ಕೊಳ್ಳೇಗಾಲ: ಕರ್ತವ್ಯ ಲೋಪ ಆರೋಪದ ಮೇಲೆ ತಾಲೂಕಿನ ಸತ್ತೇಗಾಲ ಗ್ರಾಮದ ಲಕ್ಷ್ಮಮ್ಮ ಮತ್ತು ಸೊಸಯ್ಯನ ಸಿದ್ದಯ್ಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಹೂವಮ್ಮ ಅವರನ್ನು ಚಾ.ನಗರ ಡಿಡಿಪಿಐ ಎಸ್.ಚಂದ್ರಪಾಟೀಲ್ ಸೇವೆಯಿಂದ ಅಮಾನತು ಮಾಡಿ ಆದೇಶಿಸಿದ್ದಾರೆ.
ಬಿಸಿಯೂಟದಲ್ಲಿ ಹುಳುವಿದ್ದ ಆಹಾರವನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಿದ ಕುರಿತು 2025 ಡಿ.18 ರಂದು ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಈ ಹಿನ್ನೆಲೆಯಲ್ಲಿ ಕೊಳ್ಳೇಗಾಲ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ, ಶಾಲಾ ಮುಖ್ಯಶಿಕ್ಷಕಿ ಹೂವಮ್ಮ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಹೂವಮ್ಮ ಲಿಖಿತ ಸಮಾಜಾಯಷಿ ನೀಡಿದ್ದರು. ಘಟನೆ ಸಂಬಂಧ ಅಕ್ಷರ ದಾಸೋಹ ಯೋಜನೆಯ ಅಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ತ್ರಿಸದಸ್ಯ ಸಮಿತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮುಖ್ಯಶಿಕ್ಷಕರ ನಿರ್ಲಕ್ಷ್ಯದ ವರ್ತನೆಯಿಂದ ಈ ಘಟನೆ ಜರುಗಿದೆ. ಈ ಬಗ್ಗೆ ಶಿಸ್ತು ಕ್ರಮವಹಿಸುವಂತೆ ಅಭಿಪ್ರಾಯಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಈ ವರದಿಗಳ ಅಂಶಗಳನ್ನು ಪರಿಶೀಲಿಸಿದ ಡಿಸಿಪಿಐ ಚಂದ್ರಪಾಟೀಲ್ ಅವರು ಮುಖ್ಯಶಿಕ್ಷಕಿ ಹೂವಮ್ಮ ಮಲ್ನೋಟಕ್ಕೆ ಕರ್ತವ್ಯ ನಿರ್ಲಕ್ಷೃ ವಹಿಸಿರುವುದು ಹಾಗೂ ಸಾಕ್ಷಿಗಳ ನಾಶಪಡಿಸಲು ಪ್ರಯತ್ನಿಸಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶಿಸಿದ್ದಾರೆ.