದೊರಕಿ ಭವಿಷ್ಯ ರೂಪಿಸಲಿದೆ. ರೋಗಿ ಗುಣಮುಖರಾಗಲು ನರ್ಸ್ ಪಾತ್ರ ದೊಡ್ಡದಾಗಿದ್ದು, ಫ್ಲಾರೆನ್ಸ್ ನೈಟಿಂಗೇಲ್ ಈ ಹುದ್ದೆಗೆ ವಿಶ್ವಮಟ್ಟದ ಗೌರವ ತಂದಿದ್ದರು ಎಂದು ಸ್ಮರಿಸಿದರು.
ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುವ ಭಾರತೀಯ ನರ್ಸ್‌ಗಳಿಗೆ ವಿದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶ ದೊರಕುತ್ತಿವೆ. ಹಾಗಾಗಿ ಗುಣಮಟ್ಟದ ಶಿಕ್ಷಣ ಪಡೆದು ಉತ್ತಮ ಭವಿಷ್ಯ ಕಂಡುಕೊಳ್ಳಿ ಎಂದು ಸಲಹೆ ನೀಡಿದರು.
ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಸಂಸ್ಥೆಯ ಅಧ್ಯಕ್ಷ ಜೋಸೆಫ್ ಪಾಂಡ್ಲೆ, ಶ್ರೀಕಾಂತ್ ಪುಲಾರಿ, ಮುಖಂಡರಾದ ಲೋಕೇಶ್, ಶಿವನಾಗಪ್ಪ ಇತರರು ಇದ್ದರು.