ಕೊಳ್ಳೇಗಾಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಸದ ಸುನೀಲ್ ಬೋಸ್ ಅವರನ್ನು ರೈತ ಸಂಘದ ಪದಾಧಿಕಾರಿಗಳು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿದರು. ಶೈಲೇಂದ್ರ ಬಸವರಾಜು, ಮೋಳೆ ರಾಜು, ಪೇರಿಯನಾಯಗಂ, ಮಣಿ, ಲಾರೆನ್ಸ್, ನಂಜುಂಡಸ್ವಾಮಿ ಇದ್ದರು. 
ಚಾಮರಾಜನಗರ

ರೈತರ ಬೇಡಿಕೆ ಈಡೇರಿಕೆಗೆ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಸಂಸದ ಸುನೀಲ್ ಬೋಸ್ ಅವರನ್ನು ಭೇಟಿ ಮಾಡಿದ ರೈತ ಸಂಘದ ಪದಾಧಿಕಾರಿಗಳು
ಕೊಳ್ಳೇಗಾಲ : ಹನೂರು ತಾಲೂಕಿನ ಒಡಕೆಹಳ್ಳದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಸುನೀಲ್ ಬೋಸ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇತ್ತೀಚೆಗೆ ಸಂಸದರನ್ನು ಭೇಟಿ ಮಾಡಿದ ರೈತರು,  ರಾಮಾಪುರ ಹೋಬಳಿಯ ಮಾರ್ಟಳ್ಳಿ ಪಂಚಾಯಿತಿ, ಹೊಸೂರು, ಮಲೆ ಮಾದೇಶ್ವರ ಬೆಟ್ಟ, ರಾಮಪುರ ಪಂಚಾಯಿತಿ ವ್ಯಾಪ್ತಿಗಳಲ್ಲಿ 22 ವರ್ಷಗಳಿಂದ ಸರಿಯಾದ ಮಳೆ ಬೀಳದೆ ಅಂತರ್ಜಲ ಕುಸಿದಿದೆ. ಪರಿಣಾಮ ಸಾವಿರಾರು ರೈತರು ವ್ಯವಸಾಯ ಬಿಟ್ಟು ಗುಳೆಹೋಗಿದ್ದಾರೆ. ಗ್ರಾಮದಲ್ಲಿರುವ ನಾಗರಿಕರಿಗೆ ಶುದ್ಧ ಕುಡಿಯುವ ನೀರು ಸಿಗದೇ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಸರ್ಕಾರ ರೈತರಿಗೆ ಸಾಗುವಳಿ ನೀಡಿ 55 ವರ್ಷ ಕಳೆದರೂ ಇನ್ನೂ ರೈತರಿಗೆ ಪೋಡಿ ಮಾಡಿ ಕೊಟ್ಟಿಲ್ಲ, ಕಾವೇರಿ ನದಿಯಿಂದ ದಂಟಳ್ಳಿ ಮಾರ್ಗವಾಗಿ ದಂಟಲ್ಲಿ ಏತ ನೀರಾವರಿ ಯೋಜನೆ ಕಲ್ಪಿಸುವಂತೆ ಹಾಗೂ ಇನ್ನಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಅನೇಕ ಬಾರಿ ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಶಾಸಕರ  ಗಮನಕ್ಕೆ ತಂದರು ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಿಲ್ಲ.
73 ದಿನಗಳಿಂದ ಒಡಕೆ ಹಳ್ಳ ಗ್ರಾಮದಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬಂದು ಜ. 15 ರೊಳಗೆ ಡಿಪಿಆರ್ ಮಾಡಿಕೊಡುವುದಾಗಿ ಹೇಳಿ ಹೋದವರು ಇಷ್ಟು ದಿನ ಆದರೂ ಮತ್ತೆ ಬಂದು ಸಮಸ್ಯೆ ಆಲಿಸಿಲ್ಲ ಹಾಗೂ ಡಿಪಿಆರ್ ಮಾಡಲು ಯಾವುದೇ ಕ್ರಮವನ್ನು ಕೂಡ ವಹಿಸಿಲ್ಲ. ತಾವು ಕೂಡ ಚಳವಳಿ ಕುಳಿತು 73 ದಿನಗಳು ಕಳೆದರೂ ಸಮಸ್ಯೆಯನ್ನು ಆಲಿಸಿಲ್ಲ. ಆದ್ದರಿಂದ ತಾವು ಈ ಭಾಗದ ಸಮಸ್ಯೆಗಳನ್ನು ತುರ್ತಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದರು. 
ಬಳಿಕ ಸಂಸದ ಸುನೀಲ್ ಬೋಸ್ ಪ್ರತಿಕ್ರಿಯಿಸಿ, ಈಗಾಗಲೇ ನನ್ನ ತಂದೆ ಸಚಿವ ಎಚ್.ಸಿ ಮಹದೇವಪ್ಪ ಅವರು ಮತ್ತು ನಾನು ಸಂಬಂಧ ಪಟ್ಟವರ ಜತೆ ಚರ್ಚಿಸಿದ್ದೇವೆ. ಜ.15ರೊಳಗೆ ಡಿಪಿಆರ್ ಮಾಡಿಕೊಡುವುದಾಗಿ ಹೇಳಿರುತ್ತಾರೆ. ಆದ್ದರಿಂದ ಇನ್ನೂ ಒಂದು ವಾರ ಕಾಲವಕಾಶ ನೀಡಿ ಎಂದರು. 
ರೈತ ಮುಖಂಡರಾದ ಶೈಲೇಂದ್ರ ಬಸವರಾಜು, ಮೋಳೆ ರಾಜು, ಪೇರಿಯನಾಯಗಂ, ಮಣಿ, ಲಾರೆನ್ಸ್, ನಂಜುಂಡಸ್ವಾಮಿ ಮತ್ತಿತರಿದ್ದರು.