ಬೆಂಗಳೂರಿನ ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.
- ಸದನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಸ್ತಾಪ
- ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವ ಭರಸವೆ
ಕೊಳ್ಳೇಗಾಲ: ಪಟ್ಟಣದಲ್ಲಿ ಕಳೆದ 18 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ಸುವರ್ಣ ಕರ್ನಾಟಕ ಭವನದ ಬಗ್ಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಧ್ವನಿ ಎತ್ತಿದ್ದಾರೆ.
ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಅವರು, 2023-24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕೊಳ್ಳೇಗಾಲ ಪಟ್ಟಣದಲ್ಲಿರುವ ಸುವರ್ಣ ಕರ್ನಾಟಕ ಭವನದ ಮುಂದುವರೆದ ಕಾಮಗಾರಿಗೆ ಸಂಬಂಧಿಸಿದ ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆಯೇ ಎಂದು ಕೇಳಿದ್ದ ಪ್ರಶ್ನೆಗೆ ಸಚಿವ ಶಿವರಾಜ್ ತಂಗಡಗಿ ಇಲ್ಲ ಎಂದು ಉತ್ತರಿಸಿದರು.
2025 ಡಿ.9 ರಂದು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕ್ಷೇತ್ರವಾರು 25 ಕೋಟಿ ರೂ. ಅನುದಾನವನ್ನು ವಿನಿಯೋಗ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಈ ಪೈಕಿ ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಸಹ ನಡೆಯುತ್ತಿದೆ.
ಆದರೆ, ಕನ್ನಡ ಸಂಸ್ಕೃತಿ ಇಲಾಖೆಯ ಸುವರ್ಣ ಕರ್ನಾಟಕ ಭವನ 2008 ರಲ್ಲಿ ಪ್ರಾರಂಭವಾಗಿದೆ. ಹಿಂದೆ ಬೆಳಗಾವಿ, ಮೈಸೂರು, ಗುಲ್ಬರ್ಗ ಹಾಗೂ ಬೆಂಗಳೂರು ಪ್ರಾದೇಶಿಕ ಸ್ಥಳಗಳಲ್ಲಿ ಈ ಯೋಜನೆ ಅನುಮೋದನೆಗೊಂಡು ಕಾಮಗಾರಿ ಆರಂಭಗೊಂಡಿದೆ. ಅದರಂತೆ ಕೊಳ್ಳೇಗಾಲದಲ್ಲಿ ಸುವರ್ಣ ಕರ್ನಾಟಕ ಭವನ ಕಾಮಗಾರಿ ಆರಂಭಗೊಂಡು 18 ವರ್ಷಗಳೆ ಕಳೆದರೂ ಇವರೆವಿಗೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಲು ವಿಶೇಷ ಅನುದಾನ ನೀಡಿ ಕಾಮಗಾರಿ ಪೂರ್ಣಕ್ಕೆ ಅನುಮೋದನೆ ಮಾಡಿಕೊಳ್ಳಬೇಕೆಂದರು.
ಶಾಸಕರ ಪ್ರಶ್ನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿ, ಕಾಮಗಾರಿ 2007-2008ರಲ್ಲಿ ಪ್ರಾರಂಭಗೊಂಡ ಕಾಮಗಾರಿ ನೆನೆಗುದ್ದಿಗೆ ಬಿದ್ದಿದೆ. ಕಾಮಗಾರಿ ಸಂಬಂಧ 95 ಲಕ್ಷ ಆರ್ಥಿಕ ಇಲಾಖೆಗೂ ಕಳುಹಿಸಲಾಗಿತ್ತು. ಅವರು ಸಣ್ಣ-ಪುಟ್ಟ ಸ್ಪಷ್ಟೀಕರಣ ಕೇಳಿದ್ದರೂ ಅದಕ್ಕೂ ಉತ್ತರಿಸಲಾಗಿದೆ. ಆದಷ್ಟು ಬೇಗನೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ನಡೆಸಲು ಕ್ರಮವಹಿಸಲಾಗುವುದು ಎಂದರು.
ಈ ಮಧ್ಯೆ ಪ್ರವೇಶಿಸಿದ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ, ಕಾಮಗಾರಿ ನೆನೆಗುದ್ದಿಗೆ ಬಿದ್ದು ಬಹಳ ಸಮಯವಾಗಿದೆ. ಹಾಗಾಗಿ ಶಾಸಕರು ವಿಶೇಷ ಅನುದಾನದಲ್ಲಿ ಹಣ ನೀಡಿದ್ದಾರೆ. ಸಚಿವರಾದ ನೀವು ಒಪ್ಪಿದ್ದೀರಿ ಆದರೂ ಅಧಿಕಾರಿಗಳು ಸರಿಯಾದ ಸಮಯಕ್ಕೆ ಏಕೆ ಕೆಲಸ ಮಾಡುವುದಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿ, ನಾನೇ ವೈಯಕ್ತಿಕವಾಗಿ ಮಾತನಾಡಿ ಹಣ ಬಿಡುಗಡೆಗೊಳಿಸಿ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು.