ಬಂಡೀಪುರದ ಸಫಾರಿ ವಾಹನಗಳಿಗೆ ಅರಣ್ಯ ಇಲಾಖೆ ಡ್ಯಾಶ್‌ಬೋರ್ಡ್ ಕ್ಯಾಮರಾ ಅಳವಡಿಸಿರುವುದು.  
ಚಾಮರಾಜನಗರ

ಸಫಾರಿ ವಾಹನಗಳಿಗೆ ಡ್ಯಾಶ್‌ಬೋರ್ಡ್ ಕ್ಯಾಮರಾ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಎಲ್ಲ ವಾಹನಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಕ್ರಮ
  • 360 ಡಿಗ್ರಿಯಲ್ಲಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ
ಗುಂಡ್ಲುಪೇಟೆ: ಅರಣ್ಯ ಇಲಾಖೆ ಸಫಾರಿ ವಾಹನಗಳಿಗೆ ಡ್ಯಾಶ್‌ಬೋರ್ಡ್ ಕ್ಯಾಮರಾ ಅಳವಡಿಸುವ ಮೂಲಕ ವಾಹನಗಳನ್ನು ಕಣ್ಗಾವಲಿನ ವ್ಯಾಪ್ತಿಗೆ ತಂದಿದೆ.
ಅರಣ್ಯ ಪ್ರದೇಶದಿಂದ ಆನೆಗಳು ಹೊರಬರುವುದನ್ನು ಗುರುತಿಸಲು ಕೃತಕಬುದ್ಧಿಮತ್ತೆಯ ಕ್ಯಾಮರಾ ಅಳವಡಿಸುವ ಮೂಲಕ ತಾಂತ್ರಿಕತೆಯ ಸದುಪಯೋಗಕ್ಕೆ ಮುಂದಾಗಿರುವ ಅರಣ್ಯ ಇಲಾಖೆ ಪ್ರವಾಸಿ ವಾಹನಗಳಿಗೂ ಕ್ಯಾಮರಾ ಅಳವಡಿಸುವ ಮೂಲಕ ಸಫಾರಿಗೆ ಹೋಗುವ ಎಲ್ಲ ವಾಹನಗಳನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಕ್ರಮಕೈಗೊಂಡಿದೆ.
ಸೆ.1ರಿಂದ ಬಂಡೀಪುರದಲ್ಲಿ ಪೂರ್ಣಪ್ರಮಾಣದ ಸಫಾರಿ ಆರಂಭಿಸಿ 650 ರೂ. ಇದ್ದ ಶುಲ್ಕವನ್ನು ಒಂದು ಸಾವಿರಕ್ಕೇರಿಸಿದ ನಂತರ ಪ್ರವಾಸಿಗರಿಗೆ ಉತ್ತಮ ಅನುಭವ ಹಾಗೂ ಸುರಕ್ಷತೆ ನೀಡಲು ಮುಂದಾಗಿದೆ.
ಹೆಚ್ಚಿನ ಪ್ರವಾಸಿಗರು ಹುಲಿಗಳನ್ನು ನೋಡುವ ಸಲುವಾಗಿಯೇ ಬಂಡೀಪುರ ಸಫಾರಿಗೆ ಬರುತ್ತಿದ್ದಾರೆ. ಸಫಾರಿ ರಸ್ತೆಯ ಯಾವುದೇ ಸ್ಥಳದಲ್ಲಿ ಹುಲಿ ಚಿರತೆಗಳು ಕಂಡುಬಂದರೆ ವಾಹನಗಳ ಚಾಲಕರು ಪರಸ್ಪರ ಮಾಹಿತಿ ಹಂಚಿಕೊಳ್ಳುವ ಮೂಲಕ ಇತರ ವಾಹನಗಳಲ್ಲಿರುವ ಪ್ರವಾಸಿಗರನ್ನು ಅತ್ತಲೇ ಕರೆದೊಯ್ಯುತ್ತಾರೆ. ಇದರಿಂದ ಆ ಪ್ರದೇಶದಲ್ಲಿ ಹುಲಿ ಕಣ್ಮರೆಯಾಗುವವರೆಗೂ ಎಲ್ಲ ವಾಹನಗಳು ಗಂಟೆಗಟ್ಟಲೆ ಒಂದೇ ಕಡೆ ನಿಲ್ಲುತ್ತಿವೆ. ಈ ಸಂದರ್ಭದಲ್ಲಿ ವನ್ಯಜೀವಿಗಳ ಸಹಜ ಜೀವನ ಶೈಲಿಗೆ ಧಕ್ಕೆಯಾಗುತ್ತದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಫಾರಿ ವಾಹನಗಳಿಗೆ ಡ್ಯಾಶ್ ಬೋರ್ಡ್ ಕ್ಯಾಮರಾ ಅಳವಡಿಸಿದೆ. 360 ಡಿಗ್ರಿಯಲ್ಲಿನ ದೃಶ್ಯಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರುವ ಈ ಕ್ಯಾಮರಾಗಳಿಂದ ವಾಹನದ ಚಲನವಲನ, ಅದರ ಸುತ್ತಮುತ್ತಲಿನ ದೃಶ್ಯಗಳು, ಚಾಲಕ ಹಾಗೂ ಪ್ರವಾಸಿಗರನ್ನು ಕಮಾಂಡಿಂಗ್ ಸೆಂಟರ್‌ನಲ್ಲಿ ಮಾನಿಟರಿಂಗ್ ಮಾಡಲಾಗುತ್ತದೆ.
ಡ್ಯಾಶ್‌ಬೋರ್ಡ್ ಕ್ಯಾಮರಾಗಳನ್ನು ಅರಣ್ಯ ಇಲಾಖೆಯ ಮುಖ್ಯಕಚೇರಿಯಿಂದ ಕಳಿಸಲಾಗಿದೆ. ಇವುಗಳನ್ನು ಅಳವಡಿಸುವುದರಿಂದ ಸಫಾರಿಗೆ ಹೋಗುವ ಎಲ್ಲ ವಾಹನಗಳ ಪ್ರವಾಸಿಗರ ಸುರಕ್ಷತೆ, ಆಕಸ್ಮಾತ್ ಆನೆ ಮುಂತಾದ ಪ್ರಾಣಿಗಳು ದಾಳಿ ಮಾಡಿದರೆ ಕೂಡಲೇ ಸಹಾಯಕ್ಕೆ ತೆರಳಲು ನೆರವಾಗಲಿದೆ. ಜಂಗಲ್ ರೆಸಾರ್ಟ್ ಸಹ ಎಲ್ಲ ಸಫಾರಿ ವಾಹನಗಳಿಗೆ ಈಗಾಗಲೇ ಕ್ಯಾಮರಾ ಅಳವಡಿಸಿದೆ.
ಸತೀಶ್ ಕುಮಾರ್
ಗೋಪಾಲಸ್ವಾಮಿಬೆಟ್ಟ ವಲಯದ ಆರ್‌ಎಫ್‌ಒ