- ಚಾ.ನಗರ ವಿವಿಯಿಂದ ಮೈಸೂರು ವಿವಿಗೆ ಮಂಟೇಸ್ವಾಮಿ ಅಧ್ಯಯನ ಪೀಠ ಸ್ಥಳಾಂತರ
- ವಾಪಸ್ ಕೊಡದಿದ್ದರೆ ನೂತನ ಪೀಠ ಮಾಡಲು ತೀರ್ಮಾನ
- ಸಿಂಡಿಕೇಟ್ ಸಭೆಯ ಮುಂದಿಡಲಿರುವ ವಿವಿ ಕುಲಪತಿ
ಚಾಮರಾಜನಗರ: ಮಂಟೇಸ್ವಾಮಿ ಮತ್ತು ನೀಲಗಾರರ ಪರಂಪರೆಯ ಪರಿಮಳವಿರುವ ತಾಣವಾಗಿರುವ ಚಾಮರಾಜನಗರಕ್ಕೆ ಮೈಸೂರು ವಿಶ್ವ ವಿದ್ಯಾಲಯ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ವಾಪಸ್ ಕೊಡದಿದ್ದರೆ ಹೊಸದಾಗಿ ಪೀಠ ಸ್ಥಾಪನೆ ಮಾಡಲು ಚಾಮರಾಜನಗರ ವಿಶ್ವ ವಿದ್ಯಾಲಯ ತೀರ್ಮಾನ ಮಾಡಿದೆ.
ಚಾಮರಾಜನಗರ ವಿವಿಯಲ್ಲಿದ್ದ ಮಂಟೇಸ್ವಾಮಿ ಅಧ್ಯಯನ ಪೀಠ ಮೈಸೂರ ವಿಶ್ವ ವಿದ್ಯಾಲಯಕ್ಕೆ ಸ್ಥಳಾಂತರಗೊಂಡಿದೆ. ಈ ಹಿನ್ನೆಲೆಯಲ್ಲಿ ಮರಳಿ ಪೀಠವನ್ನು ಕೇಳುತ್ತಿರುವ ಚಾಮರಾಜನಗರ ವಿವಿಗೆ ಸ್ಪಂದನೆ ದೊರೆಯದಿದ್ದರೆ ನೂತನವಾಗಿ ಪೀಠ ಸ್ಥಾಪನೆ ಮಾಡಲು ನಿರ್ಧಾರ ಮಾಡಿದೆ.
ವಾಪಸ್ ಪಡೆದ ಮೈಸೂರು ವಿವಿ: ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಮೈಸೂರು ವಿವಿಯ ವ್ಯಾಪ್ತಿಯಲ್ಲಿತ್ತು. ಆಗ 2021ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠ ಸ್ಥಾಪನೆಯಾಗಿತ್ತು.
ಸರ್ಕಾರದಿಂದ 30 ಲಕ್ಷ ರೂ. ಅನುದಾನವನ್ನು ನೀಡಲಾಗಿತ್ತು. ಈ ಹಣವನ್ನು ಎ್ಡಿ ಇಟ್ಟು ಇದರಲಿಂದ ಬರುವ ಬಡ್ಡಿ ಹಣದಲ್ಲಿ ಪೀಠದ ಕಾರ್ಯ ಚಟುವಟಿಕೆಗಳಿಗೆ ಬಳಕೆ ಮಾಡಲಾಗುತ್ತಿತ್ತು. ವಿದ್ವಾಂಸರಾದ ಹನೂರು ಕೃಷ್ಣಮೂರ್ತಿ ಅವರು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ತಂಬೂರಿ ಪದಗಳನ್ನು ಹಾಡುವ ಆಯ್ದ ನೀಲಗಾರರ ಕುರಿತು ‘ನಾವು ಕೂಗುವ ಕೂಗು’ ಪುಸ್ತಕವನ್ನು ಹೊರತರಾಗಿತ್ತು. ಮಂಟೇಸ್ವಾಮಿ ಪಠ್ಯದ ಅಧ್ಯಯನ, ನೀಲಗಾರರ ಹಾಡುಗಳನ್ನು ಯೂಟ್ಯೂಬ್‌ಗೆ ಅಪ್ಲೋಡ್ ಮಾಡುವ ಕಾರ್ಯಗಳಾಗಿದ್ದವು.
ನಂತರದ ದಿನಗಳಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರವನ್ನು ಚಾಮರಾಜನಗರ ವಿವಿಯಾಗಿ ಬದಲಾಯಿಸಲಾಯಿತು. ಇದರಿಂದಾಗಿ ಮೈಸೂರು ವಿವಿಯಿಂದ ಚಾಮರಾಜನಗರ ವಿವಿ ಪ್ರತ್ಯೇಕಗೊಂಡಿತು. ಈ ಸಂದರ್ಭದಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ಮೈಸೂರುಗೆ ವಿವಿಗೆ ವರ್ಗಾಯಿಸಬೇಕೆಂಬ ಒತ್ತಡ ಬಂತು. ಪೀಠವನ್ನು ಉಳಿಸಿಕೊಳ್ಳಲು ಚಾಮರಾಜನಗರ ವಿವಿ ಸರ್ಕಾರಕ್ಕೆ ಪತ್ರ ಬರೆದರೂ ಪ್ರಯೋಜವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿ ಪೀಠವನ್ನು ಸ್ಥಳಾಂತರ ಮಾಡಲಾಗಿದೆ. ಚಾಮರಾಜನಗರ ವಿವಿಯಲ್ಲೇ ಪೀಠವನ್ನು ಉಳಿಸಿಕೊಳ್ಳು ನಡೆಸಿದ ಪ್ರಯತ್ನ ಕೈಗೂಡದ ಹಿನ್ನೆಲೆಯಲ್ಲಿ ಸ್ವತಂತ್ರಯವಾಗಿ ಪೀಠ ಸ್ಥಾಪನೆ ಮಾಡುವ ವಿಚಾರವನ್ನು ಸಿಂಡಿಕೇಟ್ ಸಭೆ ಮುಂದಿಡಲು ವಿವಿ ತೀರ್ಮಾನ ಮಾಡಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಂಟೇಸ್ವಾಮಿ ಮತ್ತು ನೀಲಗಾರರ ಪರಂಪರೆ ಹಾಸುಹೊಕ್ಕಾಗಿದೆ. ಮಲೆ ಮಹದೇಶ್ವರ, ಮಂಟೇಸ್ವಾಮಿ ಕಾವ್ಯಗಳು ಜಾನಪದ ಲೋಕದ ಮಹಾಕಾವ್ಯಗಳಾಗಿವೆ. ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಗ್ರಾಮದಲ್ಲಿ ನಡೆಯುವ ಜಾತ್ರೆ , ಸಹಪಂಕ್ತಿ ಭೋಜನ ಪದ್ಧತಿಯ ಮೆರುಗು ಮಂಟೇಸ್ವಾಮಿ ಪರಂಪರೆಯ ಜ್ಯೋತಿಯನ್ನು ಬೆಳಗುತ್ತಿದೆ. ಈ ಪ್ರದೇಶವನ್ನೊಳಗೊಂಡ ಚಾಮರಾಜನಗರ ಜಿಲ್ಲೆಯಲ್ಲಿ ಮಂಟೇಸ್ವಾಮಿ ಅಧ್ಯಯನ ಪೀಠ ಉಳಿಬೇಕಾಗಿತ್ತು. ಸಂಶೋಧನೆಗೆ ಪೂರಕವಾದ ವಾತಾವರಣವಿತ್ತು. ಆದರೆ ಮೈಸೂರು ವಿವಿ ಹಿಂಪಡೆದುಕೊಂಡಿರುವುದು ಬೇಸರದ ಸಂಗತಿ.
ಸರ್ಕಾರದ ಮಟ್ಟದಲ್ಲಿ ಪತ್ರವ್ಯವಹಾರದ ಭರವಸೆ:
ಜಿಲ್ಲೆಯು ಮಹದೇಶ್ವರರು, ಮಂಟೇಸ್ವಾಮಿ ನಡೆದಾಡಿದ ಪೂಣ್ಯಭೂಮಿಯಾಗಿದೆ. ಮಂಟೇಸ್ವಾಮಿ ಅಧ್ಯಯನ ಪೀಠ ಮೈಸೂರಿಗೆ ಸ್ಥಳಾಂತರವಾಗಿರುವುದು ಬೇಸರದ ಸಂಗತಿ ಎಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಎಂ. ನಂಜಯ್ಯ ಹೊಂಗನೂರು ತಿಳಿಸಿದ್ದಾರೆ. ಚಾಮರಾಜನಗರ ವಿವಿ ಸೆಮಿನಾರ್ ಹಾಲ್‌ನಲ್ಲಿ ಕನ್ನಡ ವಿಭಾಗದಿಂದ ಜೂ.5ರಂದು ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರಂಭದ ಅವರು ಮಾತನಾಡಿದ ಅವರು, ಅಧ್ಯಯನ ಪೀಠವನ್ನು ಮತ್ತೆ ಚಾಮರಾಜನಗರ ವಿವಿಗೆ ನೀಡಲು ಸರ್ಕಾರದ ಮಟ್ಟದಲ್ಲಿ ಪತ್ರ ವ್ಯವಹಾರ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಮಂಜೂರಾಗಿದ್ದ ಮಂಟೇಸ್ವಾಮಿ ಅಧ್ಯಯನ ಪೀಠ ಮೈಸೂರು ವಿಶ್ವವಿದ್ಯಾಲಯಕ್ಕೆ ಸ್ಥಳಾಂತರವಾಗಿದೆ. ಅದನ್ನು ಮತ್ತೆ ಚಾಮರಾಜನಗರ ವಿ.ವಿಗೆ ವರ್ಗಾಯಿಸುವಂತೆ ಕೋರಲಾಗುವುದು. ಸಾಧ್ಯವಾಗದಿದ್ದಲ್ಲಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ವಿಚಾರ ಮಂಡಿಸಿ ಮಂಟೇಸ್ವಾಮಿ ಅಧ್ಯಯನ ಪೀಠವನ್ನು ಹೊಸದಾಗಿ ಇಲ್ಲಿಯೇ ಆರಂಭಿಸಿ ಜಿಲ್ಲೆಯಲ್ಲಿ ಮಂಟೇಸ್ವಾಮಿ ಪರಂಪರೆ ಉಳಿವಿಗೆ ಪ್ರಯತ್ನಿಸಲಾಗುವುದು.
ಪ್ರೊ.ಎಂ.ಆರ್.ಗಂಗಾಧರ್, ಕುಲಪತಿ, ಚಾಮರಾಜನಗರ ವಿಶ್ವವಿದ್ಯಾಲಯ
ಮಂಟೇಸ್ವಾಮಿ ಅಧ್ಯಯನ ಪೀಠದ ಕುರಿತು ಇರುವ ತಾಂತ್ರಿಕ ಸಮಸ್ಯೆಯನ್ನು ಮೈಸೂರು ಮತ್ತು ಚಾಮರಾಜನಗರ ವಿವಿಗಳು ಬಗೆಹರಿಸಿಕೊಳ್ಳಬೇಕು. ವಿದ್ವಾಂಸರು, ಕಲಾವಿದರ ಆಸೆಯಂತೆ ಮಂಟೇಸ್ವಾಮಿ ಅಧ್ಯಯನ ಪೀಠ ಜಿಲ್ಲೆಯಲ್ಲೇ ಉಳಿಯುವುದು ಸೂಕ್ತ. ಇದರ ಬಗ್ಗೆ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ತೋರಿಸಬೇಕಾಗಿದೆ.
ಮಹದೇವ ಶಂಕನಪುರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಕೊಳ್ಳೇಗಾಲ