ವರ್ಷಾ ಅವರು ಬಾಳೆ ದಿಂಡಿನಿಂದ ತಯಾರಿಸಿರುವ ಕರಕುಶಲ ವಸ್ತುಗಳು
- ಪಿಎಂ ಮೋದಿ ಪ್ರೇರಣೆಯಿಂದ ಕೃಷಿ ಉದ್ಯಮಿಯಾದ ರೈತ ಮಹಿಳೆ
- ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುತ್ತಿರುವ ವರ್ಷಾಗೆ ಸಿಕ್ತು ಅವಕಾಶ
ಚಾಮರಾಜನಗರ: ಪ್ರಧಾನ ಮಂತ್ರಿ ನರೇಂದ್ರಮೋದಿ ಅವರ ಮನ್ ಕಿ ಬಾತ್ ಕೇಳಿ ಪ್ರೇರಣೆಗೊಂಡು ಕೃಷಿ ಉದ್ಯಮಿಯಾಗಿ ಹೊರಹೊಮ್ಮಿ ಮುಂದೊಂದು ದಿನ ಮನ್ ಕಿ ಬಾತ್‌ನಲ್ಲಿ ಪಿಎಂ ಮೋದಿ ಅವರಿಂದ ಶ್ಲಾಘನೆಗೊಳಪಟ್ಟಿದ್ದ ಜಿಲ್ಲೆಯ ರೈತ ಮಹಿಳೆಗೆ ಜ.26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದಾರೆ.
ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುತ್ತಿರುವ ವರ್ಷಾ ಆಯ್ಕೆಯಾಗಿರುವ ರೈತ ಮಹಿಳೆ. ಇವರಿಗೆ ದೆಹಲಿಯಲ್ಲಿ ನಡೆಯಲಿರುವ 77ನೇ ಗಣರಾಜ್ಯೋತ್ಸವಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿದೆ. ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರಿಗೆ ಈ ಅವಕಾಶ ದೊರೆತಿದೆ. ಕೃಷಿ ವಲಯದಿಂದ ವರ್ಷಾ ಆಯ್ಕೆಯಾಗಿದ್ದು, ಪತಿ ಶ್ರೀಕಂಠ ಅವರೊಂದಿಗೆ ಜ.25ರಂದು ದೆಹಲಿಗೆ ಹೋಗಲು ತಯಾರಿ ನಡೆಸಿದ್ದಾರೆ.
ಪಿಎಂ ಪ್ರೇರಣೆ, ಉದ್ಯಮ ಸ್ಥಾಪನೆ: ಎಂಟೆಕ್ ಪದವೀಧರೆಯಾಗಿರುವ ವರ್ಷಾ ಆಕೃತಿ ಇಕೋ ್ರೆಂಡ್ಲಿ ಎಂಟರ್ ಪ್ರೈಸಸ್ ಸಂಸ್ಥೆ ಸ್ಥಾಪಿಸಿದ್ದಾರೆ. ಇದಕ್ಕೆ ಸ್‌ಟಾವೇರ್ ಉದ್ಯೋಗಿಯಾಗಿರುವ ಪತಿ ಶ್ರೀಕಂಠ ಸಾಥ್ ನೀಡಿದ್ದಾರೆ. ಈ ಸಂಸ್ಥೆ ಕಟ್ಟಲು ಪಿಎಂ ಮೋದಿ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪಿಸಿದ್ದ ಅಂಶಗಳು ಅಡಿಗಲ್ಲುಗಳಾದವು ಎನ್ನುವುದೇ ವಿಶೇಷ.
ಉಮ್ಮತ್ತೂರಿನಲ್ಲಿ ಜಮೀನು ಖರೀದಿಸಿ ವಿಭಿನ್ನ ಪ್ರಯತ್ನದ ಚಿಂತನೆಯಲ್ಲಿದ್ದ ವರ್ಷಾಗೆ ಪಿಎಂ ಮೋದಿ ಅವರು ಮನ್ ಕಿ ಬಾತ್‌ನಲ್ಲಿ ತಮಿಳುನಾಡಿನಲ್ಲಿ ಬಾಳೆಯಿಂದ ಉತ್ಪನ್ನ ತಯಾರಿಸುತ್ತಿರುವ ಉದ್ಯಮಿಯೊಬ್ಬರ ಬಗ್ಗೆ ಪ್ರಸ್ತಾಪಸಿದ್ದು ಗಮನ ಸೆಳೆಯಿತು. ಇದರಿಂದ ಪ್ರೇರಣೆಗೊಂಡ ವರ್ಷಾ ಅಧ್ಯಯನ ನಡೆಸಿ ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುವ ಆಕೃತಿ ಇಕೋ ್ರೆಂಡ್ಲಿ ಎಂಟರ್ ಪ್ರೈಸಸ್ ಸಂಸ್ಥೆ ಸ್ಥಾಪಿಸಿದರು. ಕೋವಿಡ್ 2ನೇ ಅಲೆಯ ಲಾಕ್‌ಡೌನ್‌ನಿಂದ ಉದ್ಯಮಗಳು ನಲುಗಿದ್ದ ಸಂದರ್ಭದಲ್ಲಿ ವರ್ಷಾ ಅವರ ಸಂಸ್ಥೆ ಆರಂಭಗೊಂಡಿತು ಎನ್ನುವುದು ಮತ್ತೊಂದು ವಿಶೇಷ. ಪ್ರಸ್ತುತ ಇವರ ಬಳಿ ಹಲವರು ಉದ್ಯೋಗ ಮಾಡುತ್ತಿದ್ದಾರೆ. ವರ್ಷಾ ಅವರ ಸಾಧನೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಂಘ-ಸಂಸ್ಥೆಗಳಿಂದ ಪ್ರಶಸ್ತಿ ಲಭಿಸಿದೆ.
ಬಾಳೆಯಿಂದ ಉತ್ಪನ್ನ ತಯಾರಿಕೆ:
ವರ್ಷಾ ತಮ್ಮಜಮೀನಿನಲ್ಲಿ ಬಾಳೆ, ಮಾವು, ಅರಿಶಿಣ ಬೆಳೆದಿದ್ದಾರೆ. ಬಾಳೆ ದಿಂಡಿನ ನಾರಿನಿಂದ ಬ್ಯಾಗ್, ಬಾಕ್ಸ್, ಪೂಜೆ ಬ್ಯಾಗ್, ಪರ್ಸ್, ಲ್ಯಾಪ್‌ಟಾಪ್ ಬ್ಯಾಗ್, ಯೋಗ ಮ್ಯಾಟ್, ಕಪ್ ಮತ್ತು ಇನ್ನಿತರೆ ಕರಕುಶಲ ವಸ್ತುಗಳನ್ನು ತಯಾರು ಮಾಡುತ್ತಿದ್ದಾರೆ. ಬಾಳೆಯ ನಾರು ತೆಗೆದಾಗ ಬರುವ ರಸವನ್ನು ಶೇಖರಣೆ ಮಾಡಿ ಇದರಲ್ಲಿ ಪೊಟ್ಯಾಷಿಯಂ ದ್ರವರೂಪದ ಗೊಬ್ಬರವನ್ನು ತಮ್ಮ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಮೋದಿ ಮನದ ಮಾತಿನಲ್ಲಿ ವರ್ಷಾ:
ಆಕಾಶವಾಣಿಯಲ್ಲಿ 2023ರ ನ.26ರಂದು ಪ್ರಸಾರಗೊಂಡ ಮನ್ ಕಿ ಬಾತ್ 107ನೇ ಆವೃತ್ತಿಯಲ್ಲಿ ಪಿಎಂ ಮೋದಿ ವರ್ಷಾ ಬಗ್ಗೆ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ‘ಮನ್ ಕಿ ಬಾತ್ ಹಲವರಿಗೆ ಪ್ರೇರಣೆಯಾಗಿದೆ. ವರ್ಷಾ ಅವರು ಬಾಳೆ ದಿಂಡಿನಿಂದ ಜೈವಿಕ ಗೊಬ್ಬರ ತಯಾರಿಸಲು ಆರಂಭಿಸಿದರು. ಪ್ರಕೃತಿ ಬಗ್ಗೆ ಪ್ರೀತಿ ಇರುವ ವರ್ಷಾ ಅವರ ಈ ಕೆಲಸ ಇತರರಿಗೆ ಉದ್ಯೋಗ ನೀಡಿದೆ’ ಎಂದು ಶ್ಲಾಸಿದ್ದರು.
ದೆಹಲಿ ಗಣರಾಜ್ಯೋತ್ಸವದಲ್ಲಿ..:
ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಜಿಲ್ಲೆಯವರಿಗೆ ಭಾಗವಹಿಸುವ ಅವಕಾಶ ಒದಗಿ ಬರುತ್ತಲೇ ಇದೆ. ಪ್ರಧಾನ ಮಂತ್ರಿ ಬೀದಿಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ(ಪಿಎಂ ಸ್ವನಿಧಿ) ಯೋಜನೆಯಲ್ಲಿ ಕಿರು ಸಾಲ ಸೌಲಭ್ಯ ಪಡೆದು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡುತ್ತಿದ್ದ ನಗರದ ಗುಂಡ್ಲುಪೇಟೆ ರಸ್ತೆಯ ಬೀದಿಬದಿಯ ಟೀ ಅಂಗಡಿ ವ್ಯಾಪಾರಿ ಸಮೀವುಲ್ಲಾ 2024ರಲ್ಲಿ ದೆಹಲಿಯಲ್ಲಿ ನಡೆದಿದ್ದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದರು. ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆಯಲ್ಲಿ ಮಾದರಿ ಕೃಷಿ ಮಾಡುತ್ತಿರುವ ಚಿನ್ನಸ್ವಾಮಿ ಮತ್ತು ಪತ್ನಿ ಗಿರಿಕನ್ಯೆ ಅವರಿಗೆ 2025ರಲ್ಲಿ ಆಹ್ವಾನ ಸಿಕ್ಕಿತ್ತು. ಈ ವರ್ಷ ವರ್ಷಾ ಅವರಿಗೆ ಅವಕಾಶ ದೊರೆತಿದೆ.