ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಚಾಮರಾಜನಗರ ಜಿಲ್ಲಾ ಮತ್ತು ಹನೂರು ತಾಲೂಕು ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಗುರುವಾರ ಸಭೆ ನಡೆಯಿತು. ಹೊಂಡರಬಾಳು ವಾಸು, ಸಿ.ಕೆ.ಮಂಜುನಾಥ್, ರಾಮಸಮುದ್ರ ಬಾಬು, ಶಂಕರ್ ಚೇತನ್, ಸಂಪತ್‌ಕುಮಾರ್, ಮಹಾಲಿಂಗ, ಮಹೇಶ್ ಇತರರು ಇದ್ದರು. 
ಚಾಮರಾಜನಗರ

ಮಾ.16ರಂದು ಹನೂರಿನಲ್ಲಿ ಪ್ರತಿಭಟನೆಗೆ ನಿರ್ಧಾರ

ಪ್ರಮುಖ ಮುಖ್ಯಾಂಶಗಳು

  • ಬಲಗೈ ಸಮುದಾಯದ ಸಭೆಯಲ್ಲಿ ಮುಖಂಡರ ತೀರ್ಮಾನ
  • ಮೆರವಣಿಗೆ ಮೂಲಕ ಸಾಗಿ ಮನವಿ ಸಲ್ಲಿಸಲಿರುವ ಮುಖಂಡರು
ಚಾಮರಾಜನಗರ: ಒಳ ಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆನ್ಯಾಯವಾಗಿದೆ ಎಂದು ಮಾ.16ರಂದು ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಸಮುದಾಯದ ಮುಖಂಡರು ನಿರ್ಧರಿಸಿದರು.
ಹನೂರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಚಾಮರಾಜನಗರ ಜಿಲ್ಲಾ ಮತ್ತು ಹನೂರು ತಾಲೂಕು ಬಲಗೈ ಸಮುದಾಯದ ಒಕ್ಕೂಟದ ವತಿಯಿಂದ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ತೀರ್ಮಾನ ಕೈಗೊಂಡ ಮುಖಂಡರು, ಮಾ.16ರಂದು ಹನೂರು ಪಟ್ಟಣದ ಮಹದೇಶ್ವರ ಕ್ರೀಡಾಂಗಣದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬಳಿಕ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಇದೇ ವೇಳೆ ಬಲಗೈ ಸಮುದಾಯದ ಚಾಮರಾಜನಗರ ಮುಖಂಡ ಹೊಂಡರಬಾಳು ವಾಸು ಮಾತನಾಡಿ, ಒಳ ಮೀಸಲಾತಿ ವರದಿಯು ಅವೈಜ್ಞಾನಿಕವಾಗಿದ್ದು, ರೋಸ್ಟರ್ ಬಿಂದುವಿನಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಬಲಗೈ ದಲಿತ ಸಮುದಾಯದ ಸಚಿವರು, ಶಾಸಕರು, ಅಧಿಕಾರಿಗಳು ಧ್ವನಿ ಎತ್ತುತ್ತಿಲ್ಲ. ಆಡಳಿತ ಪಕ್ಷದಲ್ಲಿದ್ದರೂ ಬೇರೆಯವರ ಕೈಗೊಂಬೆಯಾಗಿದ್ದಾರೆ. ಇದು ದುರಾದೃಷ್ಟಕರ ಸಂಗತಿ. ಇದನ್ನು ಖಂಡಿಸಿ ಈಗಾಗಲೇ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ತಾಲೂಕುಗಳಲ್ಲಿ ಬಲಗೈ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿದೆ. ಮಾ.16ರಂದು ಹನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕು. ಗ್ರಾಮಗಳ ಮುಖಂಡರು, ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಚಾಮರಾಜನಗರದ ಮುಖಂಡ ಸಿ.ಕೆ.ಮಂಜುನಾಥ್, ರಾಮಸಮದ್ರ ಬಾಬು, ಕೊಳ್ಳೇಗಾಲದ ಶಂಕರ್ ಚೇತನ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂಪತ್‌ಕುಮಾರ್, ಪ್ರಜಾ ವಿಮೋಚನಾ ಚಳುವಳಿಯ ಅಧ್ಯಕ್ಷ ಮಹಾಲಿಂಗ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್, ಗೌತಮ್ ಶಾಲೆಯ ಎಸ್.ರವೀಂದ್ರ, ಅಜ್ಜಿಪುರ ಬೈರಾಜ್, ಹನೂರು ಮುಖಂಡರಾದ ಕಿರಣ, ನಂಜಪ್ಪ, ಮಹದೇವ, ಸುರೇಶ್ ಮತ್ತು ಇತರರು ಹಾಜರಿದ್ದರು.