ಪಿಂಚಣಿ ಸ್ಥಗಿತಗೊಂಡಿರುವುದನ್ನು ಕೇಳಲು ಊರುಗೋಲಿನ ಸಹಾಯದಲ್ಲಿ ನಡೆಯುತ್ತಾ ಚಾಮರಾಜನಗರದ ಜಿಲ್ಲಾಡಳಿತ ಭವನಕ್ಕೆ ಆಗಮಿಸಿರುವ ಅಂಗವಿಕಲ ಜಡೇಗೌಡ
- ಸರ್ಕಾರಿ ಕಚೇರಿಗಳಿಗೆ ಒಂಟಿ ಕಾಲಿನ ಜಡೇಗೌಡ ಪ್ರದಕ್ಷಿಣೆ
- ಜಿಲ್ಲೆಯಲ್ಲಿ ಅನೇಕ ಅಂಗವಿಕಲರ ಮಾಸಾಶನ ಸ್ಥಗಿತಗೊಂಡು ಪರದಾಟ
ಒಂದು ಕಾಲಿಲ್ಲದೆ ಊರುಗೋಲು ಹಿಡಿದುಕೊಂಡು, ಕತ್ತಿನ ಹಿಂಭಾಗಕ್ಕೆ ದಾಖಲೆಗಳ ಕೈಚೀಲವನ್ನು ದಾರದಲ್ಲಿ ಕಟ್ಟಿಕೊಂಡು ಪಿಂಚಣಿಗಾಗಿ ಸರ್ಕಾರ ಕಚೇರಿಗಳಿಗೆ ಕುಂಟುತ್ತಾ ಅಲೆಯುತ್ತಿರುವ ಅಂಗವಿಕಲನ ಆಧಾರ್ ಕಾರ್ಡ್ ಸಂಖ್ಯೆಗೆ ಮೃತನ ಲಿಂಕ್ ಮಾಡಲಾಗಿದೆ..!
ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದ ಸೋಲಿಗ ಜಡೇಗೌಡ ವೃದ್ಧ ಅಂಗವಿಕಲ. 12 ವರ್ಷಗಳ ಹಿಂದೆ ಕಾಡಿನಲ್ಲಿ ಜೇನು ಕೀಳಲು ಮರ ಹತ್ತಿ ಕೆಳಕ್ಕೆ ಬಿದ್ದು ಕಾಲು ಕಳೆದುಕೊಂಡರು. ಅಂದಿನಿಂದ ಜೀವನಕ್ಕೆ ಆಧಾರವಾಗಿರುವ ಪಿಂಚಣಿ ಕೆಲವು ತಿಂಗಳಿನಿಂದ ಸ್ಥಗಿತಗೊಂಡಿದೆ.
ಸೌಲಭ್ಯಕ್ಕಾಗಿ ಹನೂರು, ಕೊಳ್ಳೇಗಾಲದ ಸರ್ಕಾರಿ ಕಚೇರಿಗಳಿಗೆ ಒಂಟಿ ಕಾಲಿನಲ್ಲಿ ಅಲೆದು ಬಳಿಕ ಜಿಲ್ಲಾಡಳಿತ ಭವನಕ್ಕೂ ಬಂದಿದ್ದಾರೆ. ಇಲ್ಲಿಗೆ ಬಂದ ಮೇಲೆ ವೃದ್ಧಾಪ್ಯ ವೇತನ, ಅಂಗವಿಕಲರ ಪಿಂಚಣಿ ಎರಡನ್ನೂ ಪಡೆಯುತ್ತಿರುವ ಗುಮಾನಿ ಮೇಲೆ ಸೌಲಭ್ಯ ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ.
ಆದರೆ ಇದರಲ್ಲಾಗಿರುವ ಮುಖ್ಯ ಎಡವಟ್ಟೇನೆಂದರೆ, ಕಗ್ಗಲಿಗುಂದಿಯಲ್ಲಿ ಮೃತನಾದ ರಂಗೇಗೌಡರ ಮಗ ಜಡೆಯಗೌಡನ ಹೆಸರಿಗೆ ಅಂಗವಿಕಲ ಜಡೇಗೌಡರ ಆಧಾರ್ ಲಿಂಕ್ ಮಾಡಲಾಗಿದೆ. ಹೀಗಾಗಿ ಸಾಮಾಜಿಕ ಪಿಂಚಣಿ ಯೋಜನೆಯಡಿ ಜಡೇಗೌಡರ ಆಧಾರ್‌ಸಂಖ್ಯೆ ಪ್ರಕಾರ ಪರಿಶೀಲಿಸಿದರೆ ಜಡೇಗೌಡ ಮೃತಪಟ್ಟಿದ್ದಾರೆ ಎಂದು ತೋರಿಸುತ್ತಿದೆ.
ಬದುಕಿರುವ ಅಂಗವಿಕಲ ಜಡೇಗೌಡ ಪಿಂಚಣಿಗಾಗಿ ಒಂಟಿ ಕಾಲಿನಲ್ಲಿ ಕುಂಟುತ್ತಾ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಈ ಎಡವಟ್ಟಿನ ಕುರಿತು ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿ ಮಾರುತಿ ವಿಜಯವಾಣಿಯೊಂದಿಗೆ ಮಾತನಾಡಿ, ಕಗ್ಗಲಿಗುಂದಿಯಲ್ಲಿ ಒಂದೇ ಹೆಸರಿನ ಇಬ್ಬರು ಜಡೇಗೌಡ ಇದ್ದಾರೆ. ಪರಿಶೀಲನೆ ಮಾಡುವಾಗ ಸತ್ತಿರುವವರ ಹೆಸರಿಗೆ ಬದುಕಿರುವವರ ಆಧಾರ್ ಲಿಂಕ್ ಆಗಿ ತಪ್ಪಾಗಿದೆ. ಇದನ್ನು ತಕ್ಷಣ ಸರಿಪಡಿಸಲಾಗುವುದು ಎಂದಿದ್ದಾರೆ.
ಜಡೇಗೌಡರಂತೆಯೇ ಜಿಲ್ಲೆಯಲ್ಲಿ ಅನೇಕ ಅಂಗವಿಕಲರಿಗೆ ಮಾಸಾಶನ ಸ್ಥಗಿತಗೊಂಡಿದೆ. ಜಿಲ್ಲೆಯಲ್ಲಿ ವಿವಿಧ ಪಿಂಚಣಿ ಯೋಜನೆಗಳ ಅಡಿಯಲ್ಲಿ 2,60,786 ಲಾನುಭವಿಗಳಿದ್ದು, ಅರ್ಹ ಲಾನುಭವಿಗಳಿಗೆ ಸೌಲಭ್ಯ ಕೊಡಬೇಕೆಂದು ನಡೆಸಿ ಸಮೀಕ್ಷೆ ವೇಳೆ 62283 ಲಾನುಭವಿಗಳ ಪಿಂಚಣಿಯನ್ನು ಗುಮಾನಿ ಮೇಲೆ ತಡೆ ಹಿಡಿಯಲಾಗಿದೆ. ಇದರಲ್ಲಿ 37346 ಲಾನುಭವಿಗಳು ಅರ್ಹರಲ್ಲವೆಂದು ಪಿಂಚಣಿ ಸ್ಥಗಿತಗೊಳಿಸಲಾಗಿದೆ. ಇನ್ನು ಅಂಗವಿಕಲರ ಪ್ರತ್ಯೇಕ ಅಂಕಿ-ಅಂಶ ಗಮನಿಸುವುದಾದರೆ ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ವೇತನ ಯೋಜನೆ-1ರಲ್ಲಿ ಒಟ್ಟು 7801(800 ರೂ.), ಯೋಜನೆ-2ರಲ್ಲಿ 7312(1400 ರೂ.), ಯೋಜನೆ-3ರಲ್ಲಿ 1110(2000) ರೂ. ಅಂಗವಿಕಲರು ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ಇವರಲ್ಲಿ ತಿಂಗಳ ಹಿಂದೆ ತಾತ್ಕಾಲಿಕವಾಗಿ 5 ಸಾವಿರಕ್ಕೂ ಹೆಚ್ಚು ಲಾನುಭವಿಗಳ ಮಾಸಾಶನವನ್ನು ತಡೆ ಹಿಡಿಯಲಾಗಿತ್ತು. ಇವರೆಲ್ಲ ಸರ್ಕಾರಿ ಕಚೇರಿಗಳಿಗೆ ದಾಖಲೆಗಳನ್ನು ಒದಗಿಸಲು ಅಲೆಯುತ್ತಿದ್ದಾರೆ. ಬೇಸತ್ತ ಅಂಗವಿಕಲರು ಕೆಲವು ದಿನಗಳ ಹಿಂದೆ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆಯನ್ನೂ ಮಾಡಿದ್ದರು.
ಕಗ್ಗಲಿಗುಂದಿ ಜಡೇಗೌಡ ಅವರಿಗೆ ಅಂಗವಿಕಲರ ಪಿಂಚಣಿ ಸ್ಥಗಿತಗೊಂಡಿರುವ ಕುರಿತು ಪರಿಶೀಲನೆ ಮಾಡಿಸಿ ಕ್ರಮವಹಿಸಲಾಗುವುದು.
ಟಿ.ಜವರೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ, ಚಾಮರಾಜನಗರ
ಬದುಕಿರುವ ವ್ಯಕ್ತಿಯ ಆಧಾರ್ ಸಂಖ್ಯೆಯನ್ನು ಮೃತರ ಹೆಸರಿಗೆ ಲಿಂಕ್ ಮಾಡಿರುವುದು ಒಂದು ಸಣ್ಣ ಉದಾಹರಣೆಯಷ್ಟೆ. ಇದೇ ರೀತಿ ಅನೇಕ ಎಡವಟ್ಟುಗಳು ಆಗಿ ಅಂಗವಿಕಲರು ಪಿಂಚಣಿ ಪಡೆಯದಂತಾಗಿದೆ. ಮುಂದಿನ ದಿನಗಳಲ್ಲಿ ಈ ಅವ್ಯವಸ್ಥೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು.
ರಮೇಶ್, ಜಿಲ್ಲಾ ಅಂಗವಿಕಲರ ಸಂಘದ ಅಧ್ಯಕ್ಷ, ಚಾಮರಾಜನಗರ